ಅಡಿಕೆ ನಾಡು ವಿಸ್ತರಣೆಯಾಗುತ್ತಿದೆ. ಅದರ ಜೊತೆಗೇ ಚರ್ಚೆಯಾಗುತ್ತಿರುವುದು ಅಡಿಕೆ ಭವಿಷ್ಯ. ಅಡಿಕೆ ಮಾರುಕಟ್ಟೆ ಹೇಗಾಗಬಹುದು ಎನ್ನುವುದು ಅಡಿಕೆ ಬೆಳೆಗಾರರ ನಡುವೆ ಇರುವ ಪ್ರಶ್ನೆ. ಈ ನಡುವೆಯೇ ಅಡಿಕೆಯೆ ಪರ್ಯಾಯದ ಬಗ್ಗೆ ಚರ್ಚೆ, ಚಿಂತನೆ ಕೂಡಾ ನಡೆಯುತ್ತಿದೆ. ಇದೆಲ್ಲದರ ನಡುವೆ ಕಾಳುಮೆಣಸು ಕೃಷಿಯ ಬಗ್ಗೆ ಸದ್ದಿಲ್ಲದೆ ಹೊಸ ಪ್ರಯತ್ನ ನಡೆಸುತ್ತಿರುವವರು ಸುಳ್ಯ ತಾಲೂಕಿನ ಕೃಷಿಕ ಕರುಣಾಕರ.ಮುಂದೆ ಓದಿ..
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡಿನ ಆಕ್ರಿಕಟ್ಟೆಯ ಕೃಷಿಕ ಕರುಣಾಕರ. ಅನೇಕ ವರ್ಷಗಳಿಂದಲೂ ಅಡಿಕೆ ಕೃಷಿ ಮಾಡಿಕೊಂಡು ಬಂದವರು. ಈಚೆಗೆ ಕೆಲವು ವರ್ಷಗಳಿಂದ ಕಾಳುಮೆಣಸು ಕೃಷಿಯಲ್ಲಿ ಆಸಕ್ತಿ ವಹಿಸಿ ವಿವಿಧ ಪ್ರಯೋಗ ಮಾಡಿದರು. ಅಡಿಕೆ, ತೆಂಗಿನ ಮರದಲ್ಲಿ ಕಾಳುಮೆಣಸು ಬಳ್ಳಿಗಳು ಇತ್ತು. ಆದರೆ ಅಡಿಕೆ ಕೊಯ್ಲು ವೇಳೆ ಅಡಿಕೆ ಗೊನೆ ಬಿದ್ದು ಕಾಳುಮೆಣಸು ಬಳ್ಳಿಗಳು ಹಾಳಾಗುತ್ತಿತ್ತು. ಅದಕ್ಕಾಗಿ ಗ್ಲಿರಿಸೀಡಿಯಾದಲ್ಲಿ ಕಾಳುಮೆಣಸು ಬಳ್ಳಿ ನೆಡುವ ಮೂಲಕ ಹೊಸ ಪ್ರಯೋಗಗಳನ್ನು ನಡೆಸಲು ಮುಂದಾದರು. ಸುಮಾರು 300 ಗ್ಲಿರಿಸೀಡಿಯಾ ಗಿಡಗಳನ್ನು ನೆಟ್ಟು ಕಾಳುಮೆಣಸು ಬಳ್ಳಿಗಳನ್ನು ನೆಟ್ಟರು. ಅದರ ಯಶಸ್ಸಿನ ಬಳಿಕ ಈಗ ಪಿವಿಸಿ ಪೈಪ್ ಮೂಲಕ ಕಾಳುಮೆಣಸು ಬಳ್ಳಿ ನೆಡುವ ಪ್ರಯೋಗ ಮಾಡುತ್ತಿದ್ದಾರೆ. ಮುಂದೆ ಓದಿ
ಪಿವಿಸಿ ಪೈಪ್ ಕಾಂಕ್ರೀಟ್ ಮೂಲಕ ಲಂಬವಾಗಿ ನಿಲ್ಲಿಸಿ ಅದಕ್ಕೆ ಶೇಡ್ ನೆಟ್ ಅಳವಡಿಕೆ ಮಾಡಿ ಗಿಡ ನೆಟ್ಟಿದ್ದಾರೆ. ಗಿಡ ಮೇಲೆ ಬರುತ್ತಿದ್ದಂತೆಯೇ ಕಟಾವು ಮಾಡಲು ಅನುಕೂಲವಾಗುವಷ್ಟು ಎತ್ತರದವರೆಗೆ ಪೈಪ್ ಏರಿಸುವ ಯೋಚನೆಯನ್ನು ಮಾಡಿದ್ದಾರೆ ಕರುಣಾಕರ ಅವರು. ಇದ್ದ ರಬ್ಬರ್ ಮರಗಳನ್ನು ಕಡಿದು ಅಲ್ಲೂ ಕಾಳುಮೆಣಸು ಕೃಷಿಯನ್ನು ನಡೆಸುತ್ತಿರುವ ಕರುಣಾಕರ ಅವರು ಹೇಳುವ ಹಾಗೆ, ಪ್ರತಿ ದಿನವೂ ಶ್ರಮ ಬೇಡುವ ಕೃಷಿ ರಬ್ಬರ್. ಆದರೆ ಈಗ ಕಾರ್ಮಿಕರ ಕೊರತೆಯೂ ಇರುವುದರಿಂದ ರಬ್ಬರ್ ಕೃಷಿಗೆ ವಿದಾಯ ಹೇಳಿ ಕಾಳುಮೆಣಸು ಕೃಷಿಯತ್ತ ಮನಸ್ಸು ಮಾಡಿರುವುದಾಗಿ ಹೇಳುತ್ತಾರೆ. ಕಾಳುಮೆಣಸು ಕೃಷಿಗೆ ದಿನವೂ ಓಡಾಡಬೇಕೆಂದಿಲ್ಲ. ಒಂದು ದಿನ ಶ್ರಮ ನೀಡುವಲ್ಲಿ ವಿಳಂಬವಾದರೂ ಪರವಾಗಿಲ್ಲ ಎನ್ನುತ್ತಾರೆ. ಮುಂದಿನ ಎರಡು ವರ್ಷಗಳಲ್ಲಿ 20 ಕ್ವಿಂಟಾಲ್ ಕಾಳುಮೆಣಸು ಕಟಾವು ಮಾಡಬೇಕು ಎನ್ನುವ ಗುರಿಯಲ್ಲಿ ನಿರಂತರ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ...ಮುಂದೆ ಓದಿ..
ಕೃಷಿಯಲ್ಲಿ ಯಾವತ್ತೂ ಸೋಲು ಇಲ್ಲ. ಕೃಷಿಕನಾದವನು ಗಿಡ ನೆಡುವುದರಲ್ಲಿ ವಿಳಂಬ ಮಾಡಬಾರದು. ಅದೊಂದು ನಿರಂತರ ಪ್ರಕ್ರಿಯೆ. ಹೀಗಾಗಿ ಗಿಡ ಸಾಯುತ್ತದೆ ಎನ್ನುವ ಮನಸ್ಥಿತಿಯಲ್ಲಿ ಇರಲೇಬಾರದು. ವರ್ಷವೂ ಕಾಳುಮೆಣಸು ಬಳ್ಳಿ ನೆಡುತ್ತಲೇ ಹೋದರೆ ಯಾವ ಸಮಸ್ಯೆಯೂ ಇಲ್ಲ. ಗಿಡಗಳ ಆರೈಕೆ, ಪೋಷಕಾಂಶಗಳನ್ನು ನೀಡುವುದು ಹಾಗೂ ಸೂಕ್ತವಾದ ಗೊಬ್ಬರ ನೀಡುವುದು ಅಗತ್ಯವಾಗಿದೆ. ನನಗೂ ಈ ವಿಷಯದಲ್ಲಿ ಸರಿಯಾದ ಮಾಹಿತಿ ಸಿಗಲಿಲ್ಲ ಎನ್ನುತ್ತಾರೆ ಕರುಣಾಕರ ಅವರು. ಮುಂದೆ ಓದಿ..
ಅಡಿಕೆ ತೋಟದ ವಿಸ್ತರಣೆ, ಅಡಿಕೆಯ ವಿವಿಧ ರೋಗಗಳ ಬಗ್ಗೆಯೇ ಚರ್ಚೆಯಾಗುತ್ತಿರುವ ವೇಳೆ ಅಡಿಕೆಗೆ ಪರ್ಯಾಯ ಕೃಷಿಯ ಬಗ್ಗೆ ಯೋಚನೆಗಿಂತಲೂ ಪರ್ಯಾಯ ಬೆಳೆಯ ಕಡೆಗೆ ಗಮನಹರಿಸುವ ಮೂಲಕ ಕೃಷಿ ಬದುಕನ್ನು ಗಟ್ಟಿಗೊಳಿಸುವ, ಕೃಷಿ ಬದುಕು, ಭದ್ರವಾದ ಕೃಷಿಯ ಕೆಲಸದಲ್ಲಿರುವ ಕರುಣಾಕರ ಅವರ ಪ್ರಯತ್ನ, ಸಾಧನೆ ಮಾದರಿಯಾಗಿದೆ. ಅವರ ಕೃಷಿಯ ವಿಡಿಯೋ ಇಲ್ಲಿದೆ….