ಅರವಿಂದ ಕೇಜ್ರೀವಾಲ್ ನೇತೃತ್ವದಲ್ಲಿ ಬೆಳೆದ ಆಮ್ ಆದ್ಮಿ ಪಾರ್ಟಿ ಈಗ ಪಂಜಾಬ್ ರಾಜ್ಯಕ್ಕೆ ವಿಸ್ತರಣೆಗೊಂಡಿದೆ. ಇಡೀ ದೇಶದ ಎಲ್ಲಾ ರಾಜ್ಯಗಳಲ್ಲೂ ಘಟಕಗಳನ್ನು ಹೊಂದಿರುವ ಎಎಪಿ ರಾಜ್ಯದಲ್ಲೂ ಸಮಿತಿಯನ್ನು ಹೊಂದಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷ ಗಟ್ಟಿಯಾಗಲಿದೆಯೇ ? ಹೀಗೊಂದು ಪ್ರಶ್ನೆ ಈಗ ಇದೆ. ಈಗಾಗಲೇ ನಡೆಸಿದ ಸದಸ್ಯತ್ವ ಅಭಿಯಾನಕ್ಕೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎನ್ನಲಾಗಿದೆ. ಇದೀಗ ಮಾ.21 ರಂದು ಸುಳ್ಯದಲ್ಲಿ ಆಮ್ ಆದ್ಮಿ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಪಂಜಾಬ್ ಜನತೆಗೆ ಅಭಿನಂದನೆ, ವಿಜಯೋತ್ಸವ ಹಾಗೂ ಪಕ್ಷಕ್ಕೆ ಸೇರ್ಪಡೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ.
ದೆಹಲಿಯಲ್ಲಿ ಮಾತ್ರವೇ ಇದ್ದ ಎಎಪಿ ಈಗ ಪಂಜಾಬ್ ಪ್ರವೇಶಿಸಿದೆ. ಈ ನಡುವೆಯೇ ಇಡೀ ದೇಶದಲ್ಲಿ ಎಎಪಿ ಸಂಘಟನೆ ಬಲಗೊಳ್ಳುವತ್ತ ಸಾಗಿದೆ. ರಾಜ್ಯದಲ್ಲೂ ಘಟಕಗಳನ್ನು ಹೊಂದಿದ್ದ ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡದಲ್ಲೂ ಸಮಿತಿಯನ್ನು ಹೊಂದಿತ್ತು. ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇದೆ. ಕೆಲ ಉದ್ಯಮಿಗಳೂ ಎಎಪಿಯನ್ನು ಬೆಂಬಲಿಸುತ್ತಿದ್ದಾರೆ. ಇದೀಗ ದಕ್ಷಿಣ ಕನ್ನಡಜಿಲ್ಲೆಯಲ್ಲೂ ಎಎಪಿ ವಿಸ್ತಾರಗೊಳ್ಳುವ ಬಗ್ಗೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಈಗಾಗಲೇ ಆನ್ ಲೈನ್ ಮೂಲಕ ಸದಸ್ಯತ್ವ ಅಭಿಯಾನ ನಡೆಸಿದ್ದು ಹಲವಾರು ಮಂದಿ ಉತ್ತಮ ಪ್ರತಿಕ್ರಿಯೆ ತೋರಿದ್ದು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ, ಜಿಲ್ಲೆಯ ಪ್ರಮುಖ ಬೆಳೆ ಅಡಿಕೆಗಾರರ ಹಿತ ಕಾಪಾಡಲು , ಜಿಲ್ಲೆಯಲ್ಲಿ ಶಾಂತಿಯನ್ನು ಗುರಿಯಾಗಿಸಿಕೊಂಡು, ಯುವಕರಿಗೆ ಉದ್ಯೋಗದ ಒದಗಿಸುವ ಹಾಗೂ ಉದ್ಯಮಗಳ ಸ್ಥಾಪನೆಯನ್ನು ಗುರಿಯಾಗಿಸಿಕೊಂಡು ಐದು ಕ್ಷೇತ್ರದ ಪ್ರಮುಖರೊಂದಿಗೆ ಜಿಲ್ಲೆಯಲ್ಲಿ ಎಎಪಿ ಬಲವರ್ಧನೆಯ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ನ್ಯಾಯವಾದಿಯೊಬ್ಬರ ನೇತೃತ್ವದ ಈ ತಂಡದಲ್ಲಿ ವೈದ್ಯರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಸಂಘಟನೆಗಳ ಪ್ರಮುಖರು ಭಾಗಿಯಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇದೀಗ ಇದೆಲ್ಲದರ ಭಾಗಿವಾಗಿಯೇ ಎಂಬಂತೆ ರಾಜಕೀಯ ಕ್ಷೇತ್ರದ ಪ್ರಮುಖ ಅಂಗಳವಾದ ಸುಳ್ಯ ವಿಧಾನಸಭಾ ಕ್ಷೇತ್ರದಿಂದಲೇ ಈ ಹೆಜ್ಜೆ ಆರಂಭವಾಗಿದೆ ಎನ್ನಲಾಗುತ್ತಿದೆ. ಸುಳ್ಯದಲ್ಲಿ ಹಲವು ಪ್ರಮುಖರ ಜೊತೆ ಈಗಾಗಲೇ ಮಾತುಕತೆ ನಡೆಸಿರುವ ಎಎಪಿ ಅಭಿವೃದ್ಧಿಯ ಅಜೆಂಡಾ ಮುಂದಿಟ್ಟಿದೆ. ಇದೆಲ್ಲದರ ಭಾಗವಾಗಿ ಮಾ.21 ರಂದು ಸುಳ್ಯದಲ್ಲಿ ಸಾರ್ವಜನಿಕ ಸಭೆ ಆಯೋಜಿಸಿದ್ದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿಯವರು ಆಗಮಿಸುತ್ತಿದ್ದಾರೆ. ಇವರ ಜೊತೆಗೆ ರಾಜ್ಯ ಸಂಘಟನಾ ಮುಖ್ಯಸ್ಥ ವಿಜಯ್ ಶರ್ಮ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ , ಮಾಧ್ಯಮ ವಕ್ತಾರ ಜಗದೀಶ್ ವಿ ಸದಮ್ ಮೊದಲಾದ ಪ್ರಮುಖರೂ ಭಾಗವಹಿಸುವರು. ಈ ಸಂದರ್ಭ ಪಂಜಾಬ್ ಜನತೆಗೆ ಅಭಿನಂದನೆ, ವಿಜಯೋತ್ಸವ ಹಾಗೂ ಪಕ್ಷಕ್ಕೆ ಸೇರ್ಪಡೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದೇ ವೇಳೆ ಆಮ್ ಆದ್ಮಿ ಪಾರ್ಟಿಗೆ ಹಲವಾರು ಮಂದಿ ಸೇರ್ಪಡೆಯಾಗಲಿದ್ದು ಕೆಲವು ಪ್ರಮುಖರೂ ಕೂಡಾ ಎಎಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.