ತುಳು ನಾಡಿನ ಬಹುತೇಕ ಆಚರಣೆಗಳು ಪ್ರಕೃತಿ, ಪರಿಸರಕ್ಕೆ ಹೊಂದಿಕೊಂಡಿರುವ ಆಚರಣೆಗಳು. ಅಂತಹದೊಂದು ಆಚರಣೆಯಲ್ಲಿ ಆಟಿ ತಿಂಗಳು ಕೂಡಾ ಒಂದು. ಈ ಒಂದು ತಿಂಗಳು ಪ್ರಕೃತಿಗೆ ಪೂರಕವಾದ ಆಚರಣೆಗಳು, ಆಹಾರಗಳು, ಪದ್ಧತಿಗಳು, ಸಂಪ್ರದಾಯಗಳು ಇರುತ್ತವೆ. ಇಂದು ಆಟಿಯಲ್ಲಿ ಬರುವ ಅಮವಾಸ್ಯೆ. ಅದು ಕೂಡಾ ವಿಶೇಷವೇ ಆಗಿದೆ.
ಸಾಮಾನ್ಯವಾಗಿ ನಾವು , ದಕ್ಷಿಣ ಕನ್ನಡದವರು ಹಬ್ಬಗಳನ್ನು ಆಚರಿಸುವುದು ಕಡಿಮೆ. ಚೌತಿ, ದೀಪಾವಳಿ, ಆಯುಧಪೂಜೆಗಳ ಆಚರಣೆ ಹೆಚ್ಚಿನ ಮನೆಗಳಲ್ಲಿ ಆಚರಿಸುತ್ತೇವೆ. ಉಳಿದಂತೆ ಪತ್ತನಾಜೆ, ಕೆಡ್ಡಸ, ನವರಾತ್ರಿ, ಅಷ್ಟಮಿ ಮೊದಲಾದವುಗಳು ತರವಾಡು ಮನೆಗಳಲ್ಲಿ ಮಾತ್ರ ಆಚರಿಸುವುದು ಕಂಡು ಬರುತ್ತದೆ . ನನಗೆ ಹೆಮ್ಮೆಯೆನಿಸುತ್ತದೆ. ನಮ್ಮ ಆಚರಣೆಗಳಲ್ಲಿ ಗೌಜಿ ಗದ್ಧಲಗಳಿಲ್ಲ, ತೋರಿಕೆಯ ಕ್ರಮಗಳಿಲ್ಲ. ಅರ್ಥವಿಲ್ಲದ ಆಚರಣೆಗಳಿಲ್ಲ. ನೇರಾ ನೇರಾ ಪ್ರಕೃತಿಯಲ್ಲಿ ಮಿಳಿತವಾದುದು. ಪ್ರತಿಯೊಂದು ನಮ್ಮ ಆಚರಣೆಗಳಿಗೂ , ಪ್ರಕೃತಿಯ ಬದಲಾವಣೆಗೂ ಹತ್ತಿರದ ಸಂಬಂಧವಿದೆ. ಮಳೆ , ಬಿಸಿಲು, ಚಳಿಯ ನೇರ ಪ್ರಭಾವ ನಮ್ಮ ಆಚರಣೆಗಳಲ್ಲಿವೆ. ನಮ್ಮ ಹಿರಿಯರು ವ್ಯವಸ್ಥಿತವಾಗಿ ನಮ್ಮ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಆಯಾ ತಿಂಗಳಿಗನುಗುಣವಾಗಿ ನಮ್ಮ ಹಬ್ಬಗಳಿವೆ . ಆಹಾರ ಪದ್ಧತಿಯೂ ಹಾಗೆಯೇ. ಈಗ ಆಟಿ ತಿಂಗಳು.
ಆಟಿ ತಿಂಗಳು ಎಂದರೆ ಕಾರ್ಕಟಕ ಮಾಸ ಅಥವಾ ಶೂನ್ಯ ಮಾಸ. ಜುಲೈ ತಿಂಗಳಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಿಂದ ಆಟಿ ಆರಂಭವಾಗಿ ಮುಂದಿನ ಸಂಕ್ರಮಣದವರೆಗೆ ಇರುತ್ತದೆ. ತುಳು ಸಂಪ್ರದಾಯದ ನಾಲ್ಕನೇ ತಿಂಗಳೇ ಆಟಿ…… ಈ ತಿಂಗಳಿನಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಗೃಹ್ರವೇಶ, ಮದುವೆ, ನಾಮಕರಣ ಮೊದಲಾದವುಗಳಿಗೆ ಈ ತಿಂಗಳಲ್ಲಿ ಆದ್ಯತೆ ಇಲ್ಲ. ಅದಕ್ಕಾಗಿ ಧಾರ್ಮಿಕರು ಈ ತಿಂಗಳನ್ನು ಬಿಟ್ಟು ಎಲ್ಲಾ ಶುಭಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಅಂದರೆ ಈ ತಿಂಗಳು ಅನಿಷ್ಟ ಅಂತಲ್ಲ, ಮಳೆಯ ಜೋರಾದ ರುದ್ರನರ್ತನ, ಒಮ್ಮೊಮ್ಮೆ ಬಿಸಿಲು ಇರುವುದರಿಂದ ಆರೋಗ್ಯ, ಪರಿಸರ ಎರಡೂ ಸಂಕಷ್ಟವಾಗಿರುತ್ತದೆ. ಹೀಗಾಗಿ ಆಟಿ ಎನ್ನುವುದೇ ತುಳುನಾಡಿನಲ್ಲಿ ಬಹಳ ಅರ್ಥವತ್ತಾಗಿರುತ್ತದೆ.
ಇದು ಹಳ್ಳಿಯ ಜನಜೀವನಕ್ಕೆ ಕಷ್ಟದ ತಿಂಗಳು. ” ಆಟಿ ಎಂದರೆ ಆಪತ್ತು, ಆಷಾಡ ಅಂದರೆ ಅಮವಾಸ್ಯೆ” ವರುಷವಿಡೀ ಕಷ್ಟ ಪಟ್ಟ ಕೃಷಿಕನ ಉಳಿವು ಅಳಿವು ಈ ತಿಂಗಳಿನ ಮಳೆಯ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿಯೇ ಈ ಗಾದೆ ಹುಟ್ಟಿ ಕೊಂಡಿರ ಬೇಕು . “ಆಟಿ ತಿಂಗಳ ಮಳೆ ಅಮೃತಕ್ಕೆ ಸಮ ” ಸಿಕ್ಕಾಪಟ್ಟೆ ಮಳೆ ಸುರಿಯುವುದರಿಂದ. ಈ ಸಮಯದಲ್ಲಿ ರೋಗ ರುಜಿನಗಳು ಹರಡುವ ಭಯ ಕಾಡುವುದರಿಂದ ನಿರೋಧ ಶಕ್ತಿ ಹೆಚ್ಚಿಸುವ ಆಹಾರ ವಸ್ತುಗಳನ್ನು ಸೇವಿಸುವುದು ಇಲ್ಲಿನ ಪದ್ಧತಿ.
ವಿಪರೀತ ಮಳೆ ಸುರಿಯುವುದರಿಂದ ಕೃಷಿ ಕಾರ್ಯಗಳು ಕುಂಟುತ್ತಾ ಸಾಗುತ್ತದೆ. ಆಟಿ ತಿಂಗಳು ಕಷ್ಟದ ತಿಂಗಳು ಆದರೂ ಮೆಚ್ಚಿನ ತಿಂಗಳು!


