ಕೆಟ್ಟ ಕಾರಣಕ್ಕಾಗಿ ಐತಿಹಾಸಿಕ ದಾಖಲೆಗೆ ಸೇರುವ ವ್ಯಕ್ತಿಗಳ ಉದಾಹರಣೆಗಳಿರುತ್ತವೆ. ಅಂತಹ ಒಂದು ಉದಾಹರಣೆ ಪ್ರಜ್ವಲ್ ರೇವಣ್ಣರದ್ದು. ಲೈಂಗಿಕ ಲಾಲಸೆಗೆ ಬಲಿ ಬಿದ್ದು ಜೀವನವನ್ನೇ ವ್ಯರ್ಥಗೊಳಿಸಿಕೊಂಡ ರಾಜಕಾರಣಿಯ ಉದಾಹರಣೆ ಇದು. ಆದರೆ ಇದಕ್ಕೆ ಕಾರಣವಾದದ್ದು ಮೌಲ್ಯಕ್ಕೆ ಅಂಟಿಕೊಂಡ ಸಂತ್ರಸ್ಥ ಮಹಿಳೆಯ ದಿಟ್ಟ ನಿಲುವು. ಆಕೆಯದ್ದು ಒಂದು ಅಸಾಧಾರಣ ಗೆಲುವು.
ಲೇಖನದ ಶಿರೋನಾಮೆಯಲ್ಲಿ ನಾನು ಪ್ರಜ್ವಲ್ ರೇವಣ್ಣ ಎಂತ ಬರೆಯಬೇಕಾಗಿತ್ತು. ಆದರೆ ಬರೆಯಲಿಲ್ಲ. ಏಕೆಂದರೆ ಪ್ರಜ್ವಲ್ ಸರಿಯಾಗಿ ಸಮಾಜೀಕರಣಗೊಳ್ಳದ ಒಂದು ಉತ್ಪನ್ನ. ಸಮಾಜೀಕರಣ ಮಾಡಬೇಕಾಗಿದ್ದವರು ಆತನ ಅಪ್ಪ ಅಮ್ಮ. ಆತ ರಾಜಕಾರಣಿ ಆದುದರಿಂದ ಅಜ್ಜ ಶ್ರೀ ದೇವೇಗೌಡರೂ ಆ ಕೆಲಸ ಮಾಡಬೇಕಾಗಿತ್ತು. ಆದರೆ ಮಾಡಿರುವಂತೆ ಕಾಣುವುದಿಲ್ಲ. ಏಕೆಂದರೆ ಅವರ ಮಗ ರೇವಣ್ಣರು ಕೂಡಾ ಅಂತಹದೇ ಒಂದು ಉತ್ಪನ್ನ. ಹಾಗಾಗಿ ಅವರು ತಮ್ಮ ಮಗನನ್ನು ಒಬ್ಬ ಸಜ್ಜನ ರಾಜಕಾರಣಿಯನ್ನಾಗಿ ಮಾಡಬೇಕೆಂದು ತಿಳಿಯಲಿಲ್ಲ. ಹೇಗಿದ್ದರೂ ಈ ಪರಂಪರೆ ಪ್ರಜ್ವಲ್ ತಲೆಮಾರಿನಲ್ಲೇ ಕೊನೆಗೊಂಡಿದ್ದು ಒಳ್ಳೇದಾಯಿತು. ಇಲ್ಲವಾಗಿದ್ರೆ ಇನ್ನು ಅಪಾಯಗಳ ಸರಣಿ ಮುಂದುವರಿಯುತ್ತಿತ್ತು. ಈ ಚರಮಗೀತೆ ಹಾಡುವಲ್ಲಿ ನ್ಯಾಯಾಲಯವೂ ಪಾತ್ರ ವಹಿಸಿರುವುದು ಈ ಕಾಲದಲ್ಲಿ ಒಂದು ವಿಶೇಷವೇ. ಏಕೆಂದರೆ ದುರ್ಬಲ ಸಾಕ್ಷಿಗಳ ನೆಪದಲ್ಲಿ ನ್ಯಾಯಾಲಯಗಳ ತೀರ್ಪುಗಳಲ್ಲಿ ಅಂತಿಮವಾಗಿ ಮೌಲ್ಯಗಳು ಸೋಲು ಕಾಣುತ್ತಿರುವ ಕಾಲದಲ್ಲಿ ನಾವಿದ್ದೇವೆ. ಹಾಗಾಗಿ ನ್ಯಾಯ ವ್ಯವಸ್ಥೆಗೆ ಗೌರವ ತಂದ ಉದಾಹರಣೆಯಾಗಿ ಈ ತೀರ್ಪು ಇತಿಹಾಸದಲ್ಲಿ ದಾಖಲಾಗುತ್ತದೆ.
ಈ ಪ್ರಕರಣ ನಿಜಕ್ಕೂ ಸಂಕೀರ್ಣವಾದುದು. ವಿವಾಹಿತನಾಗಿ ಮಕ್ಕಳನ್ನು ಪಡೆಯುವ ಪ್ರಾಯಪ್ರಬುದ್ಧ ವ್ಯಕ್ತಿ ಅವಿವಾಹಿತನಾಗಿ ಉಳಿದದ್ದೇ ಈ ಅಪ್ರಬುದ್ಧತೆಗೆ ಒಂದು ಕಾರಣವಾಗಿರಬೇಕು. ಆತನದ್ದೇನೂ ಮದುವೆಗೆ ಹೆಣ್ಣು ಸಿಗದ ಕುಟುಂಬವಾಗಿರಲಿಲ್ಲ. ಮದುವೆ ಮಾಡುವ ಕರ್ತವ್ಯ ನಿರ್ವಹಿಸದೆ ಆತನನ್ನು ಸಂಸದನಾಗಿ ಮಾಡಿದ ಹೆತ್ತವರ ಕರ್ತವ್ಯಚ್ಯುತಿಯೂ ಇಲ್ಲಿ ಗಮನೀಯವೆಂದು ನನಗೆ ಅನಿಸುತ್ತದೆ. ಪ್ರಾಯಪ್ರಬುದ್ಧನಾದ ಯುವಕನಿಗೆ ಹೆಣ್ಣಿನ ಗೀಳು ಹಚ್ಚಿಕೊಳ್ಳದ ಹಾಗೆ ನಿಯಂತ್ರಿಸುವ ಆತನ ಹೆಂಡತಿಯ ಸ್ಥಾನವನ್ನು ತುಂಬಿಸುವ ಕೆಲಸವನ್ನು ಹಿರಿಯರು ಮಾಡಬೇಕಾಗಿತ್ತು. ಆ ಕೆಲಸ ಮಾಡಿದ್ದರೆ ಸಾಮಾಜಿಕ ವಲಯದಲ್ಲಿ ಪ್ರಜ್ವಲ್ ಬೇರೆಯೇ ರೀತಿಯಲ್ಲಿ ತಮ್ಮ ಕರ್ತವ್ಯ ಮತ್ತು ಗೌರವವನ್ನು ನಿಭಾಯಿಸುವ ಸಾಧ್ಯತೆ ಇತ್ತು. ಅದು ಇಡೀ ಕುಟುಂಬದ ರಾಜಕೀಯ ಪರಂಪರೆಯ ಕೊಂಡಿಯಾಗಿ ಸ್ಥಿರತೆಯನ್ನು ಕೊಡಬಹುದಾಗಿತ್ತು. ಆದರೆ ಹೋದರೆ ಎಂಬ ಇದೆಲ್ಲವೂ ಈಗ ಊಹನೆಗೆ ಉಳಿದು ಬಿಟ್ಟಿದೆ!
ಪ್ರಸ್ತುತ ನಡೆದಿರುವ ಪ್ರಕರಣವನ್ನು ನೋಡಿದರೆ ಅಪರಾಧಿ ಪ್ರಜ್ವಲ್ ನ್ಯಾಯಾಲಯದಲ್ಲಿ ಹೇಳಿರುವ ಒಂದು ಮಾತು ಗಮನೀಯವಾದುದು. ಆತನು ತಾನು ರೇಂಕ್ ಸ್ಟುಡೆಂಟ್ ಎಂದಿರುವುದಕ್ಕಿಂತಲೂ ಮುಖ್ಯವಾಗಿ ತನಗೆ ಬಹು ಬೇಗನೆ ಅಧಿಕಾರ ಸಿಕ್ಕಿದ್ದೇ ಪ್ರಮಾದವಾಯಿತೆಂಬ ಉದ್ಗಾರ ಪ್ರಜ್ವಲ್ ಮಾತಿನಲ್ಲಿತ್ತು. ಆದರೆ ಈ ಎಚ್ಚರ ಮೂಡುವ ಹೊತ್ತಿಗೆ ಜೀವಮಾನ ಪೂರ್ತಿ ಕಳೆಯಬೇಕಾದ ಕಾರಗೃಹದ ಬಾಗಿಲು ತೆರೆದಿತ್ತು.
ಬಹು ಬೇಗನೇ ಅಧಿಕಾರ ಸಿಕ್ಕಿದ್ದೆಂದರೂ ಅದು ತಪ್ಪಾಗುತ್ತದೆ. ಏಕೆಂದರೆ ಪ್ರಜ್ವಲ್‍ಗೆ ಅಧಿಕಾರ ಸಿಕ್ಕಿದ್ದಲ್ಲ. ಅದು ವಾಸ್ತವದಲ್ಲಿ ದಯಪಾಲಿಸಲ್ಪಟ್ಟದ್ದು. ಅದೂ ತನ್ನ ಹಿರಿಯರಿಂದ ಕುಟುಂಬದ ಆಸ್ತಿಯೆಂಬಂತೆ ನೀಡಲ್ಪಟ್ಟ ಬಹುಮಾನದಂತೆ ಸಿಕ್ಕಿತ್ತು. ಸಂಸದನಾಗಿ ತಾನು ಏನು ಮಾಡಬೇಕು, ಹೇಗೆ ನಿರ್ವಹಿಸಬೇಕೆಂಬ ಪಾಠವೂ ಇಲ್ಲದೆ ಲಭಿಸಿತ್ತು. ಹಾಗಾಗಿಯೇ ಹಾಸನದಲ್ಲಿ ಜನಸಾಮಾನ್ಯರಷ್ಟೇ ಅಲ್ಲ, ಸ್ವಪಕ್ಷೀಯರೂ ಕೂಡಾ ಪ್ರಜ್ವಲ್ ಜನಪ್ರತಿನಿಧಿಯಾಗಿ ತಮ್ಮ ಅಹವಾಲುಗಳನ್ನು ಕೇಳಲು ಸಿಗುತ್ತಿರಲಿಲ್ಲವೆಂದು ಈಗ ಮುಕ್ತವಾಗಿ ಹೇಳುತ್ತಿದ್ದಾರೆ. ಜನಪ್ರತಿನಿಧಿಯಾಗಿದ್ದಾಗ ಪ್ರಜ್ವಲ್‍ನ್ನು ಟೀಕಿಸಲು ಧೈರ್ಯವಿಲ್ಲದವರು ಈಗ ಧೈರ್ಯ ತಾಳಿದ್ದಾರೆ. ಆದರೆ ಈ ಧೈರ್ಯ ಇನ್ನೇನು ಪ್ರಯೋಜನ ಎಂಬಂತಾಗಿದೆ!
ಮೌಲ್ಯಗಳನ್ನು ನೆಚ್ಚಿಕೊಂಡು ಯಶಸ್ಸನ್ನು ಗಳಿಸಲು ಸಾಧ್ಯವಿಲ್ಲ ಎಂಬಂತಹ ಕಾಲ ಇದು. ವರ್ಷಗಳು ಉರುಳಿದಂತೆ ಮೌಲ್ಯಗಳು ಹಳಸಲಾಗುತ್ತಿವೆ. ಲಂಚವಿಲ್ಲದೆ ತಮ್ಮ ಕೆಲಸಗಳಾಗಬೇಕೆಂಬ ಮೌಲ್ಯವನ್ನು ಹೊಂದಿದ್ದವರು ಈಗ ಅದನ್ನು ಅನಿವಾರ್ಯವೆಂದು ಒಪ್ಪುವಕಾಲ ಬಂದಿದೆ. ಲಂಚ ಕೊಟ್ಟಾದರೂ ಸರಿ, ಒಮ್ಮೆ ತಮ್ಮ ಕೆಲಸವಾಗಲಿ ಎಂಬ ಮೃದುತ್ವ ಹೊಂದಿದ್ದಾರೆ. ಕೆಲವರಂತೂ ತಮ್ಮ ನೀತಿಯನ್ನು ಬದಲಿಸಿಕೊಂಡಿದ್ದಾರೆ. ಅವರ ಪ್ರಕಾರ ಕೊಡಬೇಕಾದಲ್ಲಿ ಕೊಡಲು ಮಧ್ಯವರ್ತಿಗಳನ್ನು ಬಿಡುವುದು. ತಮ್ಮ ಕೆಲಸವನ್ನು ತಮ್ಮ ಇಷ್ಟದಂತೆ ಮಾಡುತ್ತ ಸಾಗುವುದು! ಇನ್ನೊಂದು ಉದಾಹರಣೆ ಹೀಗಿದೆ: ಕೆಲವು ಹಿರಿಯರು ಹಿಂದಿನಂತೆ ತಮ್ಮೆಲ್ಲ ಆಸ್ತಿಯನ್ನು ಮಕ್ಕಳಿಗೆ ಹಂಚಿ ಬಿಡುವುದಿಲ್ಲ. ಉಸಿರಿರುವವರೇಗೂ ತಮ್ಮ ಪಾಲಿಗೆ ಒಂದಿಷ್ಟಾದರೂ ಮನೆ, ಆಸ್ತಿ, ಠೇವಣಿಗಳನ್ನು ಇಟ್ಟುಕೊಳ್ಳತೊಡಗಿದ್ದಾರೆ. ಮನೆಗಳಲ್ಲಿ ಹೆತ್ತವರು ಮಕ್ಕಳಿಗೆ ಹೆದರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಲ ಬಂದಿದೆ. ಶಾಲೆಯಲ್ಲಿ ಶಿಸ್ತಿಗಾಗಿಯೂ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ನೀಡುತ್ತಿಲ್ಲ. ಏಕೆಂದರೆ ಮರುದಿನ ಮಕ್ಕಳ ಪೋಷಕರು ಅವರನ್ನು ವಿಚಾರಿಸಲು ಬರಬಹುದೆಂಬ ಭಯ ಶಿಕ್ಷಕರನ್ನು ಕಾಡುತ್ತದೆ. ಇನ್ನು ಪರೀಕ್ಷೆಗಳಲ್ಲಿ ಅಕ್ರಮ, ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗುವುದು, ನಕಲಿ ಅಂಕಪಟ್ಟಿಗಳ ಪೂರೈಕೆ, ಎಸ್,ಸಿ, ಎಸ್.ಟಿ ಮಿಸಲಾತಿ ಅಡಿಯಲ್ಲಿ ನೇಮಕಾತಿ ಗಳಿಸುವುದು ಇತ್ಯಾದಿ ಅಕ್ರಮಗಳು ಸಹಜ ಎನ್ನಿಸಿವೆ. ಪಂಚಾಯತ್‍ನಿಂದ ಶಾಸಕರವರೆಗೆ ಜನಪ್ರತಿನಿಧಿಗಳು ಲಂಚ ಪಡೆಯುವುದು, ನಿಗಮ ಮಂಡಳಿಗಳ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಬೇಕಾಬಿಟ್ಟಿ ಆರ್ಥಿಕ ಅಕ್ರಮಗಳನ್ನು ನಡೆಸುವುದು, ಇಂಜಿನಿಯರ್‍ಗಳು ಬಿಲ್ ಪಾಸ್ ಮಾಡಲು ಕಮಿಶನ್ ಪಡೆಯುವುದು, ಬೇಂಕ್‍ಗಳಲ್ಲಿ ಲಕ್ಷಾಂತರ ಹಣದ ಗೋಲ್‍ಮಾಲ್, ಕಳಪೆ ಡಾಮರ್ ಮತ್ತು ಸೇತುವೆಗಳು ಅರ್ಹತೆಯ ಸರ್ಟಿಫಿಕೇಟ್ ಪಡೆಯುವುದು ಇದೆಲ್ಲವೂ ಸಾಮಾನ್ಯ ಎನ್ನುವ ಮಟ್ಟಿಗೆ ನಮ್ಮ ಮನೋಧರ್ಮ ಬದಲಾಗಿದೆ.
ಇನ್ನು ದಾಂಪತ್ಯ ನಿಷ್ಠೆಯನ್ನು ಮುರಿದು ಅಕ್ರಮ ಸಂಬಂಧಗಳಿಗೆ ಬಲಿ ಬೀಳುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರಾಯ ಮತ್ತು ಕುಟುಂಬದ ಹೊಣೆಗಾರಿಕೆಯ ಪ್ರಜ್ಞೆ ಇಲ್ಲದೆ ಯುವಕ ಯುವತಿಯರು ಪ್ರೀತಿಸಿ, ದೈಹಿಕ ಸಂಬಂಧವನ್ನು ಬೆಳೆಸಿ ಮತ್ತೆ ತ್ಯಜಿಸುವುದು, ಇತರರಿಗೆ ನ್ಯಾಯದ ಮಾತುಗಳನ್ನು ಹೇಳಿದರೂ ತಮ್ಮವರೇ ತಪ್ಪು ಮಾಡಿದಾಗ ನ್ಯಾಯವನ್ನು ಒದಗಿಸುವಲ್ಲಿ ಪೋಷಕರು ಹಿಂದೆ ಸರಿಯುವುದು, ಇಷ್ಟಾದ ಬಳಿಕವೂ ಸಾಮಾಜಿಕ ಸಾಮುದಾಯಿಕ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಏನೂ ಆಗದವರಂತೆ ಭಾಗವಹಿಸುವುದನ್ನು ಕಾಣುತ್ತಿದ್ದೇವೆ. ಬಾಲ್ಯದಲ್ಲೇ ಕಲಿಯಬೇಕಾದ ಸತ್ಯ, ನ್ಯಾಯ, ಮರ್ಯಾದೆ, ಕರುಣೆ, ಸಮಾನತೆ, ಸಹಕಾರ ಮುಂತಾದ ಮೌಲ್ಯಗಳ ಅಭ್ಯಾಸವು ಈಗ ಮರೆಯಾಗಿದೆ. ಕದಿಯುವುದು, ದೋಚುವುದು, ತನ್ನದಲ್ಲದ್ದನ್ನು ಇಟ್ಟುಕೊಳ್ಳುವುದು, ಹಂಗಿಸುವುದು, ಲೇವಡಿ ಮಾಡುವುದು, ಗುರುಹಿರಿಯರ ಬಗ್ಗೆ ಅಸಭ್ಯ ನಡವಳಿಕೆಗಳು ಸಾಮಾನ್ಯವೆನ್ನಿಸಿವೆ. ಇಂತಹ ಸಾಮಾಜಿಕ ಪರಿಸರದಲ್ಲಿ ಬೆಳೆದ ಮಕ್ಕಳು ಮೌಲ್ಯಗಳನ್ನು ಅವಗಣಿಸುತ್ತಾರೆ. ಪ್ರಾಯಶಃ ಪ್ರಜ್ವಲ್ ಕೂಡಾ ಇಂತಹ ಪರಿಸರದ ಪ್ರಭಾವದಿಂದಾಗಿ ಸಂಸದನಾದರೂ ತನ್ನ ಕರ್ತವ್ಯಗಳೇನು ಎಂಬುದನ್ನು ತಿಳಿದುಕೊಳ್ಳಲಿಲ್ಲ. ಇದನ್ನೆಲ್ಲ ಗೊತ್ತಿದ್ದ ಹಿರಿಯರೇ ಮನೆಯಲ್ಲಿದ್ದರೂ ಅವರಿಂದ ಅದನ್ನು ತಿಳಿದುಕೊಂಡಿಲ್ಲ! ಬದಲಾಗಿ ಆತ ಅಧಿಕಾರ ಎಂದರೆ ಒಂದು ಆಯುಧದಂತೆ ಬಳಸಿದ್ದಕ್ಕೆ ಸಾಕ್ಷಿಗಳು ಸಿಕ್ಕಿವೆ.
ಸುಮಾರು 60-70 ರ ದಶಕದಲ್ಲಿ ದೇವೇಗೌಡರು ರಾಜಕೀಯವಾಗಿ ಹೆಚ್ಚಿನ ಗೌರವ ಪಡೆದವರಾಗಿದ್ದರು. ನನ್ನ ತಂದೆಯವರು ಪತ್ರಿಕೆಯನ್ನೋದಿ ದೇವೇಗೌಡರ ಹಿರಿಮೆಯನ್ನು ಹೇಳುತ್ತಿದ್ದರು. ಅವರು ಶಾಸನ ಸಭೆಯಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದ ವಿವರಗಳನ್ನು ಪತ್ರಿಕೆಯಿಂದಲೇ ಓದಿ ನಮಗೆ ಹೇಳುತ್ತಿದ್ದರು. ಆಗ ಟಿ.ವಿ ಮತ್ತು ಮೊಬೈಲ್ ಇರಲಿಲ್ಲ. ಪತ್ರಿಕೆಗಳು ಮಾತ್ರ ಮಾಹಿತಿಯ ವಾಹಿನಿಗಳಾಗಿದ್ದುವು. ಸನ್ಮಾನ್ಯ ದೇವೇಗೌಡರು ತಮ್ಮ ಯುವಾವಸ್ಥೆಯಲ್ಲಿ ಅರ್ಥಪೂರ್ಣವಾಗಿ ರಾಜಕಾರಣ ಮಾಡಿದವರಾಗಿದ್ದರು. ಅವರು ಸಾಕಷ್ಟು ನಡೆದು ಹಳ್ಳಿಗಳನ್ನು ಕಂಡವರೂ, ತಳಮಟ್ಟದ ವ್ಯವಸ್ಥೆಗಳಲ್ಲಿ ರಾತ್ರೆ ಹಗಲು ಕಳೆದವರೂ, ಜನರ ಕಷ್ಟಗಳಿಗೆ ಕಿವಿಯಾಗಿ ಸಂಕಷ್ಟಗಳನ್ನು ನಿವಾರಿಸುವವರೂ ಆಗಿದ್ದರು. ಅವರ ಈ ಚರಿತ್ರೆಯೇ ಅವರನ್ನು ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿತು. ಪ್ರಜ್ವಲ್ ತನ್ನ ಅಜ್ಜನ ರಾಜಕೀಯ ಪಯಣವನ್ನು ತಿಳಿದುಕೊಂಡು ಅವರಿಂದಲೇ ಪಾಠ ಹೇಳಿಸಿಕೊಂಡು ಸಂಸದನಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಸಾಕಿತ್ತು. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ಯೋಗ್ಯತೆ ಬೆಳೆಸಿಕೊಳ್ಳುವ ಯೋಗ ಪ್ರಜ್ವಲ್‍ಗೆ ಇದ್ದರೂ ಆತ ಆ ದಿಸೆಯಲ್ಲಿ ಯತ್ನಿಸಲಿಲ್ಲ. ಸದ್ಯ ಹಾಸನ ಕ್ಷೇತ್ರದ ಜನರೇ ಹೇಳುವಂತೆ ಆತ ಅಧಿಕಾರ ಮತ್ತು ಸೌಲಭ್ಯಗಳ ದುರುಪಯೋಗಪಡಿಸಿಕೊಂಡು ಅಪರಾಧಗಳನ್ನು ಮಾಡಿದ. ಈ ಅಪರಾಧಗಳಲ್ಲಿ ಧ್ವನಿ ಎತ್ತಲಾಗದೆ ಶೋಷಣೆಗೆ ಪಕ್ಕಾದವರು ಎಷ್ಟಿದ್ದಾರೋ ಏನೋ! ಆಧುನಿಕ ಸೌಲಭ್ಯವಾದ ಮೊಬೈಲ್‍ನಲ್ಲೇ ವೀಡಿಯೊ ಮಾಡುವ ತಾಂತ್ರಿಕತೆಯನ್ನು ಆತ ತನ್ನೊಡನೆ ಲೈಂಗಿಕತೆಯಲ್ಲಿ ಬಳಕೆಯಾದವರನ್ನು ಬ್ಲೇಕ್‍ಮೇಲ್ ಮಾಡಲು ಉಪಯೋಗಿಸುತ್ತಿದ್ದ. ಆದರೆ ಇನ್ನೊಬ್ಬರ ಕೊರಳಿಗೆ ಇಟ್ಟ ಉರುಳು ತನಗೇ ಮೃತ್ಯುಪಾಶ ಆಗಿರುವುದು ವಿಧಿವಿಪರ್ಯಾಸವಲ್ಲದೆ ಮತ್ತೇನು! ಪ್ರಜ್ವಲ್‍ಗೆ ತಕ್ಷಣದ ಫಾಶಿ ಶಿಕ್ಷೆ ಆಗದಿದ್ದರೂ ಸಾಯುವ ತನಕವೂ ಜೈಲಿನಲ್ಲೇ ಕೊಳೆಯ ಬೇಕೆಂಬುದು ಒಂದು ರೀತಿಯಲ್ಲಿ ಮೃತ್ಯುಪಾಶವೇ ತಾನೇ?
ಇಷ್ಟಾದರೂ ಆಗಿರುವುದರ ಹಿಂದೆ ಸಂತೃಸ್ಥೆಯೊಬ್ಬಳು ತನ್ನ ಹೇಳಿಕೆಗಳಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆಗಳನ್ನು ಮಾಡದೇ ಒಂದೇ ಮಾತಿಗೆ ಬದ್ಧಳಾಗಿ ಅಚಲವಾಗಿ ನಿಂತದ್ದು ವಿಶೇಷವೇ ಸರಿ. ಏಕೆಂದರೆ ಸಾಕ್ಷ್ಯನಾಶ, ದೂರುದಾರರ ಹೇಳಿಕೆಗಳಲ್ಲಿ ದ್ವಂದ್ವ ಹಾಗೂ ಬದಲಾವಣೆಗಳು, ಸುಳ್ಳು ಸಾಕ್ಷಿಗಳನ್ನು ಎದುರು ತರುವುದು ಇತ್ಯಾದಿಗಳನ್ನು ಮಾಡುವಷ್ಟು ಆರೋಪಿ ಬಲೀಯರಿದ್ದರು. ಆದರೂ ಸಂತ್ರಸ್ಥೆ ಸ್ಥಿರವಾಗಿ ನಿಂತದ್ದು ಈ ವಿಚಾರಣೆಯಲ್ಲಿ ಆರೋಪಿತರು ದೋಷಿಯೆಂದು ತೀರ್ಮಾನಿಸಲು ಸಹಾಯವಾಯಿತು ಎಂಬುದನ್ನು ನ್ಯಾಯವಾದಿಗಳೇ ಹೇಳಿದ್ದಾರೆ. ಅಂದರೆ ಆಕೆ ಮೌಲ್ಯಕ್ಕೆ ಅಂಟಿ ನಿಂತದ್ದು ಈ ಐತಿಹಾಸಿಕ ತೀರ್ಪಿಗೆ ಕಾರಣವಾಯಿತು ಎಂಬುದು ನಿರ್ವಿವಾದ. ಆಕೆಯ ಈ ಗಟ್ಟಿ ನಿರ್ಧಾರವು ನಮ್ಮ ಸಮಾಜದಲ್ಲಿ ಆಕೆಯ ಮುಂದಿನ ಗೌರವಯುತ ಬದುಕಿಗೆ ಮುಳುವಾಗದಿರಲಿ ಎಂಬುದು ನನ್ನ ಆಶಯ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಕೆಯನ್ನು ಗೌರವದಿಂದ ಕಾಣಲಿ. ನ್ಯಾಯ ಸಿಕ್ಕಿದ ಸಂತೋಷವನ್ನು ನಗರಗಳ ಬೀದಿಗಳಲ್ಲಿ ಪ್ರದರ್ಶಿಸಿದ ಮಹಿಳೆಯರು ಸಂತ್ರಸ್ಥ ಮಹಿಳೆಯರ ರಕ್ಷಣೆಗೆ ಒದಗಲಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

