ಕಾಡಲ್ಲೊಂದು ಮಂಗಟೆ ಹಕ್ಕಿ (ಮಲೆ ಓಂಗೆಲೆ ಪಕ್ಕಿ) | ಪ್ರತೀ ಜೀವಿಯೂ ಪರಿಸರಕ್ಕೆ ಮುಖ್ಯ |

June 3, 2024
12:59 PM
ಮಂಗಟೆ ಹಕ್ಕಿಯ ಬಗ್ಗೆ ಚರಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು. ಈ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ.

ಚಿಕ್ಕವನಿರುವಾಗ ಇವುಗಳನ್ನು ನಾನು ಘಟ್ಟದ ಕೋಗಿಲೆ(Cuckoo) ಅಂದು ಕೊಂಡಿದ್ದೆ. ಘಟ್ಟದ ಕೋಗಿಲೆ ಎಂಬ ಹಕ್ಕಿಯೊಂದಿದೆ(Bird) ಅದು ಗದ್ದೆ ಬದಿಗಳಿಗೆ ಬರುತ್ತಿತ್ತು ಎಂದು ತಂದೆ ಹೇಳಿದ್ದ ನೆನಪು, ನನ್ನ ಕಲ್ಪನೆಗೆ ನಾನು ಈ ಮಂಗಟೆ ಹಕ್ಕಿಯನ್ನೇ(Horn Bill) ಅದು ಎಂದು ಕೊಂಡಿದ್ದೆ, ಈಗಲೂ ಅದು ಹೌದೋ ಅಲ್ಲವೋ ಗೊತ್ತಿಲ್ಲ ನನಗೆ. ಆದರೆ ಇದಕ್ಕೆ ಮಂಗಟೆ ಹಕ್ಕಿ ಎನ್ನುವುದು ಈಗ ನನಗೆ ಗೊತ್ತು. ಪಶ್ಚಿಮ ಘಟ್ಟಗಳ(Western Ghats) ಬದಿಯಲ್ಲಿ ಹೆಚ್ಚಾಗಿ ಕಾಣುವ ಇವುಗಳನ್ನು ನಮ್ಮ ಕರಾವಳಿ(Coastal) ಬದಿಯಲ್ಲೂ ಕಂಡಿದ್ದೇನೆ. ಇತ್ತೀಚಿಗೆ ನಮ್ಮ ಊರ ಬದಿಯಲ್ಲಿ ಬಹಳ ಸಲ ನನ್ನ ಕಣ್ಣಿಗೆ ಬಿದ್ದದುಂಟು. ಇವುಗಳ ಆಕರ್ಷಣೆಯೇ ಅವುಗಳ ಕೊಕ್ಕಿನ(Beak) ರಚನೆ ನನ್ನನಂತೂ ಬಹುವಾಗಿ ಆಕರ್ಷಿಸಿತ್ತು. ಮೊದಲ ಬಾರಿ ಕಂಡಾಗ ನಾನೆ ಅದಕ್ಕೊಂದು ಹೆಸರನಿಟ್ಟಿದ್ದೆ. ಗರಗಸ ಕೊಕ್ಕಿನ ಹಕ್ಕಿಯೆಂದು. ಈಗ ಕಥೆಗೆ ಬರುತ್ತೇನೆ ಕೇಳಿ…

Advertisement
Advertisement

ಬೇಟೆಗೆಂದು ಹೊರಟ ಅವನಿಗೆ ಅಂದು ಯಾವ ಮಿಕವು ಕಣ್ಣಿಗೆ ಬಿದ್ದಿರಲಿಲ್ಲ. ಎಷ್ಟೋ ಮೈಲು ನಡೆದು ಬೆಟ್ಟ ಇಳಿದು ಕಾಡಿನ ದಾರಿಯಾಗಿ ಬಂದಿದ್ದ ಅವನಿಗೆ ಒಂದು ಕಡೆ ಸಿಟ್ಟು ಉಕ್ಕಿ ಬರುತ್ತಿತ್ತು. ಒಂದು ಮೊಲವಾದರೂ ಹೊಡೆದೇ ಮನೆಗೆ ವಾಪಸಗಬೇಕೆಂದು ಧೃಡವಾಗಿ ನಿಶ್ಚಯಿಸಿದ್ದ. ತಂದ ನೀರು ಖಾಲಿಯಾಗುತ್ತ ಬಂದಿತ್ತು. ಮಧ್ಯಾಹ್ನದ ಹೊತ್ತು ಸುಸ್ತಾಗಿ ಒಂದು ದೊಡ್ಡ ಮರದ ಕೆಳಗೆ ತಂದ ಬುತ್ತಿ ಬಿಚ್ಚಿ ಊಟ ಮಾಡಿ ಹಾಗೆ ಮರಕ್ಕೆ ಒರಗಿ ವಿಶ್ರಾಂತಿಸುತ್ತಿದ್ದವನಿಗೆ ಮರದ ಒಂದು ರೆಂಬೆ ಹಂದಾಡಿ ಆತನ ಬೇಟೆಯ ಕಿವಿ ಜಾಗ್ರತವಾಯಿತು. ಏನೆಂದು ನೋಡುವಾಗ ಒಂದು ಮಂಗಟೆ ಹಕ್ಕಿ ಏನೋ ಕಾಯಿಯನ್ನು ಕಿತ್ತು ಕೊಕ್ಕಿನಲ್ಲಿ ಇಟ್ಟು ಕೊಳ್ಳುತ್ತಿದೆ. ಸಿಕ್ಕ ಅವಕಾಶ ಬಿಡದೆ ಢಮಾರ್ ಎಂದು ತನ್ನ ಕೋವಿಯ ಸದ್ದು ಮೊಳಗಿಸಿದ್ದ. ಅಲ್ಲಿಗೆ ಹಕ್ಕಿಯ ಪ್ರಾಣಪಕ್ಷಿ ಹಾರಿತ್ತು. ಇವ ಕೊನೆಗೂ ಸಿಕ್ಕ ಬೇಟೆಗೆ ಅಲ್ಪ ತೃಪ್ತನಾಗಿ ಮನೆಗೆ ವಾಪಸಗಿದ್ದ. ಆದರೆ ಇವ ಕೊಂದದ್ದು ಆ ಒಂದು ಹಕ್ಕಿಯನ್ನಲ್ಲ, ಇಡೀ ಅದರ ಸಂಸಾರದ ನಿರ್ನಾಮಕ್ಕೆ ತನಗೇ ಗೊತ್ತಿಲ್ಲದೇ ನಾಂದಿ ಹಾಡಿದ್ದ.

ಅದು ಹೇಗೆಂದರೆ ನೀವು ಅವುಗಳ ಜೀವನ ಶೈಲಿಯನ್ನೊಮ್ಮೆ ಗಮನಿಸಬೇಕು. ಅವು ತಮ್ಮ ಸಂಗಾತಿಯ ಆಯ್ಕೆಯಲ್ಲಿ ಬಹಳ ಜಾಗೃತ. ತಮ್ಮ ಒಂದು ಸಂಗಾತಿಯೊಂದಿಗೆ ಹೆಚ್ಚಾಗಿ ತನ್ನ ಜೀವನವನ್ನೇ ಕಳೆದುಬಿಡುತ್ತವೆ. ಮರು ಆಯ್ಕೆಯ ಪ್ರಕ್ರಿಯೆ ಕಮ್ಮಿ. ಮರಿ ಮಾಡುವ ಸಂದರ್ಭದಲ್ಲಿ ಬಲಿತ ಮರದ ಪೊಟರೆಯನ್ನು ಆಯ್ಕೆ ಮಾಡಿ ಹೆಣ್ಣು ಅಲ್ಲಿ ಮೊಟ್ಟೆ ಇಡುವ ಪ್ರಕ್ರಿಯೆಗೆ ಶುರು ಮಾಡುವ ಮುಂಚೆಯೇ, ಒಳಗೆ ಪ್ರವೇಶಿಸಿದ ನಂತರ ಗಂಡು ಹೆಣ್ಣು ಸೇರಿ ಪೊಟರೆಯ ತೂತಿನ ಗಾತ್ರವನ್ನು ತನ್ನ ಹಿಕ್ಕೆ ಹಾಗೂ ಮಣ್ಣು ಬಳಸಿ ಅಂಟಿನಂತೆ ಮಾಡಿ, ಹೆಣ್ಣು ಹಕ್ಕಿಯ ಕೊಕ್ಕು ಮಾತ್ರ ಹೊರ ಕಾಣುವಂತೆ ಗಾರೆಯ ಕೆಲಸದಂತೆ ಉಳಿದ ಭಾಗವನ್ನು ಮುಚ್ಚಿಬಿಡುತ್ತದೆ.ಹೆಣ್ಣು ಹಕ್ಕಿ ಕಾವು ಕೊಟ್ಟು ಮರಿ ಸ್ವಲ್ಪ ದೊಡ್ಡದಾಗುವವರೆಗೆ ಅದರ ಒಳಗೆ ಬಂದಿಯಾಗಿಯೇ ಇರುತ್ತದೆ. ಆಗ ಏನಿದ್ದರೂ ತನ್ನ ಸಂಗಾತಿಗೆ ಆಹಾರ ಒದಗಿಸುವ ಜವಾಬ್ದಾರಿ ಗಂಡು ಹಕ್ಕಿಯದು. ಅದೇನಾದರೂ ಆ ಸಮಯದಲ್ಲಿ ಸತ್ತರೆ ಹೆಣ್ಣು ಹಕ್ಕಿ ಕಾಯುತ್ತದೆಯೇ ಹೊರತು ಹೊರ ಬರುವುದಿಲ್ಲ. ಸಾಧ್ಯವೂ ಇರಲಿಕ್ಕಿಲ್ಲ ಬಿಡಿ. ಆಹಾರದ ಕೊರತೆಯಿಂದಲೇ ಬಂದಿಯಾದ ಹೆಣ್ಣು ಹಕ್ಕಿ ಅದರೊಂದಿಗೆ ಅದರ ಮೊಟ್ಟೆ-ಮರಿಗಳು ಸಾಯುತ್ತವೆ.

ಇಂತಹ ಕಾರ್ಯವನ್ನೇ ಆ ಬೇಟೆಗಾರ ಮಾಡಿದ್ದ. ಹಕ್ಕಿ ತಾನೊಂದೆ ಸತ್ತಿರಲಿಲ್ಲ, ತನ್ನೊಂದಿಗೆ ತಾ ಮಾಡದ ತಪ್ಪಿಗೆ ತನ್ನ ಸಂಸಾರದ ಸಾವಿಗೂ ಕಾರಣವಾಗಿತ್ತು. ಗೊತ್ತಿರದೆ ಹೀಗೊಂದು ಬೇಟೆಯಾಡಿದ ಅವನಿಗೆ ಅನ್ಯರಿಂದ ವಾರದ ನಂತರ ಈ ಮಾಹಿತಿ ತಿಳಿದಿತ್ತು. ಹುಡುಕುತ್ತ ಅದೇ ಜಾಗಕ್ಕೆ ಬಂದಿದ್ದ. ಕಾಲ ಮಿಂಚಿತ್ತು, ಬುದ್ಧಿ ತಡವಾಗಿ ಬಂದಿತ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಮರದ ಪೊಟರೆ ಮೂಗು ಮುಚ್ಚಿಕೊಳುವಷ್ಟು ದುರ್ನಾತದಿಂದ ತುಂಬಿತ್ತು. ಇಣುಕಿದವನಿಗೆ ಕಂಡ ದ್ರಶ್ಯ, ಅವ ಕಟುಕನಾದರೂ ಮರುಗಿದ್ದ. ಪ್ರಾಣಿ ಪಕ್ಷಿಗಳಲ್ಲೂ ಈ ತರದ ಬಂಧವಿದೆ ಎಂಬ ಅರಿವು ಅದಾಗಲೇ ತಿಳಿದದ್ದು ಅವನಿಗೆ. ಏನಾಯಿತೋ ಏನೋ ಆ ಘಟನೆ ನಡೆದ ನಂತರ ಸಂಪೂರ್ಣ ಬದಲಾಗಿ ಬಿಟ್ಟಿದ್ದ. ಆ ನಂತರದಲ್ಲಿ ತನ್ನ ಕೋವಿಯನ್ನು ಅವ ಬಳಸಲೇ ಇಲ್ಲ. ಬೇಟೆಯ ಹುಚ್ಚು ಬಿಟ್ಟಿತ್ತು. ಬದಲಾಗಿದ್ದ ಆತ ಬದಲಾಗಿದ್ದ..

ಕಾಡಿನ, ಸುತ್ತ ಮುತ್ತಲಿನ ಕ್ಷುಲ್ಲಕ ಎನಿಸಿದ ಜೀವಿಗಳ ಬಗ್ಗೆ ಕೌತುಕ ಮೂಡಿಸಲು ಕಾರಣ ನಾನು ಓದಿದ ತೇಜಸ್ವಿಯವರ ಬರಹಗಳೇ. ಕಣ್ಣು ಬಿಟ್ಟು ನೋಡಿದರೆ ಇರುವೆಗಳಲ್ಲೂ ಅದ್ಭುತಗಳು ಕಾಣಿಸುತ್ತವಂತೆ,ಈ ಹಕ್ಕಿಯ ಬಗ್ಗೆ ಆಸಕ್ತಿ ಮೂಡಿಸಿದ್ದು ಕೂಡ ಅವರದೇ ಕೆಲ ಘಟನೆಗಳ ಸ್ಫೂರ್ತಿಯಷ್ಟೇ..

Advertisement
ಬರಹ :
 ಚರಣ್ 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಲು ಆಗ್ರಹ | ದಾವಣಗೆರೆಯಲ್ಲಿ ರೈತರ ಪ್ರತಿಭಟನೆ
May 19, 2025
9:05 PM
by: The Rural Mirror ಸುದ್ದಿಜಾಲ
ಅತೀ ಹೆಚ್ಚು ಪ್ರಮಾಣದ ತೊಗರಿ ಖರೀದಿಸಿದ ವಿಜಯಪುರ ಜಿಲ್ಲೆ
May 19, 2025
8:59 PM
by: The Rural Mirror ಸುದ್ದಿಜಾಲ
ಮಳೆಗೆ ರಾಜಧಾನಿ ಬೆಂಗಳೂರು ಅಸ್ತವ್ಯಸ್ತ | ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ | ಕೋಲಾರದಲ್ಲಿ ಬೆಳೆ ನಷ್ಟ | ಚಿಕ್ಕಮಗಳೂರಿನಲ್ಲಿ ನಿರಂತರ ಮಳೆ
May 19, 2025
8:46 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19-05-2025 | ಮೇ 24 ರಿಂದ ಮುಂಗಾರು ಮಳೆ ಉತ್ತಮವಾಗಿ ಆರಂಭವಾಗುವ ಲಕ್ಷಣ
May 19, 2025
11:35 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group