ಕಳೆದ ಎರಡು ವಾರಗಳಿಂದ ದ ಕ ಜಿಲ್ಲೆಯ ಸಂಸದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಒಬ್ಬ ಸಂಸದರ ಬಗ್ಗೆ ಅತೀ ಕನಿಷ್ಟ ಪದಗಳಲ್ಲೂ ಚರ್ಚೆಯಾಗುವುದು ಜಿಲ್ಲೆಗೂ , ಅದರಲ್ಲೂ ಬುದ್ದಿವಂತರ ಜಿಲ್ಲೆಯಲ್ಲಿ ಇದು ಯೋಗ್ಯ ಬೆಳವಣಿಗೆಯಲ್ಲ. ಅಂದರೆ ಇಲ್ಲಿನ ಮತದಾರರು ಆತ್ಮಾವಲೋಕನ ಮಾಡಬೇಕಾದ ಅಗತ್ಯ ಇದೆ ಎನ್ನುವುದರ ಸೂಚಕ ಅಷ್ಟೇ ಇದು.
ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂದು ಇಡೀ ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಹಾಗಿದ್ದರೆ ಒಬ್ಬ ಸಂಸದರ ಬಗ್ಗೆ ಅತೀ ಕನಿಷ್ಟ ಶಬ್ದಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ ಎಂದರೆ ಇನ್ನೊಮ್ಮೆ ದ ಕ ಜಿಲ್ಲೆಯ ಮತದಾರರು ಯೋಚಿಸಲೇಬೇಕಿದೆ. ಜನಪ್ರತಿನಿಧಿಗಳ ಆಯ್ಕೆಯಲ್ಲೇ ತಪ್ಪಾಗಿದೆಯೋ ? ಪಕ್ಷಗಳು ಆಯ್ಕೆ ಮಾಡಿದ ನಾಯಕರು ಎಡವಿದ್ದಾರೆಯೇ ಎಂದು ? ಇಡೀ ದ ಕ ಜಿಲ್ಲೆಯಲ್ಲಿ ಇಂದು ಧರ್ಮಾಧಾರಿತ ರಾಜಕೀಯ ಹಾಗೂ ಜಾತೀಯವಾದಗಳು, ಮತೀಯ ಗಲಭೆಗಳು ಗೊತ್ತಿಲ್ಲದೆಯೇ ಬೆಳೆಯುತ್ತಿದೆ. ಭವಿಷ್ಯದಲ್ಲಿ ಇದು ಅಪಾಯಕಾರಿ ಸ್ಥಿತಿಗೆ ಹೋಗುವ ಲಕ್ಷಣಗಳೆಲ್ಲಾ ಈಗಾಗಲೇ ಗೋಚರಿಸಿಕೊಂಡಿದೆ. ಅಭಿವೃದ್ಧಿ ಪರವಾದ ಯೋಚನೆಗಳು ದೂರವಾಗುವ ಆತಂಕ ಇದೆ.
ಸಂಸದರ ಬಗ್ಗೆ, ಅಭಿವೃದ್ಧಿಯ ಹಿನ್ನೆಲೆಯಿಂದ ಚರ್ಚೆ ಮಾಡುವುದಾದರೆ ದ ಕ ಜಿಲ್ಲೆಯ ಹಲವು ಸಮಸ್ಯೆಗಳು ಕಳೆದ ಹತ್ತು ವರ್ಷಗಳಿಂದಲೂ ಇದೆ. ಅತೀ ಅಗತ್ಯವಾಗಿದ್ದ ಮಂಗಳೂರು-ಬೆಂಗಳೂರು ಹೆದ್ದಾರಿ ಇಂದಿಗೂ ಕುಂಟುತ್ತಾ ಸಾಗಿದರೆ, ಮಂಗಳೂರು ಸ್ಮಾರ್ಟ್ ಸಿಟಿ, ಉದ್ಯೋಗಾವಕಾಶಕ್ಕೆ ಬೇಕಾದ ವ್ಯವಸ್ಥೆ, ಬಂದರು ಅಭಿವೃದ್ಧಿ, ಗ್ರಾಮೀಣ ಭಾಗಗಳ ಮೂಲಭೂತ ಸೌಕರ್ಯ,.. ಹೀಗೇ ಹಲವು ಕಣ್ಣ ಮುಂದೆ ಬರುತ್ತದೆ. ಅದರಿಂದಲೂ ಆಚೆ ಬಂದರೆ ಬಿಜೆಪಿ ಎನ್ನುವುದು ಹಿಂದುತ್ವದ ಪಕ್ಷ ಎಂಬುದು ಸಾಮಾನ್ಯ ಜನರದೂ ಅಭಿಪ್ರಾಯ. ಹಾಗೆಂದು ಒಬ್ಬ ಜನಪ್ರತಿನಿಧಿಯಾಗಿ ಕೇವಲ ಹಿಂದೂಗಳಿಗೇ ಮಾತ್ರಾ ಕೆಲಸ ಮಾಡಲು ಸಾಧ್ಯವೇ ? ಆದರೆ ಇಲ್ಲಿ ಆ ನೆಲೆಯಲ್ಲೂ ಸಂಸದರ ಬಗ್ಗೆ ಚರ್ಚೆಯಾಗುತ್ತದೆ. ಪಕ್ಷದ ಕಾರ್ಯಕರ್ತರಿಗೆ, ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾದಾಗ ಏನೂ ಮಾಡಿಲ್ಲ ಎನ್ನುವುದೂ ಆರೋಪ. ಅದೇ ರೀತಿ ಎತ್ತಿನಹೊಳೆಯ ವಿಚಾರದಲ್ಲೂ ಮಂಗಳೂರಿನಿಂದ ಪಾದಯಾತ್ರೆ ಮಾಡಿ ಬೃಹತ್ ಸಮಾವೇಶ ಮಾಡಿ ಇದೀಗ ಯಾವ ಸುದ್ದಿಯೂ ಇಲ್ಲದೆಯೇ ಮೌನವಾಗಿರುವುದೂ ಇನ್ನೊಂದು ಭಾಗ. ಈಗ ಅಂತಹ ಹಲವು ಹೋರಾಟಗಳೂ ಈಗ ಮೇಲೆದ್ದು ಕಾಣುತ್ತವೆ.
ಹಾಗಿದ್ದರೆ ಬಿಜೆಪಿಯು ಅಭ್ಯರ್ಥಿ ಆಯ್ಕೆಯಲ್ಲಿ ಸೋತಿದೆಯೇ ? ಸಾಮಾಜಿಕ ಜಾಲತಾಣದಲ್ಲಿ ಅಷ್ಟೊಂದು ಚರ್ಚೆಯಾಗುತ್ತಿರಬೇಕಾದರೆ ಏಕೆ ಮೌನವಾಗುತ್ತಿದ್ದಾರೆ ?. ಮೊದಲ ಬಾರಿಗೆ ಸಂಸದ ಸ್ಥಾನದ ಅಭ್ಯರ್ಥಿಯಾಗಿ ಹೆಸರು ಬಂದಾಗ ಸುಳ್ಯದಲ್ಲಿ ಪಂಜದ ವಿಚಾರವೊಂದರ ಪ್ರತಿಭಟನಾ ಸಭೆಯಲ್ಲಿ ಉಗ್ರ ಭಾಷಣದ ನಂತರ ಸಭೆಯ ನಡುವೆಯೇ ಅವರು ನೇರವಾಗಿ ಆ ಪಕ್ಷದ ಶಕ್ತಿ ಕೇಂದ್ರಕ್ಕೆ ತೆರಳಿದ್ದರು. ಎರಡನೇ ಅವಧಿಯಲ್ಲಿ ಅನೇಕ ಕಾರ್ಯಕರ್ತರ ವಿರೋಧ ಇದ್ದರೂ , ಆಂತರಿಕ ವಿರೋಧ ಇದ್ದರೂ ಅಭ್ಯರ್ಥಿ ಆಯ್ಕೆ ನಡೆಯಿತು. ಈ ಸಮಯದಲ್ಲಿ ಪಕ್ಷದ ಆಂತರಿಕ ವಿಚಾರದಿಂದಲೇ, ಕಾರ್ಯಕರ್ತರ ಮಾತಿಗೆ ಬೆಲೆ ಸಿಗಲಿಲ್ಲ ಎಂದೇ ಉರಿಮಜಲು ರಾಮ ಭಟ್ಟರು ಹೋರಾಟದ ನೆಲೆಯಲ್ಲಿಯೇ ಸ್ಫರ್ಧೆ ಮಾಡಿದ್ದರು. ಅಂದು ಧರ್ಮ, ಹಿಂದುತ್ವದ ಆಧಾರದಲ್ಲಿಯೇ ಚುನಾವಣೆ ಗೆಲ್ಲಲಾಯಿತು. ಮೂರನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರಣ ಎದುರಾಯಿತು.
ಇದೀಗ ಚರ್ಚೆ ಆರಂಭವಾಗಿದೆ. ಸದ್ಯ ಕಾರ್ಯಕರ್ತರ ರಕ್ಷಣೆ ಬರುತ್ತಿಲ್ಲ ಎಂಬುದು ಚರ್ಚೆಯಾಗಿದೆ, ಅನೇಕರು ಪ್ರಶ್ನೆ ಮಾಡುವುದು ಅಭಿವೃದ್ಧಿಯ ಸಂಗತಿಗಳನ್ನು. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗಾಗಿ ಓಟು ಮಾಡಿರುವ ಅನೇಕ ಮಂದಿ ಈಗ ಅದೇ ಮಾದರಿಯ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ. ಉತ್ತರಪ್ರದೇಶದಲ್ಲಿ ಸುಮಾರು 300 ಕೋಟಿ ರೂಪಾಯಿ ಅನುದಾನದಲ್ಲಿ ಅತ್ಯಾಧುನಿಕ ರಸ್ತೆಯು ಕೇವಲ ಎರಡು ವರ್ಷದಲ್ಲಿ ಪೂರ್ತಿಯಾಗುತ್ತದೆ, ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಸುಮಾರು 900 ಕೋಟಿ ರೂಪಾಯಿಯ ಕಾರಿಡಾರ್ ಯೋಜನೆಯ ಒಂದನೇ ಹಂತ ಕೇವಲ ಎರಡು ವರ್ಷದಲ್ಲಿ ನಡೆಯುತ್ತದೆ. ಇಂತಹ “ಮೋದಿ ಮಾದರಿ” ಇಲ್ಲೇಕೆ ಕಷ್ಟ?. ಇಡೀ ರಾಜ್ಯದ ಪ್ರಮುಖ ಕೇಂದ್ರ ಮಂಗಳೂರು ಏಕೆ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದು ಜನರ ಪ್ರಶ್ನೆಯಾಗಿದೆ. ಪ್ರಧಾನಿಗಳ ಕ್ಷೇತ್ರದ ಅಭಿವೃದ್ಧಿಯ ಫೋಟೊ ಹಾಕಿ ಮಂಗಳೂರಿನಲ್ಲಿ ಕೂಡಾ ಮತ ಕೇಳುವುದೇ ? . ರಾಜ್ಯದ ಬಂದರು ನಗರಿ ಮಂಗಳೂರು. ಸಾಕಷ್ಟು ಅನುದಾನಗಳೂ ಇಲ್ಲಿಗೂ ಲಭ್ಯವಾಗಲು ಸಾಧ್ಯವಿದೆ. ಆದರೂ ಏಕೆ ಇಲ್ಲಿ ಸಣ್ಣ ಸಣ್ಣ ಕಾಮಗಾರಿಗಳೂ ವಿಳಂಬ ಆಗುತ್ತದೆ ? ಆದರ್ಶ ಗ್ರಾಮದಂತಹ ಪ್ರಧಾನಿಗಳ ಕನಸೂ ಏಕೆ ಸೊರಗಿದೆ ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಹೀಗಾಗಿ ಇದೆಲ್ಲಾ ಇಂದು ಚರ್ಚೆಯ ಹಂತ ದಾಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಚರ್ಚೆಯಾಗುತ್ತಿದೆ.
ಇದು ಮಂಗಳೂರು ಸಂಸದರ ಬಗ್ಗೆ ಮಾತ್ರಾ ಅಲ್ಲ ಕಳೆದ ಅನೇಕ ವರ್ಷಗಳಿಂದಲೂ ಆಯ್ಕೆಯಾಗುತ್ತಿರುವ ಸುಳ್ಯ ಕ್ಷೇತ್ರದಲ್ಲೂ ಇಂತಹದ್ದೇ ಚರ್ಚೆಗಳು ಇವೆ. ಆದರೆ ಭದ್ರಕೋಟೆಯಲ್ಲಿ ಇಂತಹ ಚರ್ಚೆಗಳು ಮಾತ್ರಾ ಆರಿ ಹೋಗುತ್ತವೆ ಅಷ್ಟೇ.
ಇದರ ಬೆನ್ನಿಗೇ ಈಗ ಧರ್ಮಾಧಾರಿತ ಚರ್ಚೆಗಳು, ಮತೀಯ ಚರ್ಚೆಗಳು ಹೆಚ್ಚಾಗಿವೆ. ಹಿಂದೆಲ್ಲಾ ಎಲ್ಲೋ ಅಲ್ಲಿ-ಇಲ್ಲಿ ಧರ್ಮದ ಕಾರಣದಿಂದ, ಮತೀಯ ಕಾರಣದಿಂದ ಸಂಘರ್ಷಗಳು ನಡೆಯುತ್ತಿದ್ದರೆ ಈಗ ಅಲ್ಲಲ್ಲಿ ಮತೀಯ ಸಂಘರ್ಷಗಳು ನಡೆಯುತ್ತಿವೆ. ಸಣ್ಣ ಸಣ್ಣ ಕಾರಣಗಳೂ ಸಂಘರ್ಷಕ್ಕೆ ಎಡೆಮಾಡಿವೆ. ಒಂದು ಹಂತದಲ್ಲಿ ಇಂತಹ ಸಂಗತಿಗಳೇ ಮತ ಪಡೆಯುವ ತಂತ್ರವಾಗುತ್ತಿದೆಯೋ ಎಂಬ ಆತಂಕವನ್ನು ಚಿಂತಕರು ಹೊರಹಾಕುತ್ತಾರೆ. ಇನ್ನೊಂದೆಡೆ ಹಿಂದುತ್ವ ಎನ್ನುವ ಆಧಾರದಲ್ಲಿಯೇ ಬೆಳೆಯುತ್ತಿದ್ದ ದ ಕ ಜಿಲ್ಲೆಯಲ್ಲಿ ಇದುವರೆಗೂ ಕಂಡುಬಾರದ ಜಾತೀಯ ಸಂಘರ್ಷಗಳು, ಓಲೈಕೆಗಳು ಈಗ ರಾಜಕೀಯ ಕಾರಣದಿಂದ ಹೆಚ್ಚಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಇದ್ದರೂ ಮತೀಯ ಗಲಭೆ, ಸಂಘರ್ಷಗಳು, ಜಾತೀಯ ಓಲೈಕೆಗಳೇ ಮತ ಗಳಿಸುವ ತಂತ್ರ ಎಂದೇ ಅನಿಸಿತೊಡಗಿದೆ. ಬುದ್ದಿವಂತರ ಜಿಲ್ಲೆಯಲ್ಲಿ ಮತೀಯ ಕಾರಣದಿಂದ, ಧರ್ಮದ ಕಾರಣದಿಂದ, ಜಾತಿಯ ಕಾರಣದಿಂದ ಚುನಾವಣೆಯಲ್ಲಿ ಗೆಲ್ಲುವ ಬದಲಾಗಿ ಅಭಿವೃದ್ಧಿಯ ಕಾರಣದಿಂದ ಯಾವಾಗ ಗೆಲುವು ಸಾಧ್ಯವಾದೀತೋ, ಅಂದು ಬಂದರು ನಗರದಲ್ಲಿ ಇನ್ನಷ್ಟು ಉದ್ಯೋಗಗಳು ಲಭ್ಯವಾದೀತು, ಅಭಿವೃದ್ಧಿಯ ವೇಗವೂ ಹೆಚ್ಚಾದೀತು. ಯಾವಾಗಲೂ, ಹೇಗಿದ್ದರೂ, ತಮ್ಮದೇ ಗೆಲುವು ಎಂಬ ಭ್ರಮೆ ಯಾವತ್ತೂ ಜನಸಾಮಾನ್ಯರಿಗೆ ಅಭಿವೃದ್ಧಿಯ ಹಿನ್ನಡೆಯೇ ಸರಿ.
ಇಷ್ಟೆಲ್ಲಾ ಚರ್ಚೆಗಳಾಗುತ್ತಿದ್ದರೂ ಅಭಿವೃದ್ಧಿಯ ವೈಫಲ್ಯ ಇದ್ದರೂ ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ವಿರೋಧ ಪಕ್ಷವೂ ಮೌನ ವಹಿಸಿದೆ. ಹೀಗಾಗಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಈಗ ಹಿನ್ನಡೆಯನ್ನು ಕಾಣುವಂತಾಗಿದೆ. ಪ್ರತೀ ಆಡಳಿತದಲ್ಲೂ ಪ್ರಭಲ ವಿರೋಧ ಪಕ್ಷ ಇರುವುದೂ ಆಡಳಿತ ಯಂತ್ರ ಚುರುಕಾಗಲೂ ಕಾರಣವಾಗುತ್ತದೆ.