ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಸಕ್ರಮಕ್ಕೆ ಅರ್ಹತೆ ಪಡೆದಿದ್ದ ಮನೆಗಳು ಪ್ರಕೃತಿ ವಿಕೋಪದಡಿ ಹಾನಿಗೊಳಗಾಗಿದ್ದರೆ ಅಂತಹ ಮನೆಗಳಿಗೂ ಸಹ ನಿಯಮಾನುಸಾರ ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಹಾಗೂ ಬರ ಪರಿಹಾರ ಕಾಮಗಾರಿ ಪರಿಶೀಲನೆಯನ್ನು ಕೈಗೊಂಡ ಸಂದರ್ಭದಲ್ಲಿ ಜನ ಪ್ರತಿನಿಧಿಗಳು, ಸಂತ್ರಸ್ತರು ಹಾಗೂ ಅಧಿಕಾರಿಗಳು ಈ ವಿಷಯವನ್ನು ಸಚಿವರ ಗಮನಕ್ಕೆ ತಂದು ವಿನಂತಿಸಿದ್ದರು. ಇದಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ ಕಂದಾಯ ಸಚಿವರು ಈ ಬಗ್ಗೆ ಸರಕಾರದಿಂದ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದ ಹಲವು ಸಂತ್ರಸ್ತರು ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದು, ಇವರು ಅರ್ಹತೆ ಪಡೆದಿದ್ದಾಗ್ಯೂ ಪ್ರವಾಹದಲ್ಲಿ ಮನೆ ಕೊಚ್ಚಿ ಹೋದ ಪ್ರಯುಕ್ತ ಸೂಕ್ತ ಪರಿಹಾರ ದೊರಕದೆ ತೊಂದರೆಗೀಡಾಗಿದ್ದರು. ಈ ಆದೇಶದಿಂದಾಗಿ ಇಂತಹ ಸಂತ್ರಸ್ತರಿಗೆ ಅನುಕೂಲವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.
ಮುಂದುವರೆದು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಸಿ ಮತ್ತು 94 ಸಿಸಿ ಅಡಿ ಅರ್ಹವಿದ್ದರೆ ಸಿ ಮತ್ತು ಡಿ ವರ್ಗೀಕೃತ ಜಮೀನುಗಳಲ್ಲಿ ದಿನಾಂಕ 01-01-2015 ರ ಪೂರ್ವದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಮತ್ತು ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಸಿ ಮತ್ತು ಡಿ ವರ್ಗೀಕೃತ ಜಮೀನುಗಳಲ್ಲಿ ಬಗರ್ ಹುಕುಂ ಅಡಿ ಸಕ್ರಮೀಕರಣ ಕೋರಿ ಬಾಕಿ ಇರುವ ಅರ್ಜಿಗಳನ್ನು ಸಹ ವಿಲೇವಾರಿ ಮಾಡಲು ಆದೇಶಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸಿ ಮತ್ತು ಡಿ ವರ್ಗೀಕೃತ ಜಮೀನುಗಳಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗ್ಗೆ ಜಿಲ್ಲೆಯ ಜನ ಪ್ರತಿನಿಧಿಗಳು ಮೇಲ್ಕಂಡ ಪರಿಶೀಲನಾ ಸಭೆಯ ಸಂದರ್ಭದಲ್ಲಿ ಸಚಿವರ ಗಮನಕ್ಕೆ ತಂದು ಈ ಬಗ್ಗೆ ವಿನಂತಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.