ಭ್ರಷ್ಟಾಚಾರ ರಹಿತ ಆಡಳಿತ, ಅಭಿವೃದ್ಧಿ ಪರವಾದ ಆಡಳಿತವೇ ಎಎಪಿ ಗುರಿಯಾಗಿದ್ದು, ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಕಾರ್ಯ ಆರಂಭವಾಗಿದೆ. ತಳಮಟ್ಟದಿಂದಲೂ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರದಲ್ಲಿ ಈ ಬಾರಿ ಎಎಪಿ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಹೇಳಿದರು.
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿರುವ ಹಿನ್ನಲೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಸುಳ್ಯದ ವರ್ತಕರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡ ಸಂಭ್ರಮಾಚರಣೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಆಮ್ ಆದ್ಮಿ ಪಕ್ಷವು ರಾಜ್ಯದಲ್ಲೂ ಸಂಘಟನೆಯಾಗುತ್ತಿದೆ, ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿ ಕರ್ನಾಟಕದಲ್ಲಿ ಪ್ರಬಲ ಪಕ್ಷವಾಗಿ ಹೊರ ಬರಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ರಾಜಕೀಯ ರಂಗಕ್ಕೆ ಎಎಪಿ ಹೊಸದಿಕ್ಕು ನೀಡಲಿದೆ ಎಂದು ಸಂತೋಷ್ ಕಾಮತ್ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ್ ಎಡಮಲೆ ಮಾತನಾಡಿ, ಆಮ್ ಆದ್ಮಿ ಪಾರ್ಟಿಯು ಈಗಾಗಲೇ ದೆಹಲಿ ಹಾಗೂ ಪಂಜಾಬ್‌ನಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಅಭಿವೃದ್ಧಿ ಪರವಾದ ಆಡಳಿತ ನೀಡುತ್ತಿರುವುದರಿಂದ ದೆಹಲಿಯಲ್ಲಿ ಜನರಿಗೆ ಹತ್ತಿರವಾಗಿದೆ, ಈ ಬಾರಿ ದೆಹಲಿ ಪಾಲಿಕೆ ಚುನಾವಣೆಯಲ್ಲೂ ಜಯಭೇರಿ ಬಾರಿಸಿದೆ. ಇದೀಗ ದೇಶದ ಹಲವು ರಾಜ್ಯಗಳಲ್ಲಿ ಕೆಲಸ ಆರಂಭಿಸಿದೆ ಎಂದರು. ಬಿಜೆಪಿಯು ಚುನಾವಣೆ ಸಮೀಪಿಸಿದಾಗ ಗುದ್ದಲಿ ಪೂಜೆ ಆರಂಭಿಸಿಸುತ್ತದೆ, ಇದಕ್ಕೆ ಪ್ಲೆಕ್ಸ್‌ಗಳು ರಾರಾಜಿಸುತ್ತವೆ. ಚುನಾವಣೆ ಬಳಿಕ ಮುಂದಿನ ಚುನಾವಣೆಯವರೆಗೂ ಮತ್ತೆ ಅಭಿವೃದ್ಧಿಯಾಗದೇ ಇರುವುದು ಕಂಡುಬರುತ್ತಿದೆ ಎಂದು ಅಶೋಕ್ ಎಡಮಲೆ ಹೇಳಿದರು.
ಎಎಪಿ ಮುಖಂಡರಾದ ಪ್ರಸನ್ನ ಎಣ್ಮೂರು ಮಾತನಾಡಿ ಚುನಾವಣೆಯಲ್ಲಿ ಪಕ್ಷಗಳು ಗೆಲ್ಲುತ್ತವೆಯೇ ಹೊರತು ಜನರು ಗೆಲ್ಲುವುದಿಲ್ಲ. ಅನೇಕ ವರ್ಷಗಳಿಂದಲೂ ಈ ಪರಂಪರೆ ನಡೆದುಕೊಂಡು ಬಂದಿದೆ. ಚುನಾವಣೆಯ ಬಳಿಕ ನಿಯಂತ್ರಣ ಮಾಡುವ ವ್ಯವಸ್ಥೆ ಬದಲಾಗಿ ಆಡಳಿತ ಮಾಡುವ ವ್ಯವಸ್ಥೆ ಬರಬೇಕಿದೆ. ಎಎಪಿಯು ಭ್ರಷ್ಟಾಚಾರ ರಹಿತವಾಗಿ ಅಭಿವೃದ್ಧಿ ಪರವಾದ ಆಡಳಿತ ಮಾಡುತ್ತಿದೆ, ಹೀಗಾಗಿ ಎಎಪಿ ಬೆಳೆಯುತ್ತಿದೆ ಎಂದರು.
ಆಮ್ ಆದ್ಮಿ ಪಾರ್ಟಿಯ ಸುಳ್ಯ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಸುಮನ ಬೇಳ್ಳಾರ್ಕರ್ ಮಾತನಾಡಿ ಸುಳ್ಯದ ಜನರ ಸೇವೆ ಮಾಡುವ ಉದ್ದೇಶ ಇದೆ. ಅಭಿವೃದ್ಧಿ ಪರವಾದ ಯೋಚನೆಯನ್ನು ಇರಿಸಿಕೊಂಡಿರುವ ಎಎಪಿಯ ಮೂಲಕ ಸ್ಫರ್ಧೆಗೆ ಬಯಸಿದ್ದೇನೆ. ಮುಂದೆ ಸುಳ್ಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಜನರ ಸಂಪರ್ಕದ ವೇಳೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಎಎಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಶೀದ್ ಜಟ್ಟಿಪಳ್ಳ, ಪುತ್ತೂರು ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ಡಾ.ವಿಶುಕುಮಾರ್, ಎಎಪಿ ಪ್ರಮುಖರಾದ ನವೀನ್‌ಚಂದ್ರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಸಂಪರ್ಕ ಅಭಿಯಾನದ ಸಂಚಾಲಕ ಗಣೇಶ್ ಪ್ರಸಾದ್ ಕಂದಡ್ಕ ಸ್ವಾಗತಿಸಿದರು. ಖಲಂದರ್ ಎಲಿಮಲೆ ಕಾರ್ಯಕ್ರಮ ನಿರೂಪಿಸಿದರು.