ಆಮ್ ಆದ್ಮಿ ಪಕ್ಷದ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೃಷಿ ವಿಜ್ಞಾನಿ ಡಾ.ವಿಶುಕುಮಾರ್ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದರು. ಸುಳ್ಯದ ಅಭ್ಯರ್ಥಿ ಎಂಬಿಎ ಪದವೀಧರೆ ಸುಮನಾ ಬೆಳ್ಳಾರ್ಕರ್ ಅವರು ಎ.18 ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಪಕ್ಷದ ಕಾರ್ಯಕರ್ತರೊಂದಿಗೆ ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ವಿಶುಕುಮಾರ್ ಅವರು, ಶಿಕ್ಷಣ , ಆರೋಗ್ಯ ಹಾಗೂ ಗ್ರಾಮೀಣ ಅಭಿವೃದ್ಧಿ ಕಡೆಗೆ ಗಮನಹರಿಸುತ್ತೇನೆ ಎಂದರು.
ನಾಮಪತ್ರ ಸಲ್ಲಿಕೆ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಆಮ್ ಆದ್ಮಿ ಪಕ್ಷವು ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಮಾನ್ಯತೆ ಪಡೆದಿದೆ. ದೇಶದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೇವೆಗಳ ಕಡೆಗೆ ಗಮನಹರಿಸುತ್ತಿದೆ. ಎಲ್ಲರಿಗೂ ಉತ್ತಮ ಸೇವೆ ನೀಡುವುದೇ ಉದ್ದೇಶವಾಗಿದೆ ಎಂದರು. ಈ ನಿಟ್ಟಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಾಮಾಜಿಕ ಕಾಳಜಿ ಇರುವ ಸುಶಿಕ್ಷಿತರನ್ನೇ ಪಕ್ಷವು ಆಯ್ಕೆ ಮಾಡುತ್ತದೆ. ಪುತ್ತೂರಿನಲ್ಲಿ ಕೃಷಿ ವಿಜ್ಞಾನಿ ಸ್ಫರ್ಧೆ ಮಾಡಿದರೆ ಸುಳ್ಯದಲ್ಲಿ ಎಂಬಿಎ ಪದವೀಧರೆ ಸ್ಫರ್ಧೆ ಮಾಡುತ್ತಿದ್ದಾರೆ ಎಂದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ಸುಮನಾ ಬೆಳ್ಳಾರ್ಕರ್ ಅವರು ಎ.18 ರಂದು ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.