ಮಾನವ ಮತ್ತು ಆನೆಗಳ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಬಹಳ ಜಾಸ್ತಿಯಾಗುತ್ತಿದೆ. ಕಾಡುಗಳನ್ನು ಮಾನವ ಆವರಿಸಿಕೊಳ್ಳುತ್ತಿದ್ದಂತೆ ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಇಡುತ್ತಿವೆ. ಕಳೆದ 15 ದಿನಗಳಿಂದ ಕಾಡಿನಿಂದ ಹೊರಬಂದಿರುವ 10 ಆನೆಗಳ ಹಿಂಡು ಕನಕಪುರ, ಸಾತನೂರಿನ ಮೂಲಕ ಶ್ರೀರಂಗಪಟ್ಟಣಕ್ಕೆ ಬಂದಿದ್ದು, ಸದ್ಯ ಶ್ರೀರಂಗಪಟ್ಟಣ ಹಂಪಾಪುರ ಗ್ರಾಮದ ಜಮೀನಿನಲ್ಲಿ ಬೀಡುಬಿಟ್ಟಿದೆ.
ದಿನದಿಂದ ದಿನಕ್ಕೆ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಜಮೀನಿನಲ್ಲಿ ಬೀಡುಬಿಟ್ಟ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ರಾತ್ರಿ ವೇಳೆ ಆನೆಗಳ ಹಿಂಡು ಊರೂರು ಬದಲಿಸುತ್ತಿರುವ ಕಾರಣ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಹುಣಸೂರು ವಿಭಾಗದ ಎಲಿಫ್ಯಾಂಟ್ ಟಾಸ್ಕ್ ಫೋರ್ಸ್‌ನಿಂದ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.
ಅದೇ ರೀತಿ ಭಾನುವಾರ ಬೆಳ್ಳಂಬೆಳಗ್ಗೆ ಮತ್ತೊಂದು ಗಜಪಡೆ ಮದ್ದೂರು ಪಟ್ಟಣಕ್ಕೆ ಕಾಲಿಟ್ಟಿವೆ. ರಾಮನಗರ ಜಿಲ್ಲೆಯ ತೆಂಗನಕಲ್ಲು ಅರಣ್ಯ ಪ್ರದೇಶದಿಂದ ಬಂದಿರುವ ನಾಲ್ಕು ಆನೆಗಳು ಮದ್ದೂರು ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿರುವ ಶಿಂಷಾ ನದಿಯಲ್ಲಿ ಬೀಡುಬಿಟ್ಟಿವೆ. ದೇವಸ್ಥಾನದ ಅರ್ಚಕರು ಹಾಗೂ ಭಕ್ತರ ಮೊಬೈಲ್‌ಗಳಲ್ಲಿ ಗಜಪಡೆಯ ದೃಶ್ಯ ಸೆರೆಯಾಗಿದ್ದು, ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಆನೆಗಳ ಹಿಂಡನ್ನು ಕಂಡು ಗಾಬರಿಗೊಂಡಿದ್ದಾರೆ. ಆನೆಗಳನ್ನು ಕಂಡ ತಕ್ಷಣವೇ ದೇವಸ್ಥಾನದ ಆಡಳಿತ ಮಂಡಳಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ದೌಡಾಯಿಸಿದ ವಲಯ ಅರಣ್ಯಾಧಿಕಾರಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಇನ್ನು ಈ ಗಜಪಡೆ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಮತ್ತು ಮದ್ದೂರು ಪಟ್ಟಣದ ಕಡೆ ತೆರಳದಂತೆ ಸಿಬ್ಬಂದಿ ಕಾವಲಿರಿಸಿದ್ದಾರೆ.