ಮಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಜನವರಿ 30 ರಿಂದ ಫೆಬ್ರವರಿ 10ರವರೆಗೆ ಮೂಡಬಿದ್ರಿಯ ಸ್ವರಾಜ್ ಮೈದಾನದಲ್ಲಿ ಅಗ್ನಿವೀರ್ ನೇಮಕಾತಿ ರ್ಯಾಲಿ ನಡೆಯಲಿದೆ.
ರಾಜ್ಯದ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ಕಿರುಪಟ್ಟಿ ಮಾಡಲಾದ ಅಭ್ಯರ್ಥಿಗಳಿಗಾಗಿ ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ.
ಜೂನ್ 30, 2025ರಿಂದ ಜುಲೈ 10, 2025ರವರೆಗೆ ನಡೆಸಲಾದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE)ಯಲ್ಲಿ ಅರ್ಹತೆ ಪಡೆದ ಅಗ್ನಿವೀರ್ ಅರ್ಜಿದಾರರನ್ನು ರ‍್ಯಾಲಿಗೆ ಆಹ್ವಾನಿಸಲಾಗಿದೆ. ಸೇನೆಯಲ್ಲಿ ಎಲ್ಲಾ ವರ್ಗಗಳ ದಾಖಲಾತಿಗಾಗಿ ಈ ನೇಮಕಾತಿ ರ‍್ಯಾಲಿ ನಡೆಯಲಿದ್ದು, ವಯಸ್ಸು, ಶಿಕ್ಷಣ ಅರ್ಹತೆ, ನೋಂದಣಿ ಸೇರಿದಂತೆ ಇತರ ಮಾನದಂಡಗಳ ವಿವರಗಳನ್ನು ಸೇನಾ ನೇಮಕಾತಿ ಕಚೇರಿ ಪ್ರಕಟಿಸಿದ ಅಧಿಸೂಚನೆಯಲ್ಲಿ ನೀಡಲಾಗಿದೆ.
ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್‌ಗಳನ್ನು ನೀಡಲಾಗಿದ್ದು, ಅವು ಅಭ್ಯರ್ಥಿಗಳ ವೈಯಕ್ತಿಕ ಖಾತೆ ಹಾಗೂ ನೋಂದಾಯಿತ ಇಮೇಲ್ ಐಡಿ ಮೂಲಕ ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.
ಆಯ್ಕೆ ಪ್ರಕ್ರಿಯೆ ಆನ್‌ಲೈನ್ CEEಯಲ್ಲಿನ ಕಾರ್ಯಕ್ಷಮತೆ, ನೇಮಕಾತಿ ರ‍್ಯಾಲಿಯಲ್ಲಿ ನಡೆಯುವ ಪರೀಕ್ಷೆಗಳು ಹಾಗೂ ಅಂತಿಮ ಅರ್ಹತೆಯ ಆಧಾರದ ಮೇಲೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.



