ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದು ಸರ್ವವಿಧಿತ. ವ್ಯಕ್ತಿಯ ಪ್ರತೀ ಕ್ಷಣ, ಪ್ರತೀ ದಿನವೂ ಕಲಿಕೆಯೇ. ಇದಕ್ಕೆ ಸಾಕ್ಷಿಯಾಗಿದ್ದಾರೆ ಗ್ರಾಮೀಣ ಭಾಗದ ಸಾಧಕ. ತನ್ನ 55 ನೇ ವಯಸ್ಸಿನಲ್ಲಿ ಸಂಸ್ಕೃತದಲ್ಲಿ 96 ಅಂಕ ಪಡೆದು ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರ ಬಳಿಯ ಕಟ್ಟದ ಶಂಕರ ಭಟ್ ಕಟ್ಟ ಅವರು ಸಾಧನೆ ಮಾಡಿರುವ ಕೃಷಿಕ.
ಮೈತ್ರೀ ಸಂಸ್ಕೃತಿ ಸಂಸ್ಕೃತ ಪ್ರತಿಷ್ಠಾನ ಗುರುಕುಲ ನಡೆಸಿ ಕೊಡುತ್ತಿರುವ ಅಂತರ್ಜಾಲ ಸಂಸ್ಕೃತ ತರಗತಿಯಲ್ಲಿ, ಡಾ.ಗಣಪತಿ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಸಂಸ್ಕೃತ ತರಗತಿಗಳು ನಡೆಯುತ್ತಿತ್ತು. ಸುಮಾರು 500 ಜನರು ಈ ತರಗತಿಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಎಲ್ಲಾ ವಯಸ್ಸಿನವರೂ ಭಾಗವಹಿಸುತ್ತಿದ್ದರು. ಆನ್‌ಲೈನ್ ತರಗತಿಯಲ್ಲಿ ಸುಳ್ಯ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶವಾದ ಕೊಲ್ಲಮೊಗ್ರ ಬಳಿಯ ಕಟ್ಟದ ಕೃಷಿಕ ಶಂಕರ ಭಟ್ ಅವರೂ ಭಾಗವಹಿಸಿದ್ದರು. ತಮ್ಮ 55 ನೇ ವಯಸ್ಸಿನಲ್ಲಿ ಆನ್‌ಲೈನ್ ಮೂಲಕ ಕುಳಿತು ಅತ್ಯಂತ ಶ್ರದ್ಧೆಯಿಂದ ಸಂಸ್ಕೃತ ಪಾಠದಲ್ಲಿ ಭಾಗವಹಿಸಿ, ಸಂಸ್ಕೃತ ಪ್ರವೇಶ ಪರೀಕ್ಷೆಯಲ್ಲಿ 96/100 ಅಂಕ ಪಡೆದು ಅತಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಈ ಸಾಧನೆ ಎಲ್ಲರ ಗಮನ ಸೆಳೆದಿದೆ.
ಇಲ್ಲಿ ಗ್ರಾಮೀಣ ಭಾಗದ ಅದರಲ್ಲೂ ಕೃಷಿಕ ಕುಟುಂಬದ ಶಂಕರ ಭಟ್ ಅವರ ಸಾಧನೆ ಗಮನಾರ್ಹವಾದರೆ, ಆಸಕ್ತಿ ಇದ್ದರೆ ಆನ್ ಲೈನ್ ಶಿಕ್ಷಣವು ಎಲ್ಲಾ ವಯಸ್ಸಿನವರಿಗೂ ಸಾಧ್ಯವಿದೆ. ಇನ್ನೊಂದು ಅಂಶವೆಂದರೆ ಸುಳ್ಯ ತಾಲೂಕಿನ ಅತ್ಯಂತ ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಪಡೆದು, ಅದರಲ್ಲೂ ಆನ್‌ಲೈನ್ ತರಗತಿ ಪಡೆಯುವಷ್ಟು ವೇಗದ ಇಂಟರ್ನೆಟ್ ಸಂಪರ್ಕವೂ ಸಾಧ್ಯವಾಗಿರುವುದು ಗ್ರಾಮೀಣ ಭಾಗದ ಸಂಪರ್ಕ ವ್ಯವಸ್ಥೆಯೂ ಇಂದು ಸುಧಾರಿಸುತ್ತದೆ ಎನ್ನುವುದು ಕೂಡಾ ಗಮನಾರ್ಹವಾಗಿದೆ. ಗ್ರಾಮೀಣ ಭಾರತವು ಡಿಜಿಟಲ್ ಮೂಲಕ ಸಂಪರ್ಕ ಪಡೆದು ಶೈಕ್ಷಣಿಕವಾಗಿ, ಬೌದ್ಧಿಕವಾಗಿಯೂ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ.