ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?

April 15, 2024
7:55 PM
ಕೃಷಿಯೇತರ ಬಂಡವಾಳ ಕೃಷಿಗೆ ವಿನಿಯೋಗ ಆಗುತ್ತಿರುವುದರ ಪರಿಣಾಮವೇನು..? ಅನಾವಶ್ಯಕ ಕೃಷಿಯ ಬಗ್ಗೆ ಪ್ರಬಂಧ ಅಂಬುತೀರ್ಥ ಬರೆದಿದ್ದಾರೆ.

ಮೊದಲೆಲ್ಲಾ ಕೃಷಿಯ ದುಡ್ಡು ಕೃಷಿಗೆ ವಿನಿಯೋಗ ಮಾಡಿ ಜಮೀನು ಅಭಿವೃದ್ಧಿ ಅಥವಾ ವಿಸ್ತರಣೆ ಮಾಡುತ್ತಿದ್ದರು.
ಇದೀಗ ಕಾಲ ಬದಲಾಗಿದೆ ಕೃಷಿಯೇತರ ಬಂಡವಾಳ ಕೃಷಿಗೆ ವಿನಿಯೋಗ ಆಗುತ್ತಿದೆ. ಕೃಷಿ ಅಬ್ಬರದ ಅದ್ದೂರಿ ಐಷಾರಾಮಿ ಕೃಷಿ ಎನಿಸುತ್ತಿದೆ.

Advertisement

ನಮ್ಮ ತಯಾರಿಕೆಯ ಗೊಬ್ಬರ ಮಾರಾಟ ಸಂಬಂಧಿಸಿದಂತೆ ನಾನು ಹಲವಾರು ಕೃಷಿ ಜಮೀನುಗಳ ಬೇಟಿ ಮಾಡುತ್ತಿರುತ್ತೇನೆ. ನಾನು ಯಶಸ್ವಿ ಪ್ರಯೋಗ ಶೀಲ ಸಾಧಕ ಕೃಷಿಕನಲ್ಲ. ಆದರೆ ಕೃಷಿ ಕುಟುಂಬದ ಹಿನ್ಲಲೆ ಮತ್ತು ಹಿರಿಯ ಅನುಭವಿ ಕೃಷಿಕರ ಒಡನಾಟದಿಂದ ಅಷ್ಟಿಷ್ಟು ಕಲಿತಿದ್ದೇನೆ.

ಹೀಗೊಂದು ಕೃಷಿ ಬೇಟಿಯ ಸಂಧರ್ಭದಲ್ಲಿ ಕೇವಲ ನಾಲ್ಕೈದು ವರ್ಷಗಳ ಈಚೆಗಿನ ಇಳಿಜಾರು ಗದ್ದೆಯ ಸಮತಟ್ಟು ಮಾಡಿದ ಜಾಗದಲ್ಲಿ ಹಾಕಿದ ಅಡಿಕೆ ತೋಟವೊಂದನ್ನ ನೋಡಿದೆ. ಆ ತೋಟಕ್ಕೆ ಉದಿ ಪರಿವರ್ತಿತ ಟ್ರೈಲರ್ ನ ಮಿನಿ ಟ್ರಾಕ್ಟರ್ ನಲ್ಲಿ ಉದಿ ಹಾಕಲಾಗಿ ತ್ತು. ದುಡ್ಡಿದೆ ಉದಿ ಹಾಕ್ತೀವಿ ಎನ್ನುವ ಮನಸ್ಥಿತಿ ಈ ಕೃಷಿಕರಿಗಿದೆ ಎನಿಸುತ್ತದೆ. ಆ ತೋಟಕ್ಕೆ ಉದಿ ಅನಾವಶ್ಯಕ ವಾಗಿತ್ತು. ಆದರೂ ಆ ರೈತರು ತೋಟಕ್ಕೆ ಉದಿ ಹಾಕಿ ದ್ದರು.

ಉದಿ ಯಾಕೆ ಹಾಕಬೇಕು…? : ಮಲೆನಾಡಿನ ಬಹಳ ಹಳೆಯ ತೋಟಗಳಲ್ಲಿ ಅಡಿಕೆ ಮರದ ಕಪ್ಪಿನ‌ ಭಾಗದಲ್ಲಿ ಮಣ್ಣು ಸವಕಳಿಯಾಗಿ ಅಡಿಕೆ ಮರಕ್ಕೆ ಆ ಭಾಗದಲ್ಲಿ ಬೇಸಾಯದ ಸಾರ ಮತ್ತು ಬೇರಿಗೆ ಶಕ್ತಿ ಸಿಗದೆ ದುರ್ಬಲವಾಗಿರುತ್ತದೆ. ಮೊದಲೆಲ್ಲ ಮೆಟ್ಟುದಿ , ಒಬ್ಬ ಆರಡಿ ಮನುಷ್ಯ ಕಾಲಗಲಿಸಿ ನಿಂತರೆ ಅವನ ಸೊಂಟದ ತನಕ ಹಾಕಿದ ಮಣ್ಣು ಬರಬೇಕು ಆ ತರಹದ ಉದಿ (ಕಚ್ಚೆ ಉದಿ) ಹಾಕುತ್ತಿದ್ದರು. ಇದು ಸಂಪೂರ್ಣ ಮನುಷ್ಯ ರ ಮೂಲಕ ಹಾಕುತ್ತಿದ್ದದ್ದು.

ಮುಂದೆ ಮಲೆನಾಡಿನಲ್ಲಿ ಕೂಲಿ ಕಾರ್ಮಿಕರ ಕೊರತೆಯುಂಟಾಗಿ ಬಯಲು ಸೀಮೆಯ ಮಣ್ಣು ಒಡ್ಡರು ಈ ಉದಿ ಹಾಕಲೇ ಮಲೆನಾಡಿಗೆ ಬಂದು ಉದಿ ಹಾಕಲು ಬರಲು ಶುರುಮಾಡಿದರು.ಮಲೆನಾಡಿನ ಹಳೆಯ ಅಡಿಕೆ ತೋಟದ ಬಣದ ಅಗಲ ಕಡಿಮೆ . ಈ ಬಣದ ಅಗಲದ ಸಮಸ್ಯೆಯ ಕಾರಣಕ್ಕೆ ಮಲೆನಾಡಿನ ಹಳೆಯ ತೋಟಕ್ಕೆ ಇವತ್ತಿಗೂ ಯಾಂತ್ರಿಕರಣ ಮುಟ್ಟಿಲ್ಲ.
ಮಲೆನಾಡಿನ ದೊಡ್ಡ ದೊಡ್ಡ ಅಡಿಕೆ ತೋಟದ ಕೋಗಿನಲ್ಲಿ (ಸಮೂಹಕ್ಕೆ) ಮಣ್ಣು ಬಹಳಷ್ಟು ದೂರದಿಂದ ತರಬೇಕಾಗಿರುತ್ತದೆ. ಈ ಕೆಲಸಕ್ಕೆ ಕೆಲವೊಂದು ತೋಟಕ್ಕೆ ಮಣ್ಣು ಇರುವ ಜಾಗಕ್ಕೂ ತೋಟ ಇರುವ ಜಾಗಕ್ಕೂ ಫರ್ಲಾಂಗು ಗಟ್ಟಲೇ ದೂರ ಇರುತ್ತದೆ. ಕೆಲವು ತೋಟದ ಬೇಸಾಯಕ್ಕೆ ಮೂವತ್ತು ನಲವತ್ತು ಜನ ಆಳುಗಳೂ ಬೇಕಾಗುತ್ತದೆ.
ಬಹಳಷ್ಟು ಸಣ್ಣ ರೈತರು ಇಷ್ಟು ಜನರನ್ನು ಒಟ್ಟು ಮಾಡಲಾಗದೇ ಬೇಸಾಯ ವನ್ನು ಸರಳ ಅಥವಾ ರಾಸಾಯನಿಕ ಗೊಬ್ಬರ ಕ್ಕೆ ಸೀಮಿತ ಮಾಡಿಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಮಣ್ಣಿಗೂ ತೀವ್ರ ಕೊರತೆಯುಂಟಾಗಿದೆ. ದರೆ ಮಣ್ಣು ಒಂದು ಕಾಲದಲ್ಲಿ ಯಥೇಚ್ಛವಾಗಿ ಸಿಗುತ್ತಿತ್ತು. ಈಗ ದರೆ ಮೇಲಿನ ಜಾಗ ಒತ್ತವರಿಯಾಗಿದೆ ಅಥವಾ ದರೆ ಮಣ್ಣೂ ಮುಗಿದಿದೆ. ಮೊದಲಿನ ಹಾಗೆ ಮಣ್ಣು ಸಿಗುತ್ತಿಲ್ಲ.ಉದಿ ಹಾಕಲು ಸಮೃದ್ಧ ಮಣ್ಣು ಬೇಕು…ಮಣ್ಣಿನ ಕೊರತೆ, ಆಳುಗಳ ಕೊರತೆ, ಆಳುಗಳ ದುಬಾರಿ ಸಂಬಳ , ಬಣದ ನಡುವಿನ ಕಡಿಮೆ ಅಂತರದ ಕಾರಣದಿಂದ ಯಾಂತ್ರಿಕ ವಾಗಿ ಉದಿ ಹಾಕಲಾಗದ ಪರಿಸ್ಥಿತಿ… ಇತರೆ ಕಾರಣಕ್ಕಾಗಿ ಬಹಳಷ್ಟು ಹಳೆಯ ತೋಟಕ್ಕೆ ಉದಿ ಅವಶ್ಯಕತೆ ಇದ್ದರೂ ಉದಿ ಹಾಕಲಾಗುತ್ತಿಲ್ಲ…!!

ಅಡಿಕೆ ಮರದ ಕಪ್ಪಿನ ಭಾಗದ ಮಣ್ಣು ಸವಕಳಿ, ಲಗಾಯ್ತಿನಿಂದ ಕಪ್ಪು ಹರೆದು ಅಥವಾ ಕೀಸಿ ಕಪ್ಪು ಗಳ ಆಳ ಹೆಚ್ಚಾಗಿರುವುದೂ,ಕೆಲವು ನಂಜು ಮಣ್ಣು ಮತ್ತು ಕಂಪದ ಭೂಮಿಯ ಗದ್ದೆ ಪರಿವರ್ತಿತ ಅಡಿಕೆ ತೋಟಗಳು, ಕೆಲವು ಅತಿ ನೀರು ಒತ್ತಡ ದ ತೋಟದಲ್ಲಿ ಬಣದ ಪ್ರತಿ ಸಾಲಿಗೂ ಕಪ್ಪು ಮಾಡಿ ನೀರಿನ ಒತ್ತಡ ತಪ್ಪಿಸಿ ಅಡಿಕೆ ತೋಟ ಎಬ್ಬಿಸಿರುತ್ತಾರೆ. ಆ ಪ್ರತಿ ಬಣದ ಕಪ್ಪಿಗೆ ಮಲೆನಾಡಿಗರು “ಸರಗಪ್ಪು” ಎನ್ನುತ್ತಾರೆ.‌ ಕಾಲಕ್ರಮೇಣ ಈ ಸರಿಗಪ್ಪನಲ್ಲಿ ಒಂದು ಕಪ್ಪು ಮುಚ್ಚಬೇಕಾಗುತ್ತದೆ. ಈ ಸರಿಗಪ್ಪಿ ನಲ್ಲಿ ಒಂದು ಕಪ್ಪು ಮುಚ್ಚಿ ಏಕ ಬಣ ಮಾಡುವಾಗ ಉದಿ ಅನಿವಾರ್ಯ.

ಮಣ್ಣು ಸವಕಳಿಯ ಕಾರಣಕ್ಕಾಗಿ ಕಪ್ಪನ್ನ ಉದಿ ಹಾಕಿ ಮುಚ್ಚಿ ಬದಲಾಗಿ ಬಣದ ಮದ್ಯೆ ಹೊಸ ಕಪ್ಪು ತೆಗೆದಾಗ ಕಪ್ಪು ಉದಿಯಿಂದ ಮುಚ್ಚಿದ ಜಾಗದಲ್ಲಿ ಅಡಿಕೆ ಮರದ ಬೇರುಗಳಿಗೆ ಹೆಚ್ಚಿನ ಭದ್ರತೆ ಸಿಕ್ಕಿ ಹೊಸ ಕಪ್ಪು ತೆಗೆದ ಜಾಗದಲ್ಲಿ ಅಡಿಕೆ ಮರದ ಬೇರುಗಳಿಗೆ ಗಾಳಿ ಸಿಕ್ಕ ಪರಿಣಾಮ ಸದರಿ ಅಡಿಕೆ ತೋಟದ ಫಸಲು ಹೆಚ್ಚಾಗುತ್ತದೆ.

ಆದರೆ ಇಲ್ಲಿ ಮಣ್ಣಿನ ಸವಕಳಿ ಯಾಗಿಲ್ಲ.ಕಪ್ಪು ಒಂದು ಅಡಿ ಕೂಡ ಆಳವಾಗಿಲ್ಲ.ನೀರಿನ ಜವಳಿನ ಒತ್ತಡ ಇಲ್ಲ. ಆದರೆ ಅಡಿಕೆ ತೋಟದ ಮಾಲಿಕರಿಗೆ ಬೇಕಾದಷ್ಟು ಮಣ್ಣು ಇದೆ ಮತ್ತು ಮಣ್ಣನ್ನ ಹಾಕಿಸಲು ಯಥೇಚ್ಛ ಬಂಡವಾಳ ಇದೆ. ಹಾಗಾಗಿ ಟ್ರಾಕ್ಟರ್ ಉದಿ ಹಾಕಿದ್ದಾರೆ. ನಿಜಕ್ಕೂ ಎಷ್ಟೋ ಹಳೆಯ ಅಡಿಕೆ ತೋಟ ದ ಮಾಲಿಕರಿಗೆ ಅವರ ತೋಟದ ಮರಕ್ಕೆ ಬೇಸಾಯ ಮಾಡಿ ಎರಡು ಬುಟ್ಟಿ ಮಣ್ಣು ಹಾಕಿಸಲೂ ಕಷ್ಟ.. ‌!! ಆದರಿಲ್ಲಿ ಅವಶ್ಯಕತೆ ಇಲ್ಲದಿದ್ದರೂ ಮಣ್ಣು ಉದಿ..‌

ರೈತರು ಉದಿ ಚೆಲ್ಲುಮಣ್ಣು ಬೇಸಾಯ ಮಾಡುವಾಗ ಅವರ ಕೃಷಿ ಜಮೀನಿನ ಭೌತಿಕ ವಾತಾವರಣ ದ ಬಗ್ಗೆ ಅಧ್ಯಯನ ಮಾಡಬೇಕಾಗುತ್ತದೆ. ಅನಾವಶ್ಯಕ ಬಂಡವಾಳ ಹೂಡಿಕೆಯಿಂದ ಕೃಷಿ ಗೆ ಯಾವುದೇ ಪ್ರಯೋಜನವಿಲ್ಲ…!!
ಇದೀಗ ಮಲೆನಾಡಿನ ಪ್ರತಿ ಊರಿನಲ್ಲೂ ಆಟೋ ರಿಕ್ಷಾಗಳಿಗಿಂತ ಹೆಚ್ಚು ಜೆಸಿಬಿ ಟ್ರಾಕ್ಟರ್ ಗಳಿವೆ. ಅವು ರೈತರಿಗೆ ಮಣ್ಣು ಕಾಮಗಾರಿಯ (ಉದಿ ಚೆಲ್ಲುಮಣ್ಣು ) ಟ್ರಂಡ್ ಶುರುಮಾಡಿಸಿವೆ. ಈಗ ದುಡ್ಡು ದಾರಿ ಮಣ್ಣು ಇದ್ದವ ಗುಡ್ಡದ ಮೇಲಿನ ತೋಟಕ್ಕೂ ಉದಿ ಹಾಕಿಸುತ್ತಾನೆ….!!

ಹೀಗೆ ಹಾಕಿಸುವ ಮಣ್ಣು ಆರೋಗ್ಯ ವಾಗಿದೆಯ..? ಮಣ್ಣಿನಲ್ಲಿ ಅಂಟಿನ ಅಂಶ ಇದೆಯ..? ಮಣ್ಣಿನಲ್ಲಿ ಕಲ್ಲಿನಂಶ ಇದೆಯ‌.? ಇದ್ಯಾವುದನ್ನೂ ರೈತರು ಗಮನಿಸೋದಿಲ್ಲ.ಮುಖ್ಯವಾಗಿ ಯಾವುದೇ ಕೃಷಿ ಬೇಸಾಯಕ್ಕೆ ಬಳಸುವ ಮಣ್ಣು ಭೂಮಿಯ ಮೇಲ್ಭಾಗದ ಐದಾರು ಅಡಿ ಯದ್ದಾದರೆ ಉತ್ತಮ. ನಲವತ್ತು ಐವತ್ತು ಅಡಿ ಎತ್ತರದ ದರೆಯ ಬುಡದ ಮಣ್ಣನ್ನು ಬೇಸಾಯ ಉದಿಗೆ ಬಳಸಿದರೆ ರಸ್ತೆ ಪಕ್ಕದ revetment  ನೊಳಕ್ಕೆ ರಸ್ತೆ ಕಾಮಗಾರಿ ಯವರು ಮಣ್ಣು ತುಂಬಿಸಿದಂತೆ. ಅದರಿಂದ ತೋಟಕ್ಕೆ ಯಾವುದೇ ಪ್ರಯೋಜನ ವಿಲ್ಲ.ಮುಖ್ಯವಾಗಿ ತೋಟದ ಮೂಲೆ ಮೂಲೆಯ ಕಣ ಕಣ ಮಣ್ಣೂ ಸೂಕ್ಷ್ಮಾಣು ಜೀವಿಯುಕ್ತವಾಗಬೇಕು….

ರೈತರು ಒಟ್ರಾಸಿ ಬೇಸಾಯಕ್ಕೆ ಬೇಕಾದಷ್ಟು ಮಣ್ಣಿದೆ ದುಡ್ಡಿದೆ ಎಂದು ಮಣ್ಣು ತಂದು ತೋಟಕ್ಕೆ ತಂದು ಸುರಿಯುವುದು ಇನ್ನೊಂದು ಬಗೆಯಲ್ಲಿ ಅಪಾಯವಾಗಬಹುದು. ನಿಸ್ಸಾರ ಅನಾರೋಗ್ಯ ಕರ ಮಣ್ಣು ತೋಟದ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರಬಹುದು. ಅಡಿಕೆ ಮರದ ಗಾಳಿ ಅಪೇಕ್ಷಿತ ಬೇರುಗಳಿಗೆ ಈ ಮಣ್ಣು ಉಸಿರುಗಟ್ಟಿಸಬಹುದು. ರೈತರು ತೋಟದ ಹೊರಗಿನಿಂದ ತರುವ ಮಣ್ಣಿನ ಬಗ್ಗೆ ಗಮನ ಕೊಡಬೇಕಾಗುತ್ತದೆ. ಸಂಸ್ಕರಣೆಯಾಗದ ಕೆರೆ ಗೋಡು, ಬೇರು ಹುಳ ಇರುವ ಕಾನು ಗೋಡು ಇತರೆ ಮಣ್ಣು ಸುಲಭವಾಗಿ ಸಿಗ್ತು ಅಂತ ತೋಟಕ್ಕೆ ಸುರಿದರೆ ತೋಟ ನಾಶ ವಾಗಿಹೋಗಬಹುದು ಎಚ್ಚರಿಕೆ…

ಬರಹ :
ಪ್ರಬಂಧ ಅಂಬುತೀರ್ಥ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ
ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
April 12, 2025
8:40 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-04-2025 | ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆ ಸಾಧ್ಯತೆ | ಎ.13 ರಿಂದ ಮಳೆಯ ಪ್ರಮಾಣ ಕಡಿಮೆ
April 12, 2025
1:50 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group