ಆಮ್ ಆದ್ಮಿ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗೆ ತಯಾರಿ ನಡೆಸುತ್ತಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಬೆಂಬಲ ಪಡೆಯಲು ಪಕ್ಷವು ಬಿರುಸಿನ ಪ್ರಚಾರ ನಡೆಸಲು ನಿರ್ಧರಿಸಿದ್ದು, ಪಕ್ಷದ ಹಿರಿಯ ಕಾರ್ಯಕರ್ತ ದೇವಿಪ್ರಸಾದ್ ಬಜೀಲಕೇರಿ ಅವರನ್ನು ಸಂಘಟನಾ ಉಸ್ತುವಾರಿಯಾಗಿ ನೇಮಿಸಿದೆ.
ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ನೇತೃತ್ವದಲ್ಲಿ ನಡೆದ ಸದಸ್ಯರ ಸಭೆಯಲ್ಲಿಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರವು ನಗರದ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿರುವುದರಿಂದ ನಮ್ಮಪಕ್ಷದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಹೆಚ್ಚಿನ ಜನರನ್ನು ತಲುಪಲು ನಾವು ಹೆಚ್ಚಿನ ಪ್ರಯತ್ನವನ್ನು ಮಾಡಬೇಕು ಎಂದು
ಸಂತೋಷ್ ಕಾಮತ್ ಹೇಳಿದರು.
ನೂತನ ಜವಾಬ್ದಾರಿಯನ್ನು ಸ್ವೀಕರಿಸಿ ಮಾತನಾಡಿದ ದೇವಿಪ್ರಸಾದ್ ಬಜಿಲಕೇರಿ ಮಾತನಾಡಿ, ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಕೋಮುವಾದ ತಾಂಡವವಾಡುತ್ತಿದೆ. ರಾಜಕೀಯ ಕಲುಷಿತಗೊಂಡಿದೆ. ಇದೇ ಎಲ್ಲ ಸಮಸ್ಯೆಗಳಿಗೂ ಮೂಲವಾಗಿದೆ. ರಾಜಕೀಯ ಕೆಟ್ಟದ್ದು ಎಂದು ಭಾವಿಸಿ ಜನ ದೂರ ಉಳಿದುದರಿಂದ ಪರೋಕ್ಷವಾಗಿ ಕೆಟ್ಟ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತಿದೆ. ಕೆಟ್ಟ ವ್ಯವಸ್ಥೆವನ್ನು ತಡೆಯಲು ಸಾಧ್ಯವಿಲ್ಲವೇ? ದೆಹಲಿ ಮತ್ತು ಪಂಜಾಬ್ ಅದನ್ನು ಮಾಡಬಹುದಾದರೆ, ನಾವೇಕೆ ಮಾಡಬಾರದು? ಎಂದು ಹೇಳಿದರು. ಪಕ್ಷದ ಉತ್ತಮ ಆಡಳಿತ, ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಮಾಧ್ಯಮ ಉಸ್ತುವಾರಿ ವೆಂಕಟೇಶ್ ಎನ್. ಬಾಳಿಗಾ ಸ್ವಾಗತಿಸಿದರು. ಎಎಪಿ ದಕ್ಷಿಣ ಕನ್ನಡ ಅಧ್ಯಕ್ಷ ಸಂತೋಷ್ ಕಾಮತ್ ಅವರು ಪಕ್ಷದ ಟೋಪಿ ಮತ್ತು ಶಾಲು ನೀಡಿ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಿದರು.
ಆಮ್ ಆದ್ಮಿ ಪಕ್ಷದ ದಕ್ಷಿಣ ಕನ್ನಡದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ ಮತ್ತು ಮಂಗಳೂರು ದಕ್ಷಿಣ ಸಂಘಟನಾ ಉಸ್ತುವಾರಿ ದೇವಿಪ್ರಸಾದ್ ಬಜಿಲಕೇರಿ ಅವರು ಸದಸ್ಯರೊಂದಿಗೆ ಪಕ್ಷದ ಕಾರ್ಯತಂತ್ರದ ಕುರಿತು ಸಂವಾದಾತ್ಮಕ ಅಧಿವೇಶನ ನಡೆಸಿದರು.
ಕರಾವಳಿ ವಲಯ ಅಧ್ಯಕ್ಷ ಜೆ.ಪಿ.ರಾವ್, ಪಕ್ಷದ ಸದಸ್ಯರಾದ ಶಾನನ್ ಪಿಂಟೋ, ರೋಶನ್ ಪೆರಿಸ್, ನೈಜೆಲ್ ಅಲ್ಬುಕರ್ಕ್ (ಎಂಸಿಸಿ ಸಿವಿಕ್ ಗ್ರೂಪ್ ಸಹ- ಸಂಸ್ಥಾಪಕ), ರವಿಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು. ಕೋಶಾಧಿಕಾರಿ ಅವ್ರೆನ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.