ಕೋಲಾರ ಜಿಲ್ಲೆಯ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಕಲಬೆರಕೆ ಹಾಲು ಮಾರಾಟ ಹಾಗೂ ಕಲುಷಿತ ಕುಡಿಯುವ ನೀರಿನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕೆ.ಜಿ.ಎಫ್, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕುಗಳ ಗಡಿ ಭಾಗಗಳಲ್ಲಿ ಆಂಧ್ರಪ್ರದೇಶದ ಕೆಲವು ಖಾಸಗಿ ಕಂಪನಿಗಳಿಂದ ಕಲಬೆರಕೆ ಹಾಲು ಸರಬರಾಜು ಮಾಡಲಾಗುತ್ತಿರುವ ಮಾಹಿತಿ ಆಡಳಿತದ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 32 ಗ್ರಾಮಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷೆಯಲ್ಲಿ ಹಾಲಿನಲ್ಲಿ ಕಲಬೆರಕೆ ಪತ್ತೆಯಾದಲ್ಲಿ ಸಂಬಂಧಪಟ್ಟ ಏಜೆನ್ಸಿಗಳ ಪರವಾನಗಿ ರದ್ದುಪಡಿಸುವುದರ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಲಭ್ಯತೆ ಹಾಗೂ ಗುಣಮಟ್ಟದ ಮೇಲೂ ಜಿಲ್ಲಾಡಳಿತ ವಿಶೇಷ ಗಮನ ಹರಿಸಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ 1803 ಬೋರ್‌ವೆಲ್‌ಗಳ ನೀರನ್ನು ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 67 ಬೋರ್‌ವೆಲ್‌ಗಳಲ್ಲಿ ನೈಟ್ರೇಟ್ ಹಾಗೂ ಫ್ಲೋರೈಡ್ ಅಂಶ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪೈಕಿ ಬಳಕೆಯಲ್ಲಿದ್ದ ಎರಡು ಬೋರ್‌ವೆಲ್‌ಗಳನ್ನು ತಕ್ಷಣವೇ ಸ್ಥಗಿತಗೊಳಿಸಿ, ಆ ಪ್ರದೇಶದ ಜನರಿಗೆ ಆರ್‌ಒ ಪ್ಲಾಂಟ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಜಿಲ್ಲೆಯ ಜನರು ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಹಾಗೂ ಅನುಮಾನಾಸ್ಪದ ಹಾಲು ಅಥವಾ ನೀರಿನ ಕುರಿತು ತಕ್ಷಣ ಆಡಳಿತಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
Kolar Deputy Commissioner Dr. MR Ravi has warned of strict action against adulterated milk supply in border areas of the district. Milk samples from 32 villages have been sent for testing, and agencies found guilty may face license cancellation and criminal cases. The administration has also tested 1,803 borewells, detecting nitrate and fluoride contamination in 67 sources, with unsafe borewells shut and RO water supplied to residents.

