#AdharCard | ಗೋವುಗಳಿಗೂ ಸಿದ್ಧವಾಗುತ್ತಿದೆ ಆಧಾರ್ ಕಾರ್ಡ್…! | ಗೋವುಗಳ ಕಳ್ಳ ಸಾಗಣಿಕೆಗೆ ಬೀಳುತ್ತಾ ಬ್ರೇಕ್..?

July 27, 2023
5:26 PM
ಪಶುಗಳಿಗೆ ಶೀಘ್ರವೇ ಆಧಾರ್ ಮಾದರಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುವುದು. ಪಶುಗಳ ಅಕ್ರಮ ಕಳ್ಳಸಾಗಾಣಿಕೆ ತಡೆಯುವುದು ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ಡೇಟಾ ವನ್ನು ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಕೆ.ಎನ್. ಶೈಲೇಶ್ ಹೊಳ್ಳ ಅವರ ಬರಹ ಇಲ್ಲಿದೆ..

2016ರ ಜನವರಿಯಿಂದ ಡಿಸೆಂಬರ್ ಅಂತ್ಯದ ವರೆಗೆ ಬಾಂಗ್ಲಾದೇಶಕ್ಕೆ ಕಳ್ಳಸಾಗಾಣಿಕೆ ಮೂಲಕ ಸಾಗಿಸುತ್ತಿದ್ದ ಸುಮಾರು 1.68 ಲಕ್ಷ ಗೋವುಗಳನ್ನು ಬಿ.ಎಸ್.ಎಫ್ ವಶಪಡಿಸಿಕೊಂಡಿತ್ತು. ಇದರ ಹತ್ತು ಹಲವು ಪಟ್ಟು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಈ ಸಮಯದಲ್ಲೇ ಸಾಗಾಟವಾಗಿರುವುದಾಗಿ ಅಂದಾಜಿಸಲಾಗಿತ್ತು. ಗಡಿ ಭಾಗದಲ್ಲಿ ಈ ರೀತಿ ಕಳ್ಳಸಾಗಾಣಿಕೆಯನ್ನು ತಡೆಯುವುದಕ್ಕಾಗಿ ಯೋಧರು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ ಇವರುಗಳ ಕಣ್ತಪ್ಪಿ ಅಕ್ರಮ ಗೋಸಾಗಾಟ ನಡೆಯುತ್ತಲೇ ಇರುವುದು ವರದಿಯಾಗಿತ್ತು. ಹೀಗಾಗಿ ಈ ಭಾಗದಲ್ಲಿ ಅಕ್ರಮ ಗೋಸಾಗಾಟ ತಡೆಯುವುದು ಕೇಂದ್ರ ಸರ್ಕಾರಕ್ಕೆ ಒಂದು ಸವಾಲಾಗಿತ್ತು.

Advertisement
Advertisement

ಈ ಹಿನ್ನಲೆಯಲ್ಲಿ ಗೋವುಗಳ ಕಳ್ಳಸಾಗಾಣಿಕೆಯನ್ನು ತಡೆಯುವ ಉದ್ದೇಶದಿಂದ ಮತ್ತು ಅವುಗಳ ವೈಜ್ಞಾನಿಕ ನಿರ್ವಹಣೆಗಾಗಿ ಎಲ್ಲಾ ಹಸು, ಕರು, ಎತ್ತು, ಎಮ್ಮೆ ಮತ್ತು ಕೋಣಗಳಿಗೆ ಆಧಾರ್ ಮಾದರಿಯಲ್ಲೇ ವಿಶಿಷ್ಟ ಗುರುತಿನಸಂಖ್ಯೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತು. ವಿಶೇಷವಾಗಿ ಅವನತಿಯ ಅಂಚಿನಲ್ಲಿರುವ ದೇಶಿ ಗೋವುಗಳ ಸಂತತಿಯನ್ನು ಕಟುಕರಿಂದ ರಕ್ಷಿಸಿ ಅವುಗಳನ್ನು ಸಂವರ್ಧಿಸುವ ಸಲುವಾಗಿ 2017 , ಜನವರಿಯಂದು ಗೋವುಗಳಿಗೆ ಆಧಾರ್ ಸಂಖ್ಯೆ ನೀಡುವ ಪ್ರಸ್ತಾಪ ಮಾಡಿತು.ಇದಕ್ಕೆ ಪೂರಕವಾಗಿ ಕೃಷಿ ಸಚಿವಾಲಯ ಪತ್ರಿಕಾ ಹೇಳಿಕೆಯೊಂದನ್ನು ನೀಡಿ, ದೇಶದಲ್ಲಿರುವ ಹಾಲು ಕೊಡುವ 85ಲಕ್ಷ ಪಶುಗಳಿಗೆ ಶೀಘ್ರವೇ ಆಧಾರ್ ಮಾದರಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುವುದು. ಪಶುಗಳ ಅಕ್ರಮ ಕಳ್ಳಸಾಗಾಣಿಕೆ ತಡೆಯುವುದು ಮತ್ತು ಪ್ರಾಣಿಗಳಿಗೆ ಸಂಬಂಧಿಸಿದ ಡೇಟಾ ವನ್ನು ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುವುದು.

ಆರಂಭದಲ್ಲಿ ಈ ಯೋಜನೆಯನ್ನು ಹಾಲು ಕೊಡುವ ಪಶುಗಳಿಗೆ ಮಾತ್ರ ಸೀಮಿತವಾಗಿಡಲು ಸರ್ಕಾರ ನಿರ್ಧರಿಸಿರುವುದಾಗಿಯೂ ತಿಳಿಸಿತು. ಕೇವಲ ಹಾಲು ಕೊಡುವ ಗೋವುಗಳಿಗಷ್ಟೇ ಈ ಯೋಜನೆ ಸೀಮಿತವಾದರೆ, ಉಳಿದ ಗೋವುಗಳನ್ನು ಅಕ್ರಮ ಕಸಾಯಿಖಾನೆಗಳಿಗೆ ಕಳ್ಳಸಾಗಣೆ ಮಾಡುವಾಗ ತಡೆಯುವುದು ಕಷ್ಟದ ಕೆಲಸವಾದೀತು ಎಂಬ ಬಲವಾದ ಮಾತು ನಂತರ ವ್ಯಾಪಕವಾಗಿ ಕೇಳಿಬರತೊಡಗಿತು. ಇದನ್ನರಿತ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ದೇಶದಲ್ಲಿರುವ ಎಲ್ಲಾ ಗೋವಂಶಗಳಿಗೂ ವಿಸ್ತರಿಸಲಾಗುವುದು ಎಂಬುದಾಗಿ ತಿಳಿಸಿತು.
ಈ ಯೋಜನೆಯ ಕುರಿತ ಚಿಂತನೆ ಈ ಹಿಂದೆಯೇ ಇತ್ತಾದರೂ, ಕೇಂದ್ರ ಕೃಷಿ ಸಚಿವಾಲಯದ ನೆರವಿನಿಂದ ಇದು ಮುಂಚೂಣಿಗೆ ಬರುವಂತಾಯಿತು. ಇದಕ್ಕಾಗಿ ಪಶು ಸಂಜೀವಿನಿ ಯೋಜನೆಯಡಿ ಇನ್‌ಫಾರ್ಮೇಶನ್ ನೆಟ್‌ವರ್ಕ್ ಆನ್ ಅನಿಮಲ್ ಹೆಲ್ತ್ ಆಂಡ್ ಪ್ರೊಡಕ್ಟಿವಿಟಿ (ಐಎನ್‌ಎಪಿಎಚ್)ನಲ್ಲಿ ಅಪ್ಲೋಡ್ ಮಾಡಲಾದ ಡೇಟಾವನ್ನು ಪರಿಗಣಿಸಿ ಮುಂದಿನ ಹೆಜ್ಜೆಯನ್ನಿಡಲು ಸಚಿವಾಲಯ ತೀರ್ಮಾನಿಸಿತು.

ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರುವ ಉದ್ದೇಶದಿಂದ ದೇಶದಾದ್ಯಂತ ಒಂದು ಲಕ್ಷಕ್ಕೂ ಅಧಿಕ ತಂತ್ರಜ್ಞರನ್ನು ಕೇಂದ್ರ ಸರ್ಕಾರ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿತು. ಇದರಲ್ಲಿ 12 ಅಂಕಿ ಇರುವ ಹಳದಿ ಬಣ್ಣದ ಪಾಲಿಯುರೇಥೇನ್ ಟ್ಯಾಗ್ ಅಥವಾ ಕಿವಿ ಓಲೆಯನ್ನು ಗೋವುಗಳ ಕಿವಿಗೆ ಅಳವಡಿಸಲು ತೀರ್ಮಾನಿಸಲಾಯಿತು. ಹೀಗೆ ಅಳವಡಿಸುವ ಪ್ರತಿ ಟ್ಯಾಗ್‌ಗೆ ಸುಮಾರು 8 ರೂಪಾಯಿಯ ಖರ್ಚು ಕಂಡುಬಂತು. ತೂಕದಲ್ಲಿ ಅತ್ಯಂತ ಹಗುರವಾಗಿದ್ದ ಈ 12 ಅಂಕಿಯ ಸಂಖ್ಯೆಯನ್ನು ತಂತ್ರಜ್ಞರು ಆನಂತರ ಟ್ಯಾಬ್‌ಲೆಟ್ ಮೂಲಕ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಯೋಜನೆಯನ್ನು ಸಿದ್ಧಪಡಿಸಲಾಯಿತು. ಹೀಗೆ ಇಂತಹ ವಿಶಿಷ್ಠ ಯೋಜನೆಯನ್ನು ಪಶುಸಂಗೋಪನಾ ಇಲಾಖೆ ಸಹಯೋಗದೊಂದಿಗೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಯಿತು.

ಸರ್ಕಾರ ನೀಡಿದ ಹೇಳಿಕೆ ಪ್ರಕಾರ ಸುಮಾರು 148 ಕೋಟಿ ರೂಪಾಯಿಯ ಯೋಜನೆ ಇದಾಗಿತ್ತು. ಹಾಗೆಯೇ ಒಂದು ವರ್ಷದ ಒಳಗೆ ಸುಮಾರು 8.8 ಕೋಟಿ ಹಸು ಹಾಗೂ ಎಮ್ಮೆಗಳಿಗೆ ಗುರುತಿನ ಚೀಟಿ ನೀಡುವ ಗುರಿಯನ್ನು ಹೊಂದಲಾಯಿತು. ಹೀಗಾಗಿ ದೇಶದ ಹಲವು ರಾಜ್ಯಗಳಲ್ಲಿ ಗೋವಂಶಗಳಿಗೆ ಕಿವಿ ಓಲೆ ಹಾಕುವ ಕಾರ್ಯ 2016ರಿಂದಲೇ ಆರಂಭವಾಯಿತು. ಈ ಮಹತ್ವದ ಯೋಜನೆಯಿಂದ ದೇಶದ ಒಟ್ಟು ಹಾಲು ಉತ್ಪನ್ನ 2020ರಲ್ಲಿ ದ್ವಿಗುಣವಾಗಿದ್ದು ಕಂಡುಬಂತು.

ಗೋಸಂರಕ್ಷಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ಪೀಠ ನೀಡಿದ್ದ ತೀರ್ಪುಗಳ ಹಿನ್ನೆಲೆಯಲ್ಲಿ ಅವುಗಳ ಸಂರಕ್ಷಣೆಯ ಕುರಿತಂತೆ ಒಂದು ಸ್ಪಷ್ಟ ನೀತಿ ನಿಯಮಗಳನ್ನು ರೂಪಿಸಬೇಕು ಎಂಬುದಾಗಿ ಆಗ್ರಹಿಸಿ ಹಲವು ಸಂಘ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡವನ್ನು ಹೇರಿದ್ದವು. ಉತ್ತರಾಖಂಡದ ಗೋಸಂರಕ್ಷಣಾ ಆಯೋಗದ ಸದಸ್ಯರಾಗಿದ್ದ ಗೌರಿ ಮೌಲೇಖಿ ಎಂಬುವವರು ಈ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನಗೊಳ್ಳದಿರುವ ಬಗ್ಗೆ ಕೇಂದ್ರ ಪರಿಸರ ಹಾಗೂ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಅದರಲ್ಲಿ ಅಂತರ್ ಇಲಾಖೆಯ ಸಮಿತಿ ನೀಡಿದ ಶಿಫಾರಸುಗಳನ್ನು ಉಲ್ಲೇಖಿಸಿ ಪ್ರತಿ ಪಶುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಅಥವಾ ಟ್ಯಾಗ್ ನೀಡಬೇಕು. ಅವುಗಳ ಮಾಲೀಕತ್ವವಿರುವ ಗೋಶಾಲೆ ಅಥವಾ ಡೇರಿ ಕೇಂದ್ರಗಳಿಗೂ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಬೇಕು. ಇದರ ಡೇಟಾ ತಾಲೂಕು ಮತ್ತು ರಾಜ್ಯ ಮಟ್ಟದ ಡೇಟಾ ಬ್ಯಾಂಕ್‌ನಲ್ಲಿರಬೇಕು. ಇಂತಹ ದಾಖಲೆಗಳಿದ್ದಾಗ ಮಾಲೀಕತ್ವ ಬದಲಾವಣೆ, ಮಾರಾಟ ಮತ್ತು ಖರೀದಿ ಪ್ರಕ್ರಿಯೆಗಳು ಸರಾಗವಾಗಲಿವೆ.ಹೀಗಾಗಿ ಇದನ್ನು ರಾಷ್ಟ್ರೀಯ ಆದ್ಯತೆಯ ಕಾರ್ಯಕ್ರಮವೆಂದು ಘೋಷಿಸಬೇಕು ಎಂಬುದಾಗಿ ಕೋರಿದ್ದರು.

ಈ ನಿಟ್ಟಿನಲ್ಲಿ ಗೋಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಗುಜರಾತ್‌ನ ಗೋಸೇವಾ ಮತ್ತು ಗೋಚಾರ ವಿಕಾಸ ಮಂಡಳಿ ದೇಶದಲ್ಲೇ ಪ್ರಪ್ರಥಮವಾಗಿ ವಿನೂತನ ಯೋಜನೆಯನ್ನು ಕೈಗೊಂಡು, ಗೋವುಗಳ ಚಲನವಲನ ಸಹಿತ ಸಮಗ್ರ ಮಾಹಿತಿ ನೀಡುವ ಮೈಕ್ರೋ ಚಿಪ್‌ಗಳನ್ನು ಗೋವುಗಳಿಗೆ ಅಳವಡಿಕೆ ಮಾಡಲು ಮುಂದಾಯಿತು. ಈ ಯೋಜನೆಯಲ್ಲಿ ಬೆಂಗಳೂರು ಮೂಲದ ನ್ಯಾನೊ ಕರ್ನಲ್ ಎಂಬ ಐಟಿ ಕಂಪನಿ ಕೂಡ ಭಾಗಿಯಾಗಿ, ತಾಂತ್ರಿಕ ನೆರವನ್ನು ನೀಡಿತು. ಈ ಯೋಜನೆ ಅನುಷ್ಠಾನಕ್ಕಾಗಿ ಗುಜರಾತ್ ಸರ್ಕಾರ ೨೦೧೭-೧೮ನೇ ಸಾಲಿನಲ್ಲಿ 2.78 ಕೋಟಿ ರೂಪಾಯಿ ಮಂಜೂರು ಮಾಡಿತು. ಈ ಮೂಲಕ ರಾಜ್ಯದಲ್ಲಿ ಮೊದಲ ಹಂತದಲ್ಲಿ ಸುಮಾರು ೫೦ ಸಾವಿರ ಹಸುಗಳಿಗೆ ಆರ್.ಎಫ್.ಐ.ಡಿ. ಅಂದರೆ ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್ ಡಿವೈಸ್ ಚಿಪ್‌ನ್ನು ಅಳವಡಿಸುವ ಗುರಿಯನ್ನು ಹೊಂದಲಾಯಿತು.

ಯೋಜನೆಯ ಅನುಷ್ಠಾನಕ್ಕಾಗಿ ‘ಜಿ.ಜಿ.ಜಿ.ವಿ.ಬಿ. ಗುಜರಾತ್ ಇನ್‌ಫೊ ಪೆಟ್ರೋ ಕಂಪನಿ’ ಜೊತೆಗೆ ಒಡಂಬಡಿಕೆಯನ್ನು ಸಹ ಮಾಡಿಕೊಳ್ಳಲಾಯಿತು. ನಂತರ ಯೋಜನೆಯಂತೆ ಆರ್.ಎಫ್.ಐ.ಡಿ. ಚಿಪ್‌ಗಳನ್ನು ಹಸುಗಳ ಕಿವಿಗೆ ಅಳವಡಿಸಿ ಪ್ರತಿಯೊಂದಕ್ಕೂ ಪ್ರತ್ಯೇಕ ಗುರುತಿನ ಸಂಖ್ಯೆಯನ್ನು ನೀಡುವ ಯೋಜನೆ ಜಾರಿಯಾಯಿತು. ಪಶುಗಳು ಹಾಲು ನೀಡುವ ಪ್ರಮಾಣ, ವಯಸ್ಸು, ಆರೋಗ್ಯ, ಗೋಪಾಲಕರ ಹೆಸರು, ಹಸುವಿನ ವಲಸೆ ಸೇರಿದಂತೆ ನಾನಾ ಇನ್ನಿತರೆ ಮಾಹಿತಿಗಳನ್ನು ಡಿಜಿಟಲ್ ಮೂಲಕ ಲಭ್ಯವಾಗುವಂತೆ ಸಿದ್ಧಪಡಿಸಲಾಯಿತು. ಈ ಯೋಜನೆಯನ್ನು ರಾಜ್ಯದಲ್ಲಿರುವ ಸುಮಾರು 200ಕ್ಕೂ ಹೆಚ್ಚು ಗೋಶಾಲೆಗಳಲ್ಲಿ ಅನುಷ್ಠಾನ ಮಾಡಲಾಯಿತು.

ಈ ಜಿಪಿಎಸ್ ಇರುವ ಮೈಕ್ರೋಚಿಪ್‌ನಿಂದಾಗಿ ತಪ್ಪಿಸಿಕೊಂಡ ಹಸುಗಳನ್ನು ಹುಡುಕುವುದು ಸಲೀಸಾಗುತ್ತದೆ ಮತ್ತು ಇದರಿಂದ ಗೋವಧೆ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಗೋಕುಲ್ ಮಿಷನ್‌ನ ಅಧ್ಯಕ್ಷರಾದ ಡಾ. ವಲ್ಲಭ ಭಾಯಿ ಕಥಾರಿಯಾರವರು ಹೇಳಿಕೆಯೊಂದನ್ನು ನೀಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆಧಾರ್ ಸಂಖ್ಯೆಯ ಮಾದರಿಯಲ್ಲೇ ಗೋವುಗಳಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವುದಾಗಿ ಮತ್ತು ಹುಲಿ ಸಂರಕ್ಷಣೆಯ ಅಭಯಾರಣ್ಯದಂತೆ ಗೋಸಂರಕ್ಷಣೆಗೆ ಇಂತಹದ್ದೇ ಒಂದು ಯೋಜನೆ ರೂಪಿಸುವುದಾಗಿ ಕೇಂದ್ರ ಸರ್ಕಾರ ಈ ಮೊದಲು ಹೇಳಿದ್ದನ್ನು ಪುನರುಚ್ಚರಿಸಿದ್ದರು. ಇವರೊಂದಿಗೆ ದೇಶದ ಹಲವು ಗೋಸಂರಕ್ಷಕರು ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ದೇಶದಲ್ಲಿರುವ ಪ್ರತಿಯೊಂದು ಗೋವಿಗೂ ಇಂತಹ ಮೈಕ್ರೋಚಿಪ್‌ನ್ನು ಕೂಡಲೇ ಅಳವಡಿಸುವುದು ಸೂಕ್ತ. ಇದರಿಂದ ಹಲವು ಉಪಯೋಗಗಳಿದ್ದು, ಪ್ರಮುಖವಾಗಿ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಬಹುದು.

ಈಗಾಗಲೇ ದೇಶದಲ್ಲಿರುವ ಸಾಕಷ್ಟು ಕೆನಲ್ ಕ್ಲಬ್‌ಗಳು ತಮ್ಮಲ್ಲಿ ದಾಖಲಾದ ಎಲ್ಲಾ ನಾಯಿಗಳಿಗೆ ಇದೇ ರೀತಿಯ ಮೈಕ್ರೋ ಚಿಪ್‌ಗಳನ್ನು ಅಳವಡಿಸಿವೆ. ಇದು ಅವುಗಳ ಚಲನ ವಲನದ ಮೇಲೆ ನಿಗಾ ಇಡಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಅವುಗಳು ಒಂದೊಮ್ಮೆ ತಪ್ಪಿಸಿಕೊಂಡರೂ ಸಮೀಪದಲ್ಲೇ ಇದ್ದಲ್ಲಿ ಪತ್ತೆಹಚ್ಚಲು ಈ ಮೈಕ್ರೋ ಚಿಪ್ ನೆರವಾಗುತ್ತದೆ. ಇದೇ ಟೆಕ್ನಾಲಜಿಯನ್ನು ಗೋವುಗಳಿಗೂ ಅಳವಡಿಸಿದ್ದೇ ಆದಲ್ಲಿ ಅವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವಾಗ, ಇಲ್ಲವೇ ಕದ್ದು ಮುಚ್ಚಿ ವಾಹನಗಳಲ್ಲಿ ತುಂಬಿಕೊಂಡು ಹೋಗುವಾಗ ಸುಲಭವಾಗಿ ಪತ್ತೆ ಹಚ್ಚಬಹುದು. ಇದರಿಂದ ಗೋಕಳ್ಳರು ಸುಲಭವಾಗಿ ಸಿಕ್ಕಿಬೀಳುವುದರೊಂದಿಗೆ ಗೋಸಂಪತ್ತು ಅಳಿಯದೆ ಉಳಿದು, ರೈತ ಮತ್ತು ಗೋಆಧಾರಿತ ಕೃಷಿಯನ್ನು ಮುಂದಿನ ತಲೆಮಾರು ನೋಡುವಂತಾಗುತ್ತದೆ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದರು.

ಲೇಖನ : ಕೆ.ಎನ್. ಶೈಲೇಶ್ ಹೊಳ್ಳ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು
January 29, 2026
6:58 AM
by: ದ ರೂರಲ್ ಮಿರರ್.ಕಾಂ
ಕೃಷಿ ಆಧಾರಿತ ಕೈಗಾರಿಕೆ ಉತ್ತೇಜನದಿಂದ ರೈತರ ಭವಿಷ್ಯ ರೂಪಾಂತರ
January 29, 2026
6:55 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror