ನೀರು ನೀರು ನೀರು..(Water) ಆ ಹುಡುಗ(Boy) ಒಂದು ಕೈಯಲ್ಲಿ ನೀರಿನ ಬಾಲ್ದಿ ಹಿಡ್ಕೊಂಡು ಇನ್ನೊಂದು ಕೈಯಲ್ಲಿ ಎರಡು ಸ್ಟೀಲಿನ ಲೋಟ ಹಿಡ್ಕೊಂಡು ಊಟಕ್ಕೆ(Meals) ಕುಂತ ಆ ಸಾಲಿನ ನಡುವೆ ಓಡಾಡುತ್ತಿದ್ದ. ಬಾಯಾರಿದವರಷ್ಟೇ ಹುಡುಗನನ್ನ ಕೇಳಿ ನೀರನ್ನು ಎತ್ತಿ ಕುಡಿದು ಲೋಟವನ್ನು ಅವನ ಕೈಗೆ ಹಿಂತಿರುಗಿಸುತ್ತಿದ್ದರು. 500 ಜನ ಸೇರಿದ ಆ ಊಟದ ಪಂತಿಯಲ್ಲಿ ಬರೀ ಎರಡು ಲೋಟ ಹಿಡ್ಕೊಂಡು ಓಡಾಡುತ್ತಿದ್ದ ಹುಡುಗ ಅಷ್ಟು ಜನರ ಬಾಯಾರಿಕೆಯನ್ನು ತೀರಿಸಿದ್ದ.
ಹಾಗಂತ ಅದು ಆ ಹುಡುಗನ ಚಾಕಚಕ್ಯತೆಯಲ್ಲ, ಊಟಕ್ಕೆ ಕೂತವರಿಗೆ ನಿಜವಾಗಿ ನೀರು ಬೇಕಾಗಿರುವುದು ಅಷ್ಟೇ. ಒಂದೆರಡು ಸಲ ನೀರು ನೀರು ಎನ್ನುತ್ತಾ ಓಡಾಡಿದರೆ ಸಾಕು ಬೇಕಾದವರು ಕೇಳುತ್ತಾರೆ, ಇನ್ನು ಕೆಲವರು ಮಜ್ಜಿಗೆ ಇದೆಯಲ್ಲ ಎಂದು ಕಾಯುತ್ತಾರೆ. ಇತ್ತೀಚಿನ ಊಟಗಳು ಹಾಗಲ್ಲ, ಪ್ರತಿ ಎಲೆಯ ಬುಡದಲ್ಲಿ 200ಎಂ ಎಲ್ – ಅರ್ಧ ಲೀಟರ್ ನೀರಿರುವ ಪ್ಲಾಸ್ಟಿಕ್ ಬಾಟಲಿಗಳು ಮೊದಲೇ ಬಂದು ಕೂತಿರುತ್ತವೆ. ಕೆಲವು ಓಪನ್ ಆಗುತ್ತವೆ. ಕೆಲವು ಅರ್ಧ ಖಾಲಿಯಾಗುತ್ತವೆ, ಕೆಲವು ಪೂರ್ತಿ ಹಾಗೆ ಉಳಿಯುತ್ತವೆ. ಕೊನೆಗೆ ಅವೆಲ್ಲವನ್ನು ಅನ್ನದ ಎಲೆಯ ಡಿಯ ಪೇಪರ್ನೊಂದಿಗೆ ಮಡಚಿ ಕಸದ ಬುಟ್ಟಿಗೆ ತುಂಬಿಸಲಾಗುತ್ತದೆ. ಕೊನೆಗೆ ಅದು ಭೂಮಿಯಡಿಯ ಸಮಾಧಿಗೆ ಸೇರುತ್ತವೆ!
ಇವೆಲ್ಲವುಗಳಿಗೆ ಮುಕ್ತಿ ಕೊಟ್ಟ ಒಂದು ಸ್ವಾರಸ್ಯಕರವಾದ ಕಥೆ ಕೇಳಿ.. ಬೆಂಗಳೂರಿನಲ್ಲಿ ಪರಿಸರ ಪರ, ಜೀವಪರ ಯೋಚನೆ ಮಾಡುವ ಸಾಧಕಿಯೊಬ್ಬರು ಒಂದಷ್ಟು ಬಂಡವಾಳ ಹೂಡಿ ಸುಮಾರು 5000 ಬಟ್ಟಲು 5,000 ಸ್ಟೀಲ್ ಲೋಟಗಳನ್ನು ಒಂದು ಕಡೆ ಇರಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಯಾರೇ ಕಾರ್ಯಕ್ರಮ ಮಾಡುವುದಾದರೂ ಅವುಗಳನ್ನು ಉಚಿತವಾಗಿ ಕೊಡುತ್ತಾರೆ. ಬಳಕೆದಾರ ಮಾಡಬೇಕಾದು ಇಷ್ಟೇ, ನಿರ್ದಿಷ್ಟ ಡಿಪೋಸಿಟ್ ಇಟ್ಟು ಬಟ್ಟಲುಗಳನ್ನು ಒಯ್ಯಬೇಕು. ಸ್ವಚ್ಛಗೊಳಿಸಿ ವಾಪಸ್ ಕೊಟ್ಟು ಆ ಹಣವನ್ನು ಪಡೆಯಬೇಕು! ಇದರಿಂದ ಆಗುವ ಲಾಭದ ಕಥೆಯನ್ನು ಮೇಡಂ ವಿವರಿಸುತ್ತಾರೆ.
ಬರೀ ಒಂದು ದೃಷ್ಟಾಂತವಷ್ಟೇ. ಇತ್ತೀಚಿಗೆ ಬೆಂಗಳೂರಿನ ಪ್ರಸಿದ್ಧ ಲಿಂಗಾಯತ ಮಠ ಪ್ರತಿವರ್ಷದಂತೆ ಧಾರ್ಮಿಕ ವಾರ್ಷಿಕೋತ್ಸವವನ್ನು ಮಾಡುವ ಸಂದರ್ಭದಲ್ಲಿ ಸುಮಾರು ನಾಲ್ಕು ಲಕ್ಷ ಭಕ್ತರಿಗೆ ವಾರವಿಡೀ ಊಟ ಹಾಕುವ ಉದ್ದೇಶದಿಂದ ಅಡಿಕೆ – ಪ್ಲಾಸ್ಟಿಕ್ ಹಾಳೆಯ ಬಟ್ಟಲನ್ನು ಬಿಟ್ಟು ಇದೇ ಸಂಸ್ಥೆಯ ಬಾಡಿಗೆ ಬಟ್ಟಲನ್ನು ಪಡೆಯಿತು. ಭಕ್ತಾದಿಗಳು ಊಟ ಮಾಡಿ ತಮ್ಮ ಬಟ್ಟಲನ್ನು ತಾವೇ ತೊಳೆದು ಒಂದು ಮೂಲೆಯಲ್ಲಿಟ್ಟರೆ ಸಾಕು ಮುಂದಿನ ಸರದಿಗೆ ಅದನ್ನು ಬಿಸಿ ನೀರಲ್ಲಿ ಮುಳುಗಿಸಿ ಭಕ್ತರ ಕೈಗೆ ಕೊಡಲಾಗುತ್ತದೆ.
ಅದೇ ಐದು ಸಾವಿರ ಬಟ್ಟಲಲ್ಲಿ ವಾರದ ಕಾರ್ಯಕ್ರಮದಲ್ಲಿ ಸುಮಾರು ನಾಲ್ಕು ಲಕ್ಷ ಜನ ಊಟ ಮಾಡಿ ಆ ಸಂಸ್ಥೆಗೆ ಆದ ಲಾಭದ ಲೆಕ್ಕ ನೋಡಿ. ಒಂದು ಅಡಿಕೆ ಹಾಳೆ ಬಟ್ಟಲಿಗೆ ನಾಲ್ಕು ರೂಪಾಯಿಯ ಹಾಗೆ 4 ಲಕ್ಷಕ್ಕೆ 16 ಲಕ್ಷ ರೂಪಾಯಿ! ಇದಿಷ್ಟು ಒಂದೇ ಕಡೆ ಉಳಿಯಿತು. ಮುಂದೆ ಎಂಜಲು ತಟ್ಟೆಯನ್ನು ದೂರಕ್ಕೆ ಹೊಯ್ಯುವ ಕಷ್ಟ ಉಳಿದು ಬರೀ ಲಾರಿ ಬಾಡಿಗೆ ಲಕ್ಷಾಂತರ ರೂಪಾಯಿ ಉಳಿಯಿತಂತೆ. ಅದಕ್ಕಿಂತಲೂ ಹೆಚ್ಚು ತಮ್ಮ ಬಟ್ಟಲನ್ನು ತಾವೇ ತೊಳೆಯಬೇಕು, ಅನ್ನಪ್ರಸಾದವನ್ನು ಹೆಚ್ಚು ವೇಸ್ಟ್ ಮಾಡಬಾರದು ಅನ್ನುವ ಕಾರಣಕ್ಕಾಗಿ ಅನ್ನ ಬಡಿಸಿಕೊಳ್ಳುವಾಗಲೇ ಮಿತಿ ಇದ್ದುದರಿಂದ ಪಡಿತರ ತರಕಾರಿ ಎಂದು ಅಲ್ಲೂ ಮತ್ತಷ್ಟು ಉಳಿಯಿತು.
ಮೇಡಂ ಹೇಳುತ್ತಾರೆ, ಬರೀ ಒಂದು ಮಠದ ವಾರ್ಷಿಕ ಕಾರ್ಯಕ್ರಮದಲ್ಲೇ ನಮ್ಮ ಬಟ್ಟಲು- ಲೋಟದಿಂದ ಆ ಸಂಸ್ಥೆಗೆ ಒಂದೇ ವರ್ಷಕ್ಕೆ 20 ಲಕ್ಷ ರೂಪಾಯಿ ಉಳಿಯಿತು. ಹಳ್ಳಿ ಕೇಂದ್ರದಲ್ಲಿ, ನಗರದ ಪರಿಧಿಯಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಒಂದಷ್ಟು ಬಟ್ಟಲು ಲೋಟ ನಷ್ಟವಾಗಬಹುದು ಕಾಣೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಅದು ಸುಳ್ಳಾಯಿತು. ಕಳೆದು ಹೋದ ಬಟ್ಟಲುಗಳ ಸಂಖ್ಯೆ ಕೇವಲ 27 ಮಾತ್ರ . ಅವುಗಳ ಮೊತ್ತವನ್ನು ಹಿಡಿದಿಟ್ಟುಕೊಂಡು ಡಿಪೋಸಿಟ್ ನ್ನು ವಾಪಸ್ ಮಾಡಿದೇವು.
ರಾಜ್ಯಧಾನಿಯಲ್ಲಿ ಇಂತಹದೊಂದು ಪರಿಸರಪರ ಆಲೋಚನೆಯನ್ನು ಸಹಕಾರ ಗೊಳಿಸುತ್ತಿರುವವರು ಮತ್ಯಾರು ಅಲ್ಲ . ‘ಅದಮ್ಯ ಚೇತನ’ದ ಶ್ರೀಮತಿ ತೇಜಸ್ವಿನಿ ಅನಂತಕುಮಾರವರು. ಅದಮ್ಯ ಚೇತನ ಮಾಡುವ ಅನೇಕ ಸಮಾಜ ಸೇವಾ ವಿವರಗಳು ಎಲ್ಲರಿಗೂ ಗೊತ್ತಿದೆ. ಇತ್ತೀಚಿನ ತೇಜಸ್ವಿ ಮೇಡಂ ಅವರ ಸೇವಾ ವಿಸ್ತರಣೆಯ ಒಂದು ಪುಟ್ಟ ಭಾಗವೇ ಈ ಬಟ್ಟಲು ಲೋಟದ ವಿಚಾರ.
ಪೇಟೆ ಬಿಡಿ ನಮ್ಮ ಹಳ್ಳಿಗಳಲ್ಲೂ ಪ್ರತಿ ದಿನ ದಿನ ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಹಳ್ಳಿ ಹಳ್ಳಿಗಳಲ್ಲೂ ಹೀಗೆ ನೂರರಿಂದ 500 ಬಟ್ಟಲು ಲೋಟ ಇಟ್ಟುಕೊಂಡು ಉದಾರವಾಗಿ ಕಾರ್ಯಕ್ರಮಗಳಿಗೆ ಕೊಟ್ಟು ಒಂದಷ್ಟು ಪರಿಸರ ಸ್ನೇಹಿ ಆಗುವ ಸಾಧ್ಯತೆ ಎಲ್ಲೆಡೆ ಇದೆ. ನಿನ್ನೆ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆಗೆ ಬಂದಿದ್ದ ತೇಜಸ್ವಿನಿ ಅನಂತಕುಮಾರ್ ತಾನು ಮಾಡಿದ ಇಂತಹ ಮೂರು ನಾಲ್ಕು ಪ್ರಯೋಗಗಳನ್ನು ಸಾದರಪಡಿಸಿದಾಗ ಪರಿಸರ ಉಳಿಕೆಗೆ ನಮ್ಮ ನಮ್ಮ ಮಿತಿಯಲ್ಲಿ ಎಷ್ಟೊಂದು ಅವಕಾಶ ಅವಕಾಶ ಇದೆ ಅನಿಸಿತು.
(Facebook Wall) 2/6/2024