ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಈ ಬಾರಿ ಕುತೂಹಲ ಮೂಡಿಸಿದ ಕ್ಷೇತ್ರಗಳಲ್ಲಿ ಒಂದು. ಕ್ಷೇತ್ರದ ಅಲ್ಲಲ್ಲಿ ಮತದಾನ ಬಹಿಷ್ಕಾರ, ಪ್ರತಿಭಟನೆಯ ಬಿಸಿ ಒಂದು ಕಡೆಯಾದರೆ ಇನ್ನೊಂದು ಕಡೆ ಅಭ್ಯರ್ಥಿ ಘೋಷಣೆಗಾಗಿ ಪಕ್ಷಗಳು ಬಿಸಿ ಬಿಸಿ ಚರ್ಚೆಯಲ್ಲಿವೆ. ಈ ನಡುವೆಯೇ ಆಮ್ ಆದ್ಮಿ ಪಕ್ಷವು ಅಭ್ಯರ್ಥಿ ಘೋಷಣೆ ಮಾಡಿ ಪ್ರಚಾರ ಕಾರ್ಯವನ್ನೂ ಆರಂಭಿಸಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈಗಾಗಲೇ ಸುಳ್ಯದ ವಿವಿದೆಡೆ ಒಂದು ಸುತ್ತಿನ ಪ್ರವಾಸ ನಡೆಸಿ ಮೂಲಭೂತ ಸಮಸ್ಯೆಗಳ ಕಡೆಗೆ ಗಮನಹರಿಸಿ ಸುಳ್ಯಕ್ಕೆ ಪ್ರತ್ಯೇಕವಾದ ಪ್ರಣಾಳಿಕೆಗೆ ಮಾಹಿತಿ ಸಂಗ್ರಹಿಸಿದರು. ಇದೀಗ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಮೊದಲ ಸುತ್ತಿನಲ್ಲಿ ಕಾಲನಿಗಳ ಭೇಟಿ ನಡೆಸುತ್ತಿದ್ದಾರೆ. ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಎಎಪಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಹೇಳಿದ್ದಾರೆ. ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಹಾಗೂ ಎಎಪಿ ಜಿಲ್ಲಾ ಮುಖಂಡ ವೇಣುಗೋಪಾಲ ಪುಚ್ಚಪ್ಪಾಡಿ ಅವರು ಭೇಟಿ ನೀಡಿ ಪಕ್ಷದ ಪರವಾದ ಪ್ರಚಾರ ಕಾರ್ಯಕ್ಕೆ ವೇಗ ನೀಡಿದರು.
ಪ್ರಚಾರ ಕಾರ್ಯದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾದ್ಯಕ್ಷ ಅಶೋಕ್ ಎಡಮಲೆ, ಪಕ್ಷದ ಪ್ರಮುಖರಾದ ರಾಮಕೃಷ್ಣ ಬೀರಮಂಗಲ, ಖಲಂದರ್ ಎಲಿಮಲೆ, ರಶೀದ್ ಜಟ್ಟಿಪಳ್ಳ , ಗುರುಪ್ರಸಾದ್ ಮೇರ್ಕಜೆ, ಪ್ರಸನ್ನ ಎಣ್ಮೂರು, ಗಣೇಶ್ ಪ್ರಸಾದ್ ಕಂದಡ್ಕ, ಸಂಶುದ್ದಿನ್ ಕೆ ಎಂ ಮೊದಲಾದವರು ಇದ್ದರು.