ನಿನ್ನೆ ನನ್ನ “ರೈತ ದಿನಾಚರಣೆ”(Farmers day) ಸಂಬಂಧಿಸಿದ ಲೇಖನವನ್ನ ಓದಿದ ಅಡಿಕೆ(Arrecanut) ಬೆಳೆಗಾರರೊಬ್ಬರು ಈ ಜಿಜ್ಞಾಸೆ ಗೆ ನನ್ನನ್ನುತಳ್ಳಿದರು. ಗಡಿಯಲ್ಲಿ ಶತ್ರುಗಳ ಗುಂಡೇಟು ಎದುರಿಸಿ ಅನು ಕ್ಷಣದ ಪ್ರಾಣಾಪಾಯದಲ್ಲಿ ದೇಶ ಕಾಯುವ ಸೈನಿಕ(Solider) ರೈತನಿಗಿಂತ(Farmer) ಮೇಲು. ಸೈನಿಕನ ದೇಶ ಪ್ರೇಮ ತ್ಯಾಗದ ರೈತನ ಶ್ರಮ ದೊಡ್ಡದಲ್ಲ. ರೈತ ಮನೆ ಕಾರು ಬಾರು ಮಾಡಿಕೊಂಡು ಆರಾಮವಾಗಿರುವ ಸುಖಜೀವಿ. ರೈತನಿಗೊಂದು ಪ್ರತ್ಯೇಕ ದಿನಾಚರಣೆ ಬೇಡ, ರೈತರಿಗೆ ಸಮಾಜ ಕೃತಜ್ಞತೆ ಬೇಡ ಎಂಬರ್ಥ ದಲ್ಲಿ ಅಭಿಪ್ರಾಯವನ್ನು ಪಟ್ಟರು. ಈ ನಿಟ್ಟಿನಲ್ಲಿ ನನ್ನ ಚಿಂತನೆ.
ಮೊಟ್ಟಮೊದಲ ಬಾರಿಗೆ ಸನ್ಮಾನ್ಯ ಲಾಲ್ ಬಹಾದ್ದೂರ್ ಶಾಸ್ತ್ರಿಜಿಯವರು “ಜೈ ಜವಾನ್ ಜೈ ಕಿಸಾನ್ ” ಎಂಬ ಉದ್ಘೋಷ ಮಾಡಿದರು. ನಂತರ ಸನ್ಮಾನ್ಯ ವಾಜಪೇಯಿಯವರು ಇದಕ್ಕೆ ಇನ್ನೊಂದು ಸಮುದಾಯವನ್ನು ಸೇರಿಸಿ “ಜೈ ವಿಜ್ಞಾನ್ ‘ ಎಂದರು. ಒಂದು ದೇಶ ” ಸಮಷ್ಠಿ” ಯಾಗಲು ದೇಶದ ಪ್ರತಿ ಪ್ರಜೆ ಪ್ರತಿ ರಂಗವೂ ಅತ್ಯಂತ ಪ್ರಾಮುಖ್ಯವಾಗಿರುತ್ತದೆ. ಯುದ್ಧ, ಗಡಿ ಪ್ರಕ್ಷಬ್ದತೆಯ ಸಂಧರ್ಭದಲ್ಲಿ ಹುತಾತ್ಮರಾಗುವ ಸೈನಿಕರನ್ನು ದೇಶದ ಸಮಸ್ತರೂ ಗೌರವಿಸಲೇಬೇಕು….
ನಾವು ಮಲೆನಾಡು ಕರಾವಳಿಯ ವ್ಯಾವಹಾರಿಕ ಬೆಳೆ ಅಡಿಕೆ ಮುಂತಾದ ಹೆಚ್ಚು ಹಣ ಬರುವ ವಾಣಿಜ್ಯ ಬೆಳೆ ಬೆಳೆದು ಸಾಕಷ್ಟು ಸಂತುಷ್ಟರಾಗಿದ್ದೇವೆ. ಸದ್ಯ ನಮ್ಮ ಕೃಷಿಗೆ ಬೇಕಾದಷ್ಟು ನೀರು , ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯ ಹೊಂದಿದ್ದೇವೆ. ಲೆಕ್ಕಾಚಾರ ಹಾಕಿದರೆ ನಾವು ಅಡಿಕೆ ಬೆಳೆಗಾರರು “ಗುಟ್ಕದಾತರು ” ಅಷ್ಟೇ. “ಅನ್ನದಾತ ” ರೈತರು ಯಾರು…? ಮಳೆಯಾಶ್ರಿತವಾಗಿ ಸದಾ ಅಸ್ಥಿರ ವಾತಾವರಣದಲ್ಲಿ ಭೂಮಿ ಉತ್ತಿ ಬಿತ್ತಿ, ಭತ್ತ, ರಾಗಿ , ಜೋಳ , ಗೋಧಿ, ಸಿರಿಧಾನ್ಯ, ಸೊಪ್ಪು ತರಕಾರಿ ಬೆಳೆವವರು ನಿಜವಾದ ರೈತರು…
ಒಬ್ಬ ಭತ್ತ ಬೆಳೆಯೋ ರೈತ ಅಕಾಲಿಕ ಮಳೆ, ಇಳುವರಿ, ನಂತರ ಮಾರುಕಟ್ಟೆ ಯ ಕಡಿಮೆ ಬೆಲೆ ಎಲ್ಲದರ ಮಧ್ಯೆ ಕಷ್ಟ ಬಿಟ್ಟು ಭತ್ತ ಬೆಳಿತಾನೆ. ನನ್ನ ಇದುವರೆಗಿನ ಅನುಭವದಲ್ಲಿ ಈ ವರ್ಷ ಭತ್ತಕ್ಕೆ ಕ್ವಿಂಟಾಲ್ ಗೆ ಮೂರು ಸಾವಿರ ರೂಪಾಯಿ ದರ ಬಂದಿರುವುದು. ಕಳೆದ ವರ್ಷ ಕ್ವಿಂಟಾಲ್ ಗೆ 1500 ರೂಪಾಯಿ ಇತ್ತು. ಮಲೆನಾಡಿನ ಕಡೆ ಬಿಡಿ ಬಯಲು ಸೀಮೆಯಲ್ಲೂ ಎಷ್ಟೇ ಇಳುವರಿ ಬಂದರೂ ಒಂದೂವರೆ ಸಾವಿರ ರೂಪಾಯಿ ಭತ್ತಕ್ಕೆ ನಷ್ಟವೇ ಸರಿ. ಹೀಗೆ ಭತ್ತ , ರಾಗಿ , ಜೋಳ ಮತ್ತು ಸಿರಿ ಧಾನ್ಯಗಳಿಗೆ ಅಂಗಡಿಯಲ್ಲಿ ಆರಾಮವಾಗಿ ಕೂತು ಹೊಟ್ಟೆ ಬೆಳೆಸಿಕೊಂಡ ವ್ಯಾಪಾರಿಗಳು ತಮ್ಮ ದುಪ್ಪಟ್ಟು ಹಲವಾರು ಪಟ್ಟು ಲಾಭದ ಆಸೆಗೆ ರೈತನ ಕೃಷಿ ಮಾಡುವ ಆಸೆಯನ್ನು ಅವರ ಉತ್ಪನ್ನವನ್ನು ಕಮ್ಮಿ ಬೆಲೆಗೆ ಖರೀದಿಸಿ ಖರೀದಿಸಿ ಕಮರಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಸಿರಿಧಾನ್ಯ ಗಳು ಬೆಳೆಯುವರು ಕಡಿಮೆಯಾಗಿದ್ದಾರೆ. ವರ್ಷ ವರ್ಷವೂ ಭತ್ತದ ಬೆಳೆ ಕಡಿಮೆ ಆಗುತ್ತಲೇ ಇದೆ. ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದಮೇಲೆ ಒಮ್ಮೆಗೆ ಒಂದಕ್ಕೆ ಎರಡು ಪಟ್ಟು ಅಕ್ಕಿ ಬೆಲೆ ಏರಿಕೆಯಾಯಿತು. ಇವತ್ತು “ಬಿಪಿಎಲ್” ಕಾರ್ಡ್ ಇಲ್ಲದ ಬಡ ಮದ್ಯಮ ವರ್ಗದವರು ಮೂವತ್ತು ರೂಪಾಯಿಗೆ ಸಿಗುತ್ತಿದ್ದ ಅಕ್ಕಿಯನ್ನು ಅರವತ್ತು ರೂಪಾಯಿಗೆ ಕೊಂಡು ಸೋಲುತ್ತಿದ್ದಾರೆ. ಆದರೆ ನೂರೆಂಟು ಸವಾಲಗಳ ನಡುವೆ ಭತ್ತ ಬೆಳೆವ ರೈತನಿಗೆ ಈ ಬೆಲೆ ಕೊಂಚ ಸಮಾಧಾನ ನೀಡಿದೆ. ಈ ಆಹಾರ ಧಾನ್ಯ ಬೆಳೆವ ರೈತ ಅತಿವೃಷ್ಟಿ ಅನಾವೃಷ್ಟಿ ಬೆಲೆ ಕುಸಿತದ ನಡುವೆ ಲಾಭಾದಾಯಕ ವಾಣಿಜ್ಯ ಬೆಳೆ ಬೆಳೆವ ಮನಸು ಮಾಡದೇ ಆಹಾರ ಧಾನ್ಯವನ್ನೇ ಬೆಳೆಯುತ್ತಿರುವುದಕ್ಕೆ ನಿಜಕ್ಕೂ ಸಮಸ್ತ ಸಮಾಜ ಅನ್ನದಾತ ಬಂಧುಗಳಿಗೆ ” ಜೈ” ಎನ್ನಲೇ ಬೇಕು.
ಎಕರೆ ಭತ್ತ ಬೆಳೆಯಲು ಇಪ್ಪತ್ತೈದು ಸಾವಿರ (ಕನಿಷ್ಠ) ಬಂಡವಾಳ ಹೂಡಿದ ರೈತನ ಹಣ ಹಿಂದಿರುಗುವುದು ವ್ಯಾಪಾರಿಗಳು ರೈತನ ಭತ್ತ ಖರೀದಿಸಿ ರೈತನಿಗೆ ಹಣ ನೀಡಿದ ಮೇಲೆಯೇ…!!
ಹಾಂ ಹೌದು… ಎಪಿಎಂಸಿಯಲ್ಲಿ ಬೆಂಬಲ ಬೆಲೆ ನಾಟಕವೂ ಇದಕ್ಕೆ ಕಾರಣ. ರೈತರಿಗೆ ಸತಾಯಿಸಿಯೇ ಹಣ ಬಿಡುಗಡೆಯಾಗುವುದು. ಅಲ್ಲೂ ವಶೀಲಿಬಾಜಿಯೇ… ರೈತನಿಗೆ ಹೋದಲ್ಲುದ್ದಕ್ಕೂ ಶೋಷಣೆಯೇ. ಹೈನು , ಕಬ್ಬು, ಎಣ್ಣೆಕಾಳು ಬೆಳೆ, ಯಾವ ರೈತ ನೆಮ್ಮದಿಯಲ್ಲಿದ್ದಾನೆ…? ಬೀಜದಿಂದ ಉತ್ಪನ್ನವಾಗಿ ಆ ಉತ್ಪನ್ನ ಹಣವಾಗಿ ರೈತರಿಗೆ ಹಿಂದಿರುಗುವ ತನಕವೂ ಗಡಿಯಲ್ಲಿ “ಗನ್” ಹಿಡಿದು ಕೂತ ಸೈನಿಕನ ಹಾಗೇ ರೈತನ ಪರಿಸ್ಥಿತಿ “ಜೀವನ್ಮರಣವೇ ” ಅಲ್ಚಾ…?
ಈ ನಡುವೆ ಏನೇ “ನಷ್ಟ” ವಾದರೂ ರೈತನನ್ನು ಯಾರೂ ಕೈ ಹಿಡಿದು ಮೇಲೆತ್ತಲ್ಲ…!! ರೈತ ಕೃಷಿ ಮಾಡಲು ಬ್ಯಾಂಕ್, ಖಾಸಗಿ ಲೇವಾದೇವಿ ಗಾರರಿಂದ ಸಾಲ ಮಾಡಿ ಹೂಡಿದ ಬಂಡವಾಳ ಹಣ ಸರಿಯಾಗಿ ಹಿಂದಿರುಗದಾದಾಗ ಅಸಾಹಾಯಕನಾಗಿ ನೇಣಿಗೆ ಕೊರೊಳೊಡ್ಡುವುದು ಒಂದು ಬಗೆಯಲ್ಲಿ “ದೇಶಕ್ಕೊಸ್ಕರ ಮಾಡಿದ ಬಲಿದಾನವೇ ಸರಿ”. ಖಂಡಿತವಾಗಿಯೂ ಈ ” ಆತ್ಮಹತ್ಯೆ” ಖಂಡನೀಯವೇ ಸರಿ. ಆದರೆ ರೈತ ಹಾಗೆ ತನ್ನ ಬದುಕು ಭವಿಷ್ಯ ಅಡವಿಟ್ಟು ಸಾಲ ಮಾಡದೇ ಸುಮ್ಮನೆ ಮನೆಯಲ್ಲಿ ಕೂತರೆ ದೇಶಕ್ಕೆ ಅನ್ನ ಆಹಾರ ಕೊಡುವವರಾರು….?
ನಮ್ಮ ಬಂಡವಾಳಷಾಹಿ ಉದ್ಯಮಿಗಳು ನಮ್ಮ ದೇಶದ ಕೃಷಿ ಕ್ಷೇತ್ರದ ಮೇಲೆ ಇನ್ನಿಲ್ಲದಂತೆ ಪ್ರಹಾರ ಮಾಡಿ ರೈತರ ಕೃಷಿ ಮಾಡುವ ಆಸಕ್ತಿ ಕುಂದಿಸಲು ಯತ್ನಿಸುತ್ತಿದ್ದಾರೆ. ಹಾಗೇನಾದರೂ ರೈತ ತನ್ನ ಜೀವ ಒತ್ತೆ ಇಟ್ಟು ಕೃಷಿ ಮಾಡಲಿಲ್ಲವಾದರೆ ದೇಶದ ತೊಂಬತ್ತು ಪ್ರತಿಶತ ಬಡ ಮದ್ಯಮ ವರ್ಗದ ಜನ ಸಾಮಾನ್ಯರು
ನಮ್ಮ ಬಂಡವಾಳಷಾಹಿ ದೊರೆಗಳು ವಿದೇಶದಿಂದ ಆಮದು ಮಾಡಿ ತಂದ ” ದುಬಾರಿ ಬೆಲೆಯ” ಕೃಷಿ ಉತ್ಪನ್ನಗಳನ್ನು “ಕೊಂಡು” ಬದುಕಲು ಸಾದ್ಯವೇ….?
ಬಂಧುಗಳೇ…
ಈ ದೇಶದ ಗಡಿಯನ್ನು ತಮ್ಮ ಜೀವ ಒತ್ತೆ ಇಟ್ಟು ಕಾದಂತೆ ಈ ದೇಶದ ನೂರಿಪ್ಪತ್ತು ಕೋಟಿ ಜನರ ಹೊಟ್ಟೆ ತುಂಬಿಸಿ ಜೀವ ಉಳಿಸಲು ತನ್ನ ಜೀವ ಒತ್ತೆ ಇಟ್ಟು ಕೃಷಿ ಮಾಡುವ ರೈತನೂ ಒಬ್ಬ ಯೋಧನೇ ಅಲ್ವಾ….? ಇವತ್ತು ಯಾತಕ್ಕೂ ಪ್ರಯೋಜನ ಇಲ್ಲದವ ಕೃಷಿಯಲ್ಲಿದ್ದಾನೆ ಎನ್ನಲಾಗೋಲ್ಲ. ಎರಡೆರಡು ಸ್ನಾತಕೋತ್ತರ ಪದವಿ ಪಡೆದವರು ಕೃಷಿಯಲ್ಲಿದ್ದಾರೆ. ಪಟ್ಟಣದಲ್ಲಿ ಲಕ್ಷ ಲಕ್ಷ ಸಂಬಳ ಪಡೆವ ಐಟಿ ಬಿಟಿಯವರು ಆ ಕೆಲಸ ಬಿಟ್ಟು ಕೃಷಿಗೆ ಬಂದಿದ್ದಾರೆ. “ಕೃಷಿ ಪ್ರಯೋಜನ ಇಲ್ಲದ ಭವಿಷ್ಯ ಇಲ್ಲದ ಉದ್ಯೋಗ” ಎಂಬ ತಪ್ಪು ತಿಳಿವಳಿಕೆಯ ಪರಿಣಾಮದ “ಕೀಳಿರಿಮೆ” ಮತ್ತು ನಮಗೇ ನಾವೇ ನಮ್ಮ ವೃತ್ತಿ ಕೃಷಿ ಯನ್ನು ಪ್ರೀತಿಸಿ ಕೊಳ್ಳದ ದುಷ್ಪರಿಣಾಮ ಇವತ್ತು ಸಾಮಾಜಿಕವಾಗಿ ರಾಜಕೀಯವಾಗಿ ಕೃಷಿ ಅವಜ್ಞೆ ಗೊಳಗಾಗಲು ಮುಖ್ಯ ಕಾರಣವಾಗಿದೆ.
ಕೃಷಿಯಲ್ಲಿ, ಕೃಷಿಯನ್ನು ಇಷ್ಟು ಪಟ್ಟು ಮಾಡುವ ಕೋಟ್ಯಂತರ ಮಂದಿ ರೈತರಿದ್ದಾರೆ. ಈಗ ಮೊದಲಿನಂತೆ ಏನೂ ಮಾಡದವ ಕೃಷಿ ಮಾಡಲು ಲಾಯಕ್ಕು ಎಂದು ವಿಶ್ಲೇಷಣೆ ಮಾಡುವ ಕಾಲ ಅಲ್ಲ. ಬೀಜ ಬಿತ್ತಲು, ರೋಗ ಪೀಡಿತವಾಗದಂತೆ. ಬೆಳೆ ನಿರ್ವಹಣೆ ಮಾಡಲು ಹೆಚ್ಚು ಇಳುವರಿ ಬರುವಂತೆ ಮಾಡಲು, ಕೃಷಿ ನೀರಾವರಿ, ಬೆಳೆ ಕಟಾವು, ಬೆಳೆ ಸಂಸ್ಕರಣೆ ಹೀಗೆ ಕೃಷಿಯ ಎಲ್ಲಾ ವಿಭಾಗದ ನಿರ್ವಹಣೆ ಮಾಡುವ ಕೃಷಿಕನಿಗೆ “ಪರೋಕ್ಷವಾಗಿ ವಿಜ್ಞಾನ ಗಣಿತದ ಜ್ಞಾನ ” ಇರುತ್ತದೆ. ಇದೂ ಒಂದು ಕಲಾವಿಜ್ಞಾನ ಎಂಬುದನ್ನು ಸಮಾಜ ಅರ್ಥ ಮಾಡಿಕೊಂಡು ಕೃಷಿಕನನ್ನು ಗೌರವಿಸಬೇಕಿದೆ. ಖಂಡಿತವಾಗಿಯೂ ಕೃಷಿಕ “ದಡ್ಡ ಮಂಕು ದಿಣ್ಣೆ ಯಲ್ಲ”…!!
ಸೋಜಿಗವೆಂದರೆ ಇವತ್ತಿನ ಮುಕ್ಕಾಲು ಪಾಲು ದೇಶ ಕಾಯುವ ಸೈನಿಕರು ” ರೈತರ ಮಕ್ಕಳೇ..” ಮತ್ತು ಈ ರೈತ ಮಕ್ಕಳು ಈ ದೇಶ ಕಾಯುವ ಖುಷಿಯ ಕಿಚ್ಚಿನಿಂದ ಸೈನ್ಯಕ್ಕೆ ಸೇರ್ಪಡೆಯಾಗಿದ್ದಾರೆ ಹೊರತು ಕೃಷಿಯಲ್ಲಿ ಸೋತು ಅಲ್ಲ….!! ಹೊರಗಿನವರಿರಲಿ ಕೃಷಿಕರಾದ ನಾವೇ ನಮ್ಮ ಅನ್ನ ಕೊಟ್ಟು ಸಲಹುತ್ತಿರುವ ಕೃಷಿ ಬದುಕನ್ನ ಮನಃಪೂರ್ವಕವಾಗಿ ಪ್ರೀತಿಸೋಣ…
ಜೈ ಜವಾನ್ ಜೈ ಅನ್ನದಾತ …