ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಬಿಕಾನೇರ್–ಜೋಧಪುರ ಹೆದ್ದಾರಿಯಲ್ಲಿ ಆಯೋಜಿಸಲಾದ ಕೃಷಿ ಉದ್ಯಮಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಾಭದಾಯಕ ಕೃಷಿ ಹಾಗೂ ಗ್ರಾಮೀಣ ಕೈಗಾರಿಕೆಗಳ ಅಭಿವೃದ್ಧಿಯೇ ರೈತರ ಆದಾಯ ಹೆಚ್ಚಿಸುವ ಪ್ರಮುಖ ಮಾರ್ಗ ಎಂದು ಅಭಿಪ್ರಾಯಪಟ್ಟರು.
ಕೃಷಿ ಆಧಾರಿತ ಕೈಗಾರಿಕೆಗಳು ಹಾಗೂ ಪ್ರಗತಿಪರ ರೈತರೊಂದಿಗೆ ಸಂವಾದ ನಡೆಸಿದ ಸಚಿವರು, ರೈತರ ಆದಾಯವನ್ನು ಹೆಚ್ಚಿಸಲು, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು, ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಸರ್ಕಾರವು ವಿಶೇಷ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು. ಇತ್ತೀಚೆಗೆ ಯುರೋಪಿಯನ್ ಒಕ್ಕೂಟದೊಂದಿಗೆ ಮಾಡಿರುವ ಒಪ್ಪಂದವು ಕೃಷಿ ಕೈಗಾರಿಕೆ ಮತ್ತು ರೈತರಿಗೆ ಲಾಭ ತಂದೊಡ್ಡಲಿದೆ ಎಂದರು.
ಸ್ಥಳೀಯ ಮಣ್ಣು ಹಾಗೂ ನೀರಿನ ಅಗತ್ಯಗಳನ್ನು ಆಧರಿಸಿ ಬೆಳೆಗಳನ್ನು ಆಯ್ಕೆ ಮಾಡುವುದು ಮತ್ತು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ಸಂಶೋಧನೆ ಮತ್ತು ಸಮಗ್ರ ಕೃಷಿ ಪದ್ಧತಿಗೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಚೌಹಾಣ್ ಹೇಳಿದರು. ಮಾರುಕಟ್ಟೆಗಳಲ್ಲಿ ಕಾಣಿಸಿಕೊಳ್ಳುವ ಡಬಲ್ ತೆರಿಗೆ ಸಮಸ್ಯೆಯನ್ನು ನಿವಾರಿಸುವ ಕುರಿತು ಚರ್ಚೆ ನಡೆಯುತ್ತಿದೆ. ಇದು ರೈತರಿಗೆ ನೇರ ಆರ್ಥಿಕ ಪ್ರಯೋಜನ ನೀಡಲಿದೆ ಎಂದು ಅವರು ಹೇಳಿದರು. ರೈತರಿಗಾಗಿ ಮುಂದಿನ ದಿನಗಳಲ್ಲಿ ಲಾಭದಾಯಕ ಕೃಷಿ, ಪಶುಸಂಗೋಪನೆ, ಮೇಕೆ ಮತ್ತು ಕುರಿ ಸಾಕಾಣಿಕೆ, ಜೇನು ಸಾಕಣೆ ಮೂಲಕ ಸಣ್ಣ ರೈತರಲ್ಲಿ ಉದ್ಯೋಗ ಸೃಷ್ಟಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಉದ್ಯಮಿಗಳು ಮತ್ತು ರೈತ ನಾಯಕರು ಮಾತನಾಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
The Rural Mirror ವಿಶ್ಲೇಷಣೆ: ಕೃಷಿ ಕೈಗಾರಿಕೆ, ಸಮಗ್ರ ಕೃಷಿ ಮತ್ತು ಪಶುಸಂಗೋಪನೆ ಆಧಾರಿತ ಉದ್ಯೋಗ ಮಾದರಿಯು ರಾಜಸ್ಥಾನದಂತಹ ಒಣ ಪ್ರದೇಶಗಳಲ್ಲಿ ರೈತರ ಆದಾಯವನ್ನು ದೀರ್ಘಾವಧಿಯಲ್ಲಿ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ. ಸಣ್ಣ ರೈತರಿಗಾಗಿ ಸ್ಥಳೀಯ ಅಗತ್ಯಾಧಾರಿತ ಯೋಜನೆಗಳು ಕೃಷಿ ಕ್ಷೇತ್ರದ ಭವಿಷ್ಯವನ್ನು ಬಲಪಡಿಸುವ ನಿರೀಕ್ಷೆಯಿದೆ.




