ಕೆಲವು ಸಮಯದ ಹಿಂದೆ ಸಾಧಕರೊಬ್ಬರ ತೋಟಕ್ಕೆ ಹೋಗಿದ್ದೆ. ಅವರ ಕೃಷಿ ಆಸಕ್ತಿ, ವೈವಿಧ್ಯಮಯ ಕೃಷಿ, ಪ್ರತಿಯೊಂದು ಸಸ್ಯದ ಮೇಲಿರುವ ತಾದಾತ್ಮಿಯ ಎಂತವರನ್ನಾದರೂ ಮಂತ್ರ ಮುಗ್ಧಗೊಳಿಸುವಂತಿತ್ತು. ಅವರ ಕೃಷಿ ಸಾಧನೆಗೆ ನನ್ನ 108 ನಮನಗಳು.
ಕೃಷಿಯನ್ನು ನೋಡುತ್ತಾ ನೋಡುತ್ತಾ ಅವರ ತೋಟದ ಉದ್ದಗಲದಲ್ಲಿ ಸಂಚರಿಸಿದೆ. ಬಹಳ ಆಶ್ಚರ್ಯಕರವಾದ ಸಂಗತಿಯೊಂದು ನನ್ನ ಕಣ್ಣಿಗೆ ಬಿತ್ತು . ಸಾಮಾನ್ಯವಾಗಿ ಎಲ್ಲಾ ತೋಟದಲ್ಲಿ ಕಾಣುವ ವೈವಿಧ್ಯಮಯವಾದ ಹುಲ್ಲು ಅವರ ತೋಟದಲ್ಲಿ ಇರಲಿಲ್ಲ. ಆದರೆ ಮಣ್ಣಿನ ಮೇಲೆ ಹಾವಸೆಯ ಮುಚ್ಚಿಗೆಯೊಂದು ಸುಮಾರು ಎರಡರಿಂದ ಮೂರು ಇಂಚಿನಷ್ಟು ದಪ್ಪಕ್ಕೆ ಆವರಿಸಿತ್ತು. ಕುತೂಹಲದಿಂದ ಕೇಳಿದೆ, ನಮ್ಮ ತೋಟದಲ್ಲಿ ಇಲ್ಲದ ಇದು ನಿಮ್ಮಲ್ಲಿಗೆ ಹೇಗೆ ಮತ್ತು ಎಲ್ಲಿಂದ ಬಂತು? ನಮ್ಮಲ್ಲಿ ಅನೇಕ ವರ್ಷದಿಂದ ಹಾಗೆ ಇದೆ ಎಂಬ ಉತ್ತರ ಬಂತು. ನನಗೇನೋ ಅದು ಬಹಳ ವಿಚಿತ್ರವಾಗಿ ಕಂಡಿತ್ತು. ನಮ್ಮ ಶರೀರದಲ್ಲಿ ಉಂಟಾದ ವ್ರಣವೊದು ಕೀವಾಗಿ, ಕೀವು ಹೋದ ಮೇಲೆ ಗಾಯದ ರಕ್ಷಣೆಗಾಗಿ ಮೇಲೊಂದು ಬರುವ ಪದರದಂತೆ ಇದು ನನಗೆ ಕಂಡಿತ್ತು. ಪದರವನ್ನು ಎಬ್ಬಿಸಿದರೆ ಹಸಿ ಹಸಿ ಗಾಯ ಕಾಣುವುದು ಎಂತೋ, ಅಂತೆಯೇ ಹಾವಸೆಯ ಪದರವನ್ನು ತೆಗೆದಾಗ ಕೆಂಪು ಕೆಂಪಾಗಿ ಮಣ್ಣಿನ ಪದರವನ್ನು ಕಂಡೆ. ಕೆಲವು ಸಮಯಗಳ ನಂತರ ಅದರ ಕಾರಣ ಏನು ಎಂಬುದರ ಅರ್ಥ ನನಗೆ ದೊರೆಯಿತು. ನಿರಂತರವಾಗಿ ಕಳೆನಾಶಕವನ್ನು ಸಿಂಪಡಿಸಿದರೆ, ಕರಗಿ ಹೋಗುವ ಮಣ್ಣಿನ ರಕ್ಷಣೆಗಾಗಿ ಅಥವಾ ಭೂಮಿ ತಾಯಿಯು ತನ್ನ ಮಾನ ಮುಚ್ಚುವುದಕ್ಕಾಗಿ ತೊಡುವ ಹೊಸ ಧಿರಿಸು ಇದು ಎಂದು ಗೊತ್ತಾಯಿತು.
ಭೂಮಿ ತನ್ನ ಸವಕಳಿಯ ರಕ್ಷಣೆಗಾಗಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುದಕ್ಕಾಗಿ, ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುವುದಕ್ಕಾಗಿ, ನೀರಾವಿಯನ್ನು ತಡೆಗಟ್ಟುವುದಕ್ಕಾಗಿ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಆವಾಸಕ್ಕಾಗಿ ನಿರ್ಮಿಸುವ ವ್ಯವಸ್ಥೆಯೇ ಹುಲ್ಲು. ಒಂದೇ ಮಣ್ಣು ಒಂದೇ ನೀರು ಕುಡಿದರೂ, ಬೆಳೆಯುವ ಸಸ್ಯ ವೈವಿಧ್ಯಗಳು ನೂರಾರು ಮತ್ತು ಸಸ್ಯದ ವಾಸನೆ ರುಚಿ ಎಲ್ಲವೂ ನೂರಾರು.
ನಮ್ಮ ಶರೀರಕ್ಕೆ ಷಡ್ರಸ ಭೋಜನವು ಎಷ್ಟು ಅಗತ್ಯವೋ, ಅಂತೆಯೇ ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು. ಆ ಹುಲ್ಲನ್ನು ನಾವು ವಿಷ ಹೊಡೆದು ನಾಶ ಮಾಡಿದರೆ, ಭೂಮಿಗೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳನ್ನು ನಾಶ ಮಾಡಿದಂತಲ್ಲವೇ? ಒಂದು ಇಂಚಿನ ಸಾವಯವ ಇಂಗಾಲಯುಕ್ತ ಮೇಲ್ಮಣ್ಣಿನ ಪದರ ಉಂಟಾಗಬೇಕಾದರೆ ಧಾರಾಳ ಸಾವಯವ ವಸ್ತು ಬಿದ್ದು ಕಳಿತರೆ, ಒಂದು ಸಾವಿರ ವರ್ಷವಾದರೂ ಬೇಕಾಗಬಹುದಂತೆ. ಕೋಟ್ಯಾಂತರ ವರ್ಷಗಳಿಂದ ರಚಿತವಾದ ಭೂಮಿಯನ್ನು ನಮ್ಮ ಸ್ವಾರ್ಥಕ್ಕಾಗಿ, ಕೃಷಿಯ ಸುಲಭಕ್ಕಾಗಿ, ಕಳೆಯೆಂದು ಉದ್ಘೋಷಿಸಿ ನಾಶ ಮಾಡಲು ನಮಗೆ ಹಕ್ಕಿದೆಯೇ? ಪ್ರಕೃತಿ ಸಹಜ ವಿಧಾನದಿಂದ ನಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ನಿವಾರಿಸಿಕೊಂಡು ಸಹಜೀವನಕ್ಕೆ ಶರಣು ಹೋಗುವುದು ಲೇಸೆಂಬ ಸಿದ್ಧಾಂತವನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ.ಅಲ್ಲವಾದರೆ, ಶರೀರದಲ್ಲಿ ಆದ ಗಾಯದ ಮೇಲ್ಪದರವನ್ನು ಕಿತ್ತಾಗ ಆಗುವ ನವೆ, ಉರಿ ಭೂಮಿಗೂ ಆಗಿ ಪ್ರತಿ ರೋಧವನ್ನು ವ್ಯಕ್ತಪಡಿಸೀತು.
ಪ್ರಕೃತಿಯನವರತ ಮನುಜನ ತಿದ್ದುತ್ತಿರುವಂತೆ,
ವಿಕೃತಿಗೊಳಿಸುವನು ಅವನುಮ್ ಆಕೆಯಂಗಗಳ,
ಭೂ ಕೃಷಿಕ ರಸ ತಂತ್ರಿ ಶಿಲ್ಪಿ ವಾಹನ ಯಂತ್ರಿ,
ವ್ಯಾಕೃತಿಸರೇನವಳ? ಮಂಕುತಿಮ್ಮ.
ಪ್ರಕೃತಿ ಹೆಜ್ಜೆ ಹೆಜ್ಜೆಗೆ ಮನುಷ್ಯನನ್ನು ತಿದ್ದುತಿರಲು, ಮತ್ತೆ ಮತ್ತೆ ವಿಕೃತಿಗೊಳಿಸಲು ಮನುಷ್ಯ ಮುಖ ಮಾಡಿದ್ದಾನೆ. ಕೃಷಿಕನಿಗಾಗಲಿ, ತಂತ್ರಜ್ಞನಿಗಾಗಲಿ,ಶಿಲ್ಪಿಗಾಗಲಿ, ಪ್ರಕೃತಿಯನ್ನು ಬದಲಾಯಿಸಲು ಸಾಧ್ಯವೇ? ಎಂದು ಕೇಳುವ ಮಂಕುತಿಮ್ಮನಿಗೆ ಮತ್ತೊಮ್ಮೆ ಶರಣು
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…