ಅಬ್ಬಬ್ಬಾ ಎಂತಹ ಮಳೆ…..
ತೋಯ್ದು ಹೋಯಿತು ಇಳೆ….
ಹಾಳಾಯ್ತು ನನ್ನ ಅಡಿಕೆ ಬೆಳೆ….
ಹೇಗಪ್ಪ ನಮ್ಮ ಪಾಡು ನಾಳೆ….
…. ಇಂತಹ ಮಾತುಗಳು ಎಲ್ಲಾ ಕೃಷಿಕರ ಬಾಯಿಯಲ್ಲಿ , ದೃಶ್ಯಮಾಧ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಳೆಗಿಂತ ಜೋರಾಗಿ ಹರಿದು ಬರುವುದನ್ನು ಕಾಣುತ್ತಿದ್ದೇವೆ. ಓರ್ವ ಅಡಿಕೆ ಬೆಳೆಗಾರನಾಗಿ, ಭತ್ತದ ಬೆಳೆಗಾರನಾಗಿ ನನ್ನದೊಂದು ಸಣ್ಣ ವಿಶ್ಲೇಷಣೆ ಮಾತ್ರ. ನನ್ನಲ್ಲಿ ಮಳೆಮಾಪನದ ಯಾವುದೇ ದಾಖಲೆಗಳಿಲ್ಲ. ಪ್ರತಿವರ್ಷದ ಅನುಭವದ ಆಧಾರಗಳಿಂದ ಮಾತ್ರ ನನ್ನ ಮಾತುಗಳು. ಹೊಸ ವೈದ್ಯನಿಗಿಂತ ಹಳೆಯ ರೋಗಿಗೆ ಅನುಭವ ಜಾಸ್ತಿ ಅಂತೆ. 40 ವರ್ಷಗಳ ನಿರಂತರ ಅಡಿಕೆ ಮತ್ತು ಗದ್ದೆ ಬೇಸಾಯ ಮಾಡಿದಾಗ ಕೊಡುತ್ತಿದ್ದ ಮಳೆಯ ಅನುಭವಗಳನ್ನು ಮುಂದಿನ ಸಾಲಿನಲ್ಲಿ ವಿವರಿಸುತ್ತಿದ್ದೇನೆ.
ಸೆಪ್ಟೆಂಬರ್ 10-15 ತಾರೀಕಿನ ಅಂದಾಜಿಗೆ ಮುಂಗಾರು ಮುಗಿದು ಮತ್ತೊಂದು ಹದಿನೈದು-ಇಪ್ಪತ್ತು ದಿನ ಒಳ್ಳೆಯ ಬಿಸಿಲು ಕಾದು ಆ ನಂತರ ಗುಡುಗುಡು ಗುಮ್ಮಟ ದೇವರೊಂದಿಗೆ ಹಿಂಗಾರು ಮಳೆ ಅಕ್ಟೋಬರ ತಿಂಗಳ ಮಧ್ಯಭಾಗದಿಂದ ಆರಂಭ. ಸುಮಾರು ನವಂಬರ್ 15 -20 ನೇ ತಾರೀಕಿನವರೆಗೆ ಇದು ಮುಂದುವರಿಯುತ್ತದೆ .ನಂತರ ಡಿಸೆಂಬರ್ ಮಧ್ಯಭಾಗದವರೆಗೂ ಆಗೊಂದು ಈಗೊಂದು ಮಳೆ ಬರುವುದು ನನ್ನ ಅನುಭವದಲ್ಲಿ ವಾಡಿಕೆ. ಅಕ್ಟೋಬರ್ ಬಂದಂತೆ ಹಣ್ಣಡಿಕೆ ಉದುರುವುದು, ಗದ್ದೆ ಕೊಯ್ಯಲು ಆರಂಭವಾಗುವುದು ಎಲ್ಲವೂ ಒಟ್ಟೊಟ್ಟಿಗೆ. ಹಣ್ಣಡಿಕೆ ಹೊಗೆ ಗಂಡಿ, ಮನೆ ಅಟ್ಟ ಎಲ್ಲ ತುಂಬಿ ಅಂಗಳದಲ್ಲಿ ಕೊಳೆತು ನಾರುತ್ತಿರುತ್ತದೆ. ಕೊಳೆತಾಗ ಬರುವ ನುಸಿ ( ಕೌಳಿ)ಮನೆಯೊಳಗೂ ತುಂಬಿ ಬಿಡುತ್ತದೆ. ಬಿಸಿಲು ಬಂದಂತೆ ಒಣಗಿ ಸಿಪ್ಪೆ ಹಾಳಾದಂತೆ ಕಂಡರೂ ಒಳಗಿನ ಅಡಿಕೆಯ ಗುಣಮಟ್ಟ ತಕ್ಕಮಟ್ಟಿಗೆ ಚೆನ್ನಾಗಿ ಇರುತ್ತಿತ್ತು. ಉತ್ತಮ ಅಡಿಕೆಯ ಮಾರುಕಟ್ಟೆ ದಾರಣೆಗಿಂತ 2 ಯಾ 3 ರೂಪಾಯಿಯಷ್ಟು ಹಿಂದಿನ ಧಾರಣೆ ಸಿಗುತ್ತಿತ್ತು.
Advertisement
ಭತ್ತದ ಗದ್ದೆಯ ಪೈರು ಒಣಗಿದಂತೆ ಅಂಗಳ ತಯಾರು ಮಾಡುವ ಕೆಲಸ ಜೋರಾಗಿ ಆರಂಭ. 4-5 ಆಳುಗಳು ಗುದ್ದು ಮಣೆಯನ್ನು ಹಿಡಿದು ಕಲ್ಲೆದ್ದ ಅಂಗಳವನ್ನು ಮತ್ತೆ ಮಟ್ಟಸ ಮಾಡುವುದು, ನಂತರ ಸೆಗಣಿ ಸಾರಿಸಿ ಕಲ್ಲು ಮಣ್ಣು ಬಾರದಂತೆ ತಯಾರಿ ಮಾಡಿ ಪೈರಿನ ಆಹ್ವಾನಕ್ಕೆ ಸಿದ್ಧತೆ ನಡೆಯುತ್ತಿತ್ತು. ಎಲ್ಲ ತಯಾರಿ ಆದಂತೆ ಗುಡುಗುಡು ಗುಮ್ಮಟ ದೇವನಿಗೆ ಅದೆಂತು ಗೊತ್ತಾಗುತ್ತಿತ್ತೊ,ಧಾರಾಕಾರ ಮಳೆ ಬಂದು ತಯಾರು ಪೂರ ನೀರ ಮೇಲಿನ ಹೋಮದಂತೆ ಆಗುವುದು. ಆಮೇಲೆ ಮನೆಯ ಸಣ್ಣ ಕೊಟ್ಟಿಗೆಯ ಜಾಗಕ್ಕೆ ಅದೆಂತೋ ಗೋಣಿಗಳನ್ನು ಕಟ್ಟಿ ಅವ್ಯವಸ್ಥೆಯಲ್ಲಿ ಒಂದುಮಟ್ಟದ ವ್ಯವಸ್ಥೆ ಮಾಡಿಕೊಂಡು ಭತ್ತ ಬಿಡಿಸುವ ಕಾರ್ಯ. ಮಧ್ಯಾಹ್ನ 2 ಗಂಟೆ ಆಗಬೇಕಾದರೆ ಮಳೆ ಸುರುವಾದರೆ ನೆನೆದ ಭತ್ತದ ಪೈರನ್ನು ಹೊತ್ತು ತಂದು ಬಿಡಿಸಿ ಎಲ್ಲೆಂದರಲ್ಲಿ ಹರಡಿ ಒಣಗಿಸುವ ಪ್ರಯತ್ನ. ಮೋಡಮುಸುಕಿದ ವಾತಾವರಣವಿದ್ದರೆ ಒಂದಿನಿತೂ ಒಣಗದೆ ಹರಡಿದಲ್ಲಿಯೇ ಮೊಳಕೆ ಬಂದು ಗುಣಮಟ್ಟ ಹಾಳಾಗುವುದು ಮಾಮೂಲಾಗಿತ್ತು.
ಒಂದೊಂದು ವರುಷ ಅತಿಯಾದ ಮಳೆಯಿಂದಾಗಿ ಬೆಳೆದು ನಿಂತ ಭತ್ತದ ಪೈರು ಕೆಸರು ನೀರಿನಿಂದ ಮುಳುಗಿ ಹಾಳಾಗುವ ಕ್ರಮವೂ ಇತ್ತು. ಆಗೆಲ್ಲಾ ತಾಡಪತ್ರಗಳ( ಟಾರ್ಪಾಲ್) ವ್ಯವಸ್ಥೆ ಇರಲಿಲ್ಲ. ಅಂತೂ ಇಂತೂ ಕೊಯಿದ ಭತ್ತ ಒಣಗಲು ಒಂದು ತಿಂಗಳ ಕಾಲ ಕಾಯಬೇಕಾಗುತ್ತಿತ್ತು. ಈ ಸಮಯದಲ್ಲಿ ಇಲಿ ಹೆಗ್ಗಣಗಳು ತಮ್ಮ ಪಾಲನ್ನು ಆರಾಮದಲ್ಲಿಯೇ ಕಬಳಿಸುತ್ತಿದ್ದವು. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿದ ಭತ್ತದ ಅಕ್ಕಿಯಲ್ಲಿ ಊಟ ಮಾಡುವಾಗ ಅಲ್ಲಲ್ಲಿ ಕಲ್ಲು ಸಿಗುವುದು ಮಾಮೂಲಿ ಇರುತ್ತಿತ್ತು. ಕೊಯಿದ ಭತ್ತದ ಹುಲ್ಲನ್ನು ಚೆನ್ನಾಗಿ ಅಟ್ಟಿ ಕಟ್ಟಿ ಹುಲ್ಲಿನಿಂದಲೇ ಮಾಡು ಮಾಡಿ ಒಣಗಿಸಲೋಸುಗ ಬಿಸಿಲನ್ನು ಕಾಯುತ್ತಿದ್ದೆವು. ಅಂತೂ ಇಂತೂ ಬಿಸಿಲು ಬರುವಾಗ ಹುಲ್ಲೆಲ್ಲಾ ಕೊಳೆತು ಕಪ್ಪಾಗಿ ತಿಂದ ದನಗಳು ಭೇದಿ ಮಾಡುವುದು ಕೂಡ ಮಾಮೂಲಿ.
ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಶುರುವಾಗಿದೆ ಮಳೆಯಬ್ಬರ. #ಮಳೆ #rain #WeatherUpdate pic.twitter.com/9ClMRl3Q47
Advertisement— theruralmirror (@ruralmirror) November 14, 2021
ಹೀಗಿದ್ದ ನಮಗೆ ಕೆಲವು ವರ್ಷಗಳಿಂದ ಮಳೆ ಕಡಿಮೆ ಇದ್ದು ಅಭ್ಯಾಸವಾಗಿ, ಈ ವರ್ಷದ ಮಳೆ ಅತಿ ಎಂದು ಅನಿಸುತ್ತದೆ. ಗದ್ದೆ ಬೇಸಾಯ ಬಿಟ್ಟುದರಿಂದಾಗಿ ಕಷ್ಟದ ಅರಿವು ಇಂದು ಮರೆತುಹೋಗಿದೆ. (ಕಾರಿನಲ್ಲಿ ಪಯಣಿಸಿ ಅಭ್ಯಾಸವಾದವಗೆ ಬೈಕಿನಲ್ಲಿ ಪಯಣಿಸಿದಂತೆ) ಬಿಸಿಲು ಮನೆಗಳು, ತಾಡಪತ್ರಗಳು ಇರುವ ಈ ಕಾಲದಲ್ಲಿ ಅಡಿಕೆಗಂತೂ ಮಳೆ ಅತೀ ಎಂದು ನನಗನಿಸುವುದಿಲ್ಲ. ಮುಂದಿನ ಬೇಸಿಗೆಗೆ ಇದು ವರವೇ ಇರಬಹುದು.
ಮೊದಲಿಗಿಂತ ಹೆಚ್ಚು ಅನುಕೂಲವಿದ್ದರೂ ಗದ್ದೆ ಬೇಸಾಯಗಾರರಿಗೆ ಇದು ಇಂದು ಕೂಡ ಸಮಸ್ಯೆಯೇ (ಕಷ್ಟಗಳನ್ನು ಉಂಡವನಿಗೆ ಮಾತ್ರ ಸುಖದ ಅರಿವು ಆಗುವುದು). ಪ್ರಕೃತಿ ಕೊಟ್ಟ ಮಳೆಯನ್ನು ವರವಾಗಿ ಸ್ವೀಕರಿಸೋಣ.
# ಎ.ಪಿ.ಸದಾಶಿವ, ಮರಿಕೆ