ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯನ್ನು ಮುಂದಿರಿಸಿಕೊಂಡು ಆಮ್ ಆದ್ಮಿ ಪಾರ್ಟಿಯು ಸುಳ್ಯದಲ್ಲಿ ಹೆಜ್ಜೆ ಇರಿಸಿದ್ದು ಇದೀಗ ಮಾ. 21 ರಂದು ಕಾರ್ಯಕರ್ತರ ಸಮಾವೇಶ ಹಾಗೂ ವೃತ್ತಿಪರ, ಸಾಮಾಜಿಕ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ದ. ಕ ಮತ್ತು ಉಡುಪಿ ಜಿಲ್ಲಾ ಎಎಪಿ ಉಸ್ತುವಾರಿ ಅಶೋಕ್ ಎಡಮಲೆ ತಿಳಿಸಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆಮ್ ಆದ್ಮಿ ಪಕ್ಷದ ಪಂಜಾಬ್ ಗೆಲುವನ್ನು ಆಚರಿಸಲು ಮತ್ತು ಸ್ಥಳೀಯವಾಗಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಕ್ಷದ ಕಾರ್ಯಕರ್ತರ ಸಭೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ. ಇದೇ ವೇಳೆ ಪಕ್ಷ ಸೇರ್ಪಡೆ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು. ಮದ್ಯಾಹ್ನ 2.30 ಕ್ಕೆ ಕಾನತ್ತಿಲ ದೇವಮ್ಮ ಸಂಕೀರ್ಣ ಸಭಾಂಗಣ ದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು ಸುಳ್ಯದ ಪ್ರಸಿದ್ಧ ವೃತ್ತಿಪರರು ಮತ್ತು ಸಾಮಾಜಿಕ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಸಂಜೆ 4 ಕ್ಕೆ ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.
ಆಪ್ ರಾಜ್ಯ ಸಂಚಾಲಕ ಹಾಗೂ ರಾಷ್ಟೀಯ ಕಾರ್ಯಕಾರಿಣಿ ಸದಸ್ಯರಾದ ಪೃಥ್ವಿ ರೆಡ್ಡಿ, ರಾಜ್ಯ ಸಂಘಟನಾ ಉಸ್ತುವಾರಿ ವಿಜಯ್ ಶರ್ಮ, ರಾಜ್ಯ ವಕ್ತಾರ ಜಗದೀಶ ಸದಮ್, ರಾಜ್ಯ ಸಂಘಟನಾ ಕಾರ್ಯದರ್ಶಿ ದರ್ಶನ್ ಜೈನ್, ರಾಜ್ಯ ಯುವ ಘಟಕದ ಸಂಚಾಲಕ ಮುಕುಂದ ಗೌಡ, ಬೆಂಗಳೂರು ನಗರ ಸಹ ಸಂಚಾಲಕ ಸುರೇಶ ರಾಥೋಡ್, ದ. ಕ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಅಶೋಕ್ ಎಡಮಲೆ, ದ.ಕ. ಜಿಲ್ಲಾ ಸಂಚಾಲಕ ರಾಜೇಂದ್ರ ಕುಮಾರ್, ಉಡುಪಿ ಜಿಲ್ಲಾ ಸಂಚಾಲಕ ಸ್ಟಿಫೆನ್ ರಿಚರ್ಡ್ ಲೋಬೊ, ಮೊದಲಾದ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪಕ್ಷ ಸೇರ್ಪಡೆಗೆ ಅನೇಕರು ಉತ್ಸಾಹ ತೋರಿದ್ದು ಯುವಕರೂ ಮುಂದೆ ಬಂದಿದ್ದಾರೆ. ಈಗಾಗಲೇ ಹಲವು ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಲಾಗಿದೆ. ಸಂಪಾಜೆಯಿಂದ ತೊಡಗಿ ಕಡಬದವರೆಗೆ ಸುಳ್ಯ ವಿಧಾನಸಭಾ ಕ್ಷೇತ್ರ ವಿವಿದೆಡೆಯಿಂದ ಜನರು ಆಮ್ ಆದ್ಮಿಯತ್ತ ಆಸಕ್ತಿ ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿಸೇರ್ಪಡೆಯ ಬಗ್ಗೆ ಜನರಿಗೆ ತಿಳಿಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಸಂಚಾಲಕ ರಶೀದ್, ಜೊತೆ ಕಾರ್ಯದರ್ಶಿ ದೀಕ್ಷಿತ್ ಉಪಸ್ಥಿತರಿದ್ದರು.