ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಸಮಾಜದ ಶಾಂತಿಗೆ ಭಂಗ ತರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಕೋಮು ಸೌಹಾರ್ದತೆಗೆ ಮತ್ತು ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿರುವುದು ಕಂಡುಬಂದಿದೆ. ಇದರಲ್ಲಿ ಕೆಲವು ಕಿಡಿಗೇಡಿಗಳು, ವಿದ್ಯಾವಂತರು, ಸಂಘಟಕರು ಸಹ ಪಾಲುದಾರರಾಗಿರುವುದು ಗಮನಕ್ಕೆ ಬಂದಿದೆ. ಇದು ಜಿಲ್ಲೆಗೆ ಕಪ್ಪು ಚುಕ್ಕೆ ತರುವಂತಹ ವಿಷಯ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಅವರು ಹೇಳಿದರು. ಸುಳ್ಳು ಸುದ್ದಿ ಅಥವಾ ಪ್ರಚೋದನಾಕಾರಿ ಸಂದೇಶಗಳನ್ನು ಜನತೆ ನಂಬಬಾರದು. ಅಂತಹ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡದೇ ಇದ್ದಾಗ ಮಾತ್ರ ತಪ್ಪು ಸಂದೇಶ ರವಾನೆಯಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಅಥವಾ ಪೋಸ್ಟ್ ಹರಿಯಬಿಡುವ ಮೊದಲು, ಅದರ ನೈಜತೆಯನ್ನು ಪರಿಶೀಲಿಸಬೇಕು. ಸಮಾಜದಲ್ಲಿ ಶಾಂತಿ ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಡಾ.ಅರುಣ್ ಕೆ. ಮನವಿ ಮಾಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..

