ಮೈಸೂರು ಸ್ಯಾಂಡಲ್ ಸಾಬೂನಿನ ಘಮಲು ಮತ್ತೆ ಎಲ್ಲೆಡೆ ಪಸರಿಸಲು ಸರ್ಕಾರ ನಿರ್ಧರಿಸಿದೆ. ನಮ್ಮ ರಾಜ್ಯದ ಹೆಮ್ಮೆಯ ಬ್ರಾಂಡ್ ಅನ್ನು ಉನ್ನತಗೊಳಿಸಲು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮುಂದಾಗಿದ್ದಾರೆ. ಈ ಹಿನ್ನೆಲೆ ಮೈಸೂರು ಸ್ಯಾಂಡಲ್ ಸೋಪಿನ ಗತವೈಭವವನ್ನು ಮರುಕಳಿಸಲು ಉದ್ಯಮ ಪರಿಣಿತರ ಸಲಹೆ, ಮಾರ್ಗದರ್ಶನ ಪಡೆಯಲು ಮುಂದಾಗಿದ್ದಾರೆ. ಬೇಡಿಕೆ ಹೆಚ್ಚಿಸಲು ಸಲಹೆಗಳನ್ನು ನೀಡುವಂತೆ ಕರೆ ನೀಡಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪು ದಕ್ಷಿಣ ಭಾರತಕ್ಕೆ ಸೀಮಿತವಾದ ಬ್ರ್ಯಾಂಡ್ ಆಗಿದೆ. ತವರು ರಾಜ್ಯ ಕರ್ನಾಟಕದ ಮಾರುಕಟ್ಟೆಯಲ್ಲಿ ಕೂಡ ಮುಂಚೂಣಿಯಲ್ಲಿಲ್ಲ. ಮೆಡಿಮಿಕ್ಸ್, ಸಂತೂರ್, ಪತಂಜಲಿ ಸಾಬೂನುಗಳು ಮಾಡಬಹುದಾದ ಸಾಧನೆಯನ್ನು ಮೈಸೂರು ಸ್ಯಾಂಡಲ್ ಏಕೆ ಮಾಡಲು ಸಾಧ್ಯವಿಲ್ಲ? ಎಂದು ಎಂಬಿ ಪಾಟೀಲ್ ಪ್ರಶ್ನಿಸಿದ್ದು, ತಜ್ಞರ ಸಲಹೆಗಳಿಗೆ ಆಹ್ವಾನಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸಿನಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಮೈಸೂರು ಸ್ಯಾಂಡಲ್ ಮಾರಾಟವನ್ನು ಹೆಚ್ಚಿಸಲು, ನಿಮ್ಮ ಸಲಹೆಗಳನ್ನು [email protected] ಗೆ ಇಮೇಲ್ ಮಾಡಿ ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವೂ ಮೈಸೂರು ಸ್ಯಾಂಡಲ್ ಸೋಪ ಅನ್ನು ತಯಾರಿಸುತ್ತಿದೆ. ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನು ಎಂದು ಈ ಸೋಪು ಪ್ರಸಿದ್ಧವಾಗಿದೆ. 1916ರಿಂದ ಈ ಸಾಬೂನು ತಯಾರಾಗುತ್ತಿದ್ದು, ಆಗ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿನಲ್ಲಿ ಸ್ಯಾಂಡಲ್ ಸೋಪ್ ಫ್ಯಾಕ್ಟರಿಯನ್ನು ಸ್ಥಾಪಿಸಿದರು.
ಮೊದಲನೇ ಮಹಾಯುದ್ಧದ ಸಮಯದಲ್ಲಿ ಯುರೋಪಿಗೆ ಶ್ರೀಗಂಧವನ್ನು ರಫ್ತು ಮಾಡಲು ಸಾಧ್ಯವಾಗದಿದ್ದಾಗ ಹೇರಳವಾಗಿ ಇದ್ದ ಗಂಧದ ಮರದ ದಾಸ್ತಾನನ್ನು ಬಳಸಿಕೊಂಡು ಸಾಬೂನು ತಯಾರಿಸಲು ಮುಂದಾದರು. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಎಸ್‌ಜಿ ಶಾಸ್ತ್ರಿ ಅವರು ಮೈಸೂರು ಸ್ಯಾಂಡಲ್ ಸೋಪ್‍ನ ಪ್ರಮುಖ ಪ್ರವರ್ತಕರಾಗಿದ್ದಾರೆ. 1980ರಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಮತ್ತು ಶಿವಮೊಗ್ಗದ ಗಂಧದೆಣ್ಣೆ ಕಾರ್ಖಾನೆಗಳನ್ನು ವಿಲೀನಗೊಳಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಯನ್ನಾಗಿ ಮಾಡಲಾಯಿತು. ಈ ಮೈಸೂರು ಸ್ಯಾಂಡಲ್ ಸೋಪ್‌ಗೆ ಜಿಐ ಟ್ಯಾಗ್ ಕೂಡ ಸಿಕ್ಕಿದೆ. ಆದರೆ, ಬ್ರಾಂಡ್ ಬೆಳೆಸುವಲ್ಲಿ ಕೆಎಸ್‌ಡಿಎಲ್ #KSDL ಹಿಂದುಳಿದಿದೆ. ಈಗಲಾದರು ಎಚ್ಚೆತ್ತುಕೊಂಡ ಸರ್ಕಾರ ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪಿನ ಬ್ರಾಂಡ್ ಗೆ ಕಾಯಕಲ್ಪ ಒದಗಿಸುವ ಸಂಕಲ್ಪ ಮಾಡಲಿ.