ವಾಯುವ್ಯ ಅಫ್ಘಾನಿಸ್ತಾನದಲ್ಲಿ ಮತ್ತೆ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು ಭೂಮಿಯ 10 ಕಿಮೀ (6.21 ಮೈಲುಗಳು) ಆಳದಲ್ಲಿ ಸಂಭವಿಸಿದೆ. ಹೆರಾತ್ ರಾಜಧಾನಿಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಈಗಾಗಲೇ ಸರಣಿ ಭೂಕಂಪಗಳಿಂದ ಜರ್ಜರಿತವಾಗಿರುವ ಅಫ್ಘನಿಸ್ತಾನದಲ್ಲಿ ಮತ್ತೆ ಜನರು ಭಯಗೊಂಡಿದ್ದಾರೆ.
ಭೂಕಂಪನದಿಂದಾಗಿ ಅಪಘಾನಿಸ್ತಾನದ ಗ್ರಾಮೀಣ ಭಾಗದ 465 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, 135ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಸರಣಿ ಭೂಕಂಪಗಳಿಂದ ದೂರವಾಣಿ, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ರಕ್ಷಣಾ ಕಾರ್ಯದಲ್ಲಿ ಅಡಚಣೆಯುಂಟಾಗಿದೆ. ಸರಣಿ ಭೂಕಂಪಗಳಲ್ಲಿ ಸತ್ತವರ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದೆ. ಇನ್ನೂ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದು, ಅವಶೇಷಗಳಡಿ ಮೃತದೇಹಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಈ ಭೂಕಂಪನದ ಪರಿಣಾಮವು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಶನಿವಾರದಂದು ಅವರ ಮನೆಗಳು ನಾಶವಾದ ನಂತರ ಅನೇಕರು ಈಗಾಗಲೇ ತೆರೆದ ಸ್ಥಳದಲ್ಲಿ ಮಲಗಿದ್ದಾರೆ. ಹೊದಿಕೆ, ಆಹಾರ ಮತ್ತಿತರ ಸಾಮಗ್ರಿಗಳ ಕೊರತೆಯೂ ಇದೆ ಎಂದು ಬಿಬಿಸಿ ವರದಿ ಮಾಡಿದೆ.