ಗಾಢಾಂಧಕಾರದ ಚಪ್ಪರ ಬೆಳಗುತ್ತಿದ್ದ ಗ್ಯಾಸುಲೈಟು ಎಂಬ ಮಸುಕುಮಸುಕಾದ ನೆನಪು….!

November 29, 2023
12:46 PM

ಪಾಕಶಾಲೆಯಲ್ಲಿ ಹೋಳಿಗೆ ಬೇಯಿಸುವವರ ನೆರವಿಗೆ ಇಡಲಾಗುತ್ತಿತ್ತು. ನಡು ನಡುವೆ ಗ್ಯಾಸ್ ಕಮ್ಮಿ ಆದರೆ ಗಾಳಿ ತುಂಬಿಸಬೇಕಿತ್ತು. ಪೆಟ್ರೋಮ್ಯಾಕ್ಸ್(Petromax) ಹೊತ್ತೊಯ್ಯುವಾಗ ಅದರ ಮೆಂಟಲ್ ತುಂಡಾಗದ ಹಾಗೆ ಜೋಪಾನ ಮಾಡಬೇಕಿತ್ತು. ಅಷ್ಟೆಲ್ಲ ಮಾಡಿ ಗಂಟೆಗಟ್ಟಲೆ ಉರಿಯುವ ಗ್ಯಾಸ್ ಲೈಟ್(Gas Light) ಅಷ್ಟೂ ಕತ್ತಲಿನ ಮನೆಯ ಸುತ್ತಲಿನ ಅಂಧಕಾರ ತೊಲಗಿಸಿ ಒಂದು “ಸಂಭ್ರಮದ ಕ್ಷಣಗಳನ್ನು” ಹೊತ್ತಿಸಿಕೊಡುತ್ತಿದ್ದುದು, ಮನಸ್ಸಿನಲ್ಲಿ ಸಮಾರಂಭದ ಉತ್ಸಾಹ ತುಂಬುತ್ತಿದ್ದುದ್ದು ಅಕ್ಷರಶಃ ಸತ್ಯ.

Advertisement

ದಿನಾಲೂ ಚಿಮಿಣಿ ದೀಪ, ಲಾಟೀನು ಬೆಳಕನ್ನೇ ಕಂಡವರ ಪಾಲಿಗೆ ಪೆಟ್ರೋಮ್ಯಾಕ್ಸು ಒಂದು ಚಮತ್ಕಾರದ ಹಾಗೆ, ಹೊಗೆ ರಹಿತ ದೀಪದ ಹಾಗೆ, ಹತ್ತಿರದಲ್ಲೇ ಕುಳಿದರೆ ಚಳಿ ಓಡಿಸುವ ಹೀಟರಿನ ಹಾಗೆಯೂ ಅನ್ನಿಸ್ತಾ ಇತ್ತು. ವರ್ಷ ಉರುಳಿದಂತೆ ಅದರ ಗಾಜುಗಳು ಬಿರುಕು ಬಿಡುವುದು, ಅದರ ಹಿಡಿ, ಬಾಡಿಗೆ ತುಕ್ಕು ಹಿಡಿಯುವುದು, ಅಲ್ಯುಮಿನಿಯಂ ಲೇಪನ ಜಾರುವುದು, ಗಾಳಿ ಹಾಕುವಾಗ “ಲಟಪಟ” ಸದ್ದು ಬರುವುದೆಲ್ಲ ಮಾಮೂಲಿಯೇ ಬಿಡಿ.

ಸಮಾರಂಭಗಳನ್ನು ಬಿಟ್ಟರೆ ಗ್ಯಾಸ್ ಲೈಟ್ ಕಾಣ್ತಾ ಇದ್ದದ್ದು, ದೇವಸ್ಥಾನದ ಜಾತ್ರೆಗಳು ಹಾಗೂ ಯಕ್ಷಗಾನದ ರಂಗಸ್ಥಳಗಳಲ್ಲಿ. ಟ್ಯೂಪ್ ಲೈಟ್ ಪ್ರವರ್ಧಮಾನಕ್ಕೆ ಬರುವವರೆಗೂ ದೇವರ ಉತ್ಸವ ಬಲಿ, ಜಳಕದ ಸವಾರಿ, ರಥೋತ್ಸವದ ಸಂದರ್ಭ ದೇವರ ಬಲಿ ಸವಾರಿಯ ಶಿಷ್ಟಾಚಾರದಲ್ಲಿ ಅಕ್ಕ ಪಕ್ಕ ಸಾಲು ಸಾಲು ಪೆಟ್ರೋಮ್ಯಾಕ್ಸ್ ಹೊತ್ತವರು ಕಾಣಿಸುತ್ತಿದ್ದರು. ಮಂಗಳೂರಿನ ಶರವು ದೇವಸ್ಥಾನದ ದೇವರ ಪೇಟೆ ಸವಾರಿ ಹೋಗುವಾಗ ತೀರಾ ಇತ್ತೀಚಿನವರೆಗೂ ಒಂದು ಸಂಪ್ರದಾಯವೋ ಎಂಬ ಹಾಗೆ ತಲೆಯಲ್ಲಿ ಗ್ಯಾಸ್ ಲೈಟ್ ಹೊತ್ತ ಮಂದಿ ಕಾಣಿಸುತ್ತಿದ್ದರು.

ಕಟೀಲು ಯಕ್ಷಗಾನ ಮೇಳದಲ್ಲಿ ಕೆಲ ವರ್ಷಗಳ ಹಿಂದಿನವರೆಗೂ ವಿದ್ಯುದ್ದೀಪ ಇದ್ದರೂ ಒಂದು ಸಂಪ್ರದಾಯದ ಹಾಗೆ ರಂಗಸ್ಥಳದ ಪಕ್ಕ ಬೆಳಗ್ಗಿನವರೆಗೂ ಪೆಟ್ರೋಮ್ಯಾಕ್ಸ್ ತೂಗು ಹಾಕುತ್ತಿದ್ದದ್ದು ಸರಿಯಾಗಿ ನೆನಪಿದೆ. ಕರೆಂಟು, ಜನರೇಟರು ಸಡನ್ ಕೈಕೊಟ್ಟರೂ ಪೆಟ್ರೋಮ್ಯಾಕ್ಸ್ ಕೈಕೊಡುವುದಿಲ್ಲ ಎಂಬ ನಂಬಿಕೆ ಇದಕ್ಕೆ ಕಾರಣ ಇರಬಹುದು. ಮತ್ತೆ ವರ್ಷಕ್ಕೊಮ್ಮೆ ಮನೆಗೆ ಬರುವ ನಗರ ಭಜನೆಯವರು ಕೂಡಾ ತೋಟದ ಕಂಗಿನ ಮರಗಳೆಡೆಯಲ್ಲಿ ಪೆಟ್ರೋಮ್ಯಾಕ್ಸ್ ಹಿಡ್ಕೊಂಡು ದೂರದಿಂದಲೇ ಬರುವುದು ಕಾಣಿಸ್ತಾ ಇದ್ದದ್ದೂ ನೆನಪಿದೆ.

ಒಂದು ಲಾಟೀನು, ಒಂದು ಇನ್ ಲ್ಯಾಂಡ್ ಲೆಟರು, ಒಂದು ಟೈಪುರೈಟರ್, ಉದ್ದದ ದೋಡ್ಡ ಟಾರ್ಚು, ಬ್ಲಾಕ್ ಆಂಡ್ ವೈಟು ಟೀವಿಗಳ ಹಾಗೆ ಗ್ಯಾಸ್ ಲೈಟ್ ಇಂದು ಕಣ್ಣೆದುರಿಗೆ ಕಾಣಿಸುವ ವಸ್ತುವಲ್ಲ. ವಸ್ತು ಪ್ರದರ್ಶನದಲ್ಲಿ ಜಾಗ ಗಿಟ್ಟಿಸಿಕೊಂಡ ಇಂದಿನ ಮಕ್ಕಳಿಗೆ ಅರ್ಥವೇ ಆಗದ ಸಾಧನವಾಗಿ ಇತಿಹಾಸ ಸೇರಿದೆ. ಮೊಬೈಲಿನಲ್ಲೇ ಎಲ್ಲವೂ ಆಗುವ ಈ 5G ಯುಗದಲ್ಲಿ ಗ್ಯಾಸ್ ಲೈಟ್ ಏನು ಮಹಾ ಎಂಬ ಭಾವ ಹಾಸುಹೊಕ್ಕಾಗಿದೆ. ಅಂದು ಗ್ಯಾಸ್ ಲೈಟ್ ಹೊತ್ತಿಸಿ ಹೀರೋಗಳಾಗಿದ್ದ ಮಂದಿಗೆ ಇಂದು ಅದನ್ನು ಉರಿಸುವುದು ಮರೆತೇಹೋಗಿರಬಹುದು ಎಂಬ ಶಂಕೆಯೂ ಇದೆ!

Advertisement

ಕರೆಂಟು, ಸಾರಣೆ, ಟಿ.ವಿ., ಫೋನ್, ಮೊಬೈಲು, ಕಂಪ್ಯೂಟರು ಎಂಥದ್ದೂ ಇರದಿದ್ದ ಬಾಲ್ಯದ ಚಂದದ ನೆನಪಿನ ಪುಟಗಳಲ್ಲಿ ಒಂದು ಗ್ಯಾಸುಲೈಟು… ಅದರ ಪ್ರಖರ ಬೆಳಕಿನ ಹಾಗೆ ನೆನಪು ಇಂದಿಗೂ ಅಷ್ಟೇ ಗಾಢವಾಗಿ ಕಾಡುತ್ತಿದೆ… ಕಾಲದ ಅನಿವಾರ್ಯ ಬದಲಾವಣೆಯ ತಿರುಗಾಟದಲ್ಲಿ ತನ್ನ ಪ್ರದರ್ಶನ ಮುಗಿಸಿ ನೇಪಥ್ಯ ಸೇರಿದೆ. ಅಲ್ಲಲ್ಲಿ ಸರ್ಕಲ್ಲುಗಳಲ್ಲಿ ಹೊಸ ಹೊಸ ಹೈಮಾಸ್ಟ್ ದೀಪಗಳು ಉದ್ಘಾಟನೆಯಾಗಿ ಪ್ರಖರ ಬೆಳಕು ಸೂಸುವಾಗಲೆಲ್ಲ ಚಪ್ಪರದಡಿ ಕೀಟಗಳನ್ನು ಆಕರ್ಷಿಸಿ, ಸುತ್ತ ಗಾಢ ಬೆಳಕು ಹೊತ್ತು ಇರುಳು ಹಗಲಾಗಿಸುತ್ತಿದ್ದ ದಿನಗಳ ಚಂದದ ನೆನಪುಗಳು ಮತ್ತೆ ಮರುಕಳಿಸುತ್ತವೆ! ತಾನು ಉರಿದು ಭಸ್ಮವಾದರೂ ಜಗತ್ತಿಗೆ ಬೆಳಕು ಕೊಡ್ತಾ ಇದ್ದ ಸಾಧನವನ್ನು ಮೆಂಟಲ್ ಅಂತ ಕರೆಯುತ್ತಿದ್ದರು ಎಂದು ಇತ್ತೀಚೆಗೆ ಹರಿದಾಡುತ್ತಿದ್ದ ಜೋಕು ಕೂಡಾ ಕಾಡುತ್ತದೆ…!

ಬರಹ :
ಕೃಷ್ಣಮೋಹನ ತಲೆಂಗಳ

(ಕೃಷ್ಣಮೋಹನ ತಲೆಂಗಳ ಅವರು ಪೇಸ್‌ಬುಕ್‌ನಲ್ಲಿ  ಬರೆದ ಬರಹದ ಯಥಾವತ್ತಾದ ರೂಪ )

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಮೇಘಸ್ಫೋಟ | ಮೇಘಸ್ಫೋಟದಿಂದ ದಿಢೀರ್ ಪ್ರವಾಹ-ಭೂಕುಸಿತ
August 31, 2025
10:08 PM
by: The Rural Mirror ಸುದ್ದಿಜಾಲ
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ವಿಮೆ | ಬೆಳೆ ವಿಮೆಯಿಂದಾಗಿ ರೈತರಲ್ಲಿ ಸಂತಸ
August 31, 2025
9:59 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 31-08-2025 | ವಾಯುಭಾರ ಕುಸಿತ – ಸೆ.2 ರಿಂದ ಎಲ್ಲೆಲ್ಲಾ ಮಳೆ..?
August 31, 2025
8:55 PM
by: ಸಾಯಿಶೇಖರ್ ಕರಿಕಳ
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸದುಪಯೋಗ ಪಡಿಸಿಕೊಳ್ಳಲು  ಮಹಿಳೆಯರಿಗೆ ಕರೆ
August 31, 2025
7:16 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group