ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಸುಮನಾ ಬೆಳ್ಳಾರ್ಕರ್ ಹಾಗೂ ಪಕ್ಷದ ಮುಖಂಡರು ಮಂಗಳವಾರ ಗುರುಪ್ರಸಾದ್ ಮೇರ್ಕಜೆ ನೇತೃತ್ವದಲ್ಲಿ, ಅಮರಮೂಡ್ನೂರು ಗ್ರಾಮದ ಮುಂಡಕಜೆ ವಾರ್ಡ್ ನಿಂದ ಪ್ರಚಾರ ಅಭಿಯಾನ ಹಾಗೂ ಅಧ್ಯಯನ ಪ್ರವಾಸ ಆರಂಭಿಸಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಗುರಿ ಇರಿಸಿಕೊಂಡು ಆಮ್ ಆದ್ಮಿ ಪಕ್ಷವು ಹೆಜ್ಜೆ ಹಾಕಿದೆ. ಸುಳ್ಯದ ಗ್ರಾಮೀಣ ಭಾಗಗಳು ಹಾಗೂ ನಗರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಯೋಜನೆಗಳನ್ನು ಹಾಕಿಕೊಂಡಿದೆ. ಇದರ ಜೊತೆಗೆ ಗ್ರಾಮೀಣ ಭಾಗದ ಸಂಪರ್ಕ ನಡೆಸಿ ಸಮಸ್ಯೆಗಳ ಬಗ್ಗೆ ಅಧ್ಯಯನ ಹಾಗೂ ಪರಿಹಾರದ ಬಗ್ಗೆ ಗ್ರಾಮಸ್ಥರ ಜೊತೆಗೆ ಸಭೆ ನಡೆಸುತ್ತಿದೆ. ಇದರ ಮೊದಲ ಭಾಗವಾಗಿ ಸುಳ್ಯ ಶಾಸಕರ ವಾರ್ಡ್ ನಿಂದಲೇ ಸಭೆ ಆರಂಭಿಸಿದೆ. ಪರಿಶಿಷ್ಟ ವರ್ಗದ ನಿವಾಸಿಗಳ ಮುಂಡಕಜೆ ವಾರ್ಡಿನಲ್ಲಿ ಎರಡು ಮೂರು ದಶಕದಿಂದ ರಸ್ತೆಯ ನಿರ್ಲಕ್ಷ್ಯ, ಮನೆ ನಿವೇಶನ ದಾಖಲಾತಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಇತ್ಯಾದಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಅಲ್ಲಿನ ನಾಗರಿಕರೊಂದಿಗೆ ವಿಸ್ತಾರವಾದ ವಿಚಾರ ವಿಮರ್ಶೆ ನಡೆಸಿತು.
ಸ್ಥಳೀಯ ನಾಯಕರಾದ ಸುರೇಶ್ ಮುಂಡಕಜೆ ನೇತೃತ್ವದಲ್ಲಿ ಅನೇಕರು ಪಕ್ಷ ಸೇರ್ಪಡೆಗೊಂಡು, ಬದಲಾವಣೆಯ ಜನಸಾಮಾನ್ಯರ ಹೊಸ ರಾಜಕಾರಣವನ್ನು ಭದ್ರಗೊಳಿಸಲು ಒಗ್ಗೂಡಿ ಕೆಲಸ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಎಪಿ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಶೋಕ ಎಡಮಲೆ ಪಕ್ಷದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಮಾತನಾಡಿದರು. ಎಎಪಿ ಮುಖಂಡರಾದ ರಶೀದ್ ಜಟ್ಟಿಪಳ್ಳ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗ್ರಾಮ ಸಂಪರ್ಕ ಅಭಿಯಾನದ ಸಂಯೋಜಕ ಗಣೇಶ್ ಪ್ರಸಾದ್ ಕಂದಡ್ಕ, ರಾಮಕೃಷ್ಣ ಬೀರಮಂಗಲ, ಯಶವಂತ ಕುಡೆಕಲ್ಲು ಉಪಸ್ಥಿತರಿದ್ದರು.