ಎಲ್ಲಾ ಕಡೆ ತಾಪಮಾನದ ಸಂಕಷ್ಟ. ಅಡಿಕೆಯಂತಹ ದೀರ್ಘಕಾಲದ ಕೃಷಿಯಲ್ಲಿ ಈಗ ಫಸಲು ಉಳಿಸಿಕೊಳ್ಳುವುದೇ ದೊಡ್ಡ ಸವಾಲು. ಹಲವು ಪ್ರಯತ್ನ ನಡೆಯುತ್ತದೆ. ಎಷ್ಟೇ ನೀರು ಹಾಕಿದರೂ ತಾಪಮಾನ 40 ಇರುವ ಹೊತ್ತಿಗೆ ಅಡಿಕೆ ಉಳಿಯುವುದೇ ಕಷ್ಟ. ಹಾಗಿದ್ದರೆ ಅದಕ್ಕೆ ಗೋಆಧಾರಿತ ಕೃಷಿಯಲ್ಲಿ ಪರಿಹಾರ ಇದೆ, ಬಳಕೆಯ ವಿಧಾನವನ್ನೂ ಗಮನಿಸಬೇಕು.
ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಆಗಬೇಕು ಯಾಕೆ ಗೊತ್ತಾ? ಒಂದು ಲೇಖನ ಓದ್ತಿದ್ದಾಗ ಅದ್ರಲ್ಲಿ ಈ 45 ಡಿಗ್ರಿಗೆ ತಲುಪಿರೋ ವಾತಾವರಣದ ಉಷ್ಣತೆ ಇನ್ನೈದು ವರ್ಷಗಳಲ್ಲೇ 50 ಡಿಗ್ರಿಗೆ ತಲುಪುತ್ತದೆ ಆಗ ನಮ್ಮ ಜೀವ ಉಳಿಸಿಕೊಳ್ಳೋದಕ್ಕೆ ಒದ್ದಾಡಬೇಕಾಗಬಹುದು. ಅದಕ್ಕಾಗಿ ಕಾಂಕ್ರೀಟ್ ರೋಡುಗಳ ನಿರ್ಮಾಣಕ್ಕೆ ತಡೆ ಹಾಕಿ,ಮರ ಕಡಿಯುವುದಕ್ಕೆ ಮೊದಲೆ ಬೆಳೆಸುವುದಕ್ಕೆ ತೊಡಗಿ,ನಗರಗಳಲ್ಲಿ ಬೆಳೆಸಬಹುದಾದ ನೆರಳು ಕೊಡುವ ಸಸ್ಯಗಳ ಆಯ್ಕೆ ಮಾಡಿ,ನೀರಿಂಗಿಸುವ ಪ್ರಯತ್ನ ಇತ್ಯಾದಿಗಳ ಬಗ್ಗೆ ಓದ್ತಿದ್ದೆ.
ಆಗ ಇನ್ನಷ್ಟು ವಿಚಾರ ಅರಿವಾಯ್ತು. ಏನೆಂದರೆ ತಾಪಮಾನದ ಏರಿಕೆಗೆ ಎಲ್ಲಾ ಕ್ಷೇತ್ರಗಳ ಕೊಡುಗೆ ಬಹಳಷ್ಟಿದೆ. ವಾಹನ,ಕಾರ್ಖಾನೆಗಳು,ಆಧುನಿಕ ಅಭಿವೃದ್ಧಿಕಾರ್ಯಗಳು ಹೀಗೆ ಅನೇಕ ಇವೆ. ಆದರೆ ಅದರ ಹೊಡೆತ ಮೊದಲು ಸಿಗೋದು ಕೃಷಿಕನಿಗೆ. ಏನೇ ಮಾಡಿದರೂ ಬೆಳೆಸಿದ ಬೆಳೆಗಳನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗದಂತೆ ಉಷ್ಣತೆಯ ಏರಿಕೆ ಎಲ್ಲವನ್ನೂ ಸುಡುತ್ತಿದೆ. ಅಡಿಕೆಯ ಮಿಡಿ ನಿಲ್ತಾ ಇಲ್ಲ. ತರಕಾರಿ ಗಿಡಗಳು ಸುಟ್ಟಂತಾಗ್ತಿವೆ,ಮಳೆ ತಡವಾದರೆ ಮಳೆಯಾಶ್ರಿತ ಧಾನ್ಯ ಬೆಳೆಯೋಕಾಗಲ್ಲ. ಹೀಗೆ ಹಲವಾರು ತೊಂದರೆಗಳಿಗೆ ಪರಿಹಾರ ಕಾಣ್ತಿಲ್ಲ.
ಎಸಿ ಕಾರುಗಳಲ್ಲೇ ಓಡಾಡೋ,ಎಸಿ ರೂಮ್ ಗಳಲ್ಲೇ ಆಯುಷ್ಯ ಕಳೆಯೋ ಮುಖಂಡರಿಗೆ/ಅಧಿಕಾರಿಗಳಿಗೆ ಗಿಡ ನೆಡುವ ಅನಿವಾರ್ಯತೆ ಬೇಗ ಅರಿವಾಗೋದಿಲ್ಲ. ಆದ್ರೆ ಕೃಷಿಕರಿಗೆ ಅದರ ಅನಿವಾರ್ಯತೆ ಬೇಗ ಅರ್ಥ ಆಗಬೇಕಿದೆ. ಜೊತೆಗೆ ರಸಗೊಬ್ಬರಗಳ ಬಳಕೆಯನ್ನು ತಗ್ಗಿಸಿ ಭೂಮಿ ಸಮೃದ್ಧವಾಗಿ ಸುಸ್ಥಿರವಾಗಿ ಉಳಿಯಬಲ್ಲ ಗೋಮಯ ಗೋಮೂತ್ರಗಳ ಬಳಕೆ ಹೆಚ್ಚಾಗಬೇಕಿದೆ. ಗೋ ಆಧಾರಿತ ಕೃಷಿ ಉಷ್ಣತೆಯ ಏರಿಕೆಯನ್ನು ತಾಳಿಕೊಳ್ಳಬಲ್ಲದು. ಆದರೆ ರಸಗೊಬ್ಬರ ಹಾಕಿದ ಗಿಡಗಳು ಸಾಕಷ್ಟು ನೀರಿಲ್ಲದೆ ಹೋದರೆ ಸತ್ತೇ ಹೋಗ್ತವೆ. ಮಾತ್ರವಲ್ಲ ರಸಗೊಬ್ಬರಗಳು ಹಾಗೂ ರಾಸಾಯನಿಕ ಕ್ರಿಮಿನಾಶಕಗಳು ತಾಪಮಾನದ ಏರಿಕೆಗೆ ತಮ್ಮದೇ ಆದ ಕೊಡುಗೆಯನ್ನೂ ಕೊಡ್ತವೆ.
ಹಾಗಂತ ಕೃಷಿಕ ಅಭಿವೃದ್ಧಿ ಹೊಂದಬಾರದೇ,ಕೃಷಿಕ ಲಾಭ ಮಾಡ್ಕೊಂಡ್ರೇನು? ತಾಪಮಾನ ಏರಿಕೆಗೆ ಕೃಷಿಗಿಂತ ಉಳಿದ ಕ್ಷೇತ್ರದ್ದೇ ಕೊಡುಗೆ ಹೆಚ್ಚಲ್ವೇ? ಅಂತ ಪ್ರಶ್ನೆ ಹಾಕಬೇಡಿ.ಯಾಕಂದ್ರೆ ಏರುತ್ತಿರುವ ತಾಪಮಾನದ ಪರಿಣಾಮ ಮೊದಲು ಆಗುವುದು ಕೃಷಿಯ ಮೇಲೆಯೇ. ಹಾಗಾಗಿ ಅತಿ ಉಷ್ಣತೆಯ ತಾಳಿಕೆಗೆ, ಕೃಷಿಕರ ಬೆಳೆ ಸಸ್ಯಗಳ ಉಳಿಕೆಗೆ ಗವ್ಯೋತ್ಪನ್ನಗಳ ಯಥೇಚ್ಛ ಬಳಕೆಯೂ ಕೂಡ ಯೋಗ್ಯ ಪರಿಹಾರ. ಕೃಷಿ ಅರಣ್ಯವನ್ನು ಜಮೀನಿನ ಸುತ್ತಲೂ ಅಭಿವೃದ್ಧಿಪಡಿಸುವುದು, ಸೊಪ್ಪುಸೌದೆಗಳನ್ನು ಬುಡಗಳಿಗೆ ಹಾಕುವುದು,ಹಟ್ಟಿಗೊಬ್ಬರ,ತೆಂಸಿ/ಅಡಿಕೆಸಿಪ್ಪೆಗಳ ಸೆಗಣಿಮಿಶ್ರಿತ ಕಂಪೋಸ್ಟ್ ,ಜೀವಾಮೃತದ ಬಳಕೆಗಳು ಗಿಡಮರಗಳ ಬುಡವನ್ನು ತಂಪಾಗಿರಿಸುತ್ತವೆ.ಗಿಡಗಳಿಗೆ ಉಷ್ಣತೆಯನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನೂ ನೀಡ್ತವೆ. ಕಡಿಮೆ ನೀರಿನ ಸಂದರ್ಭದಲ್ಲೂ ಗಿಡಗಳು ಒಣಗುವುದಿಲ್ಲ.
ಹೀಗೆ ಗಿಡದ ಬುಡ ಅಥವಾ ನೆಲದ ಮೇಲ್ಮೈಯನ್ನು ಮುಚ್ಚುವುದು ಜೀವಾಣುಗಳ ರಕ್ಷಣೆ ಹಾಗೂ ಮಣ್ಣಿನ ಜೀವಂತಿಕೆಯ ರಕ್ಷಣೆಯ ಉಪಾಯ. ಇದೇ ಕೃಷಿ ಬೆಳೆಗಳ ರಕ್ಷಣೆಗೆ ಮೊದಲ ಮಾರ್ಗ. ಇನ್ನೊಂದು ಫಸಲಿನ ಉದರುವಿಕೆ. ಇಲ್ಲೂ ಕೂಡ ಗಮನಾರ್ಹ ಅಂಶ ಏನಂದ್ರೆ ಅನೇಕರು ಅಡಿಕೆ ನಳ್ಳಿ ಉದುರಲು ಕೇವಲ ಕೀಟಬಾಧೆ ಹಾಗೂ ರೋಗ ಕಾರಣ ಅಂತ ರಾಸಾಯನಿಕಗಳಾದ ಎಂಡೋಫಿಲ್ ,ಕರಾಟೆ, ಸಾಫ್ ಇತ್ಯಾದಿಗಳನ್ನು ಸ್ಪ್ರೇ ಮಾಡಿಸ್ತಾರೆ. ಆದ್ರೆ ಕೀಟ,ಫಂಗಸ್,ರೋಗಗಳ ವಿರುದ್ಧ ಯಾವುದೇ ಬೆಳೆ ಸಸ್ಯಗಳು ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿಲ್ಲ .ಯಾಕೆ ಅಂತ ಯಾರೂ ವಿಚಾರ ಮಾಡುವುದಿಲ್ಲ. ರಹಸ್ಯ ಅಲ್ಲೇ ಇರುವುದು. ಬುಡ ಚೆನ್ನಾಗಿದ್ರೆ ಗಿಡದ ತಲೆಯೂ ಚೆನ್ನಾಗಿರ್ತದೆ. ರೋಗ ನಿರೋಧಕ ಹಾಗೂ ಉಷ್ಣತಾಳಿಕೆಯ ಶಕ್ತಿ ಹೆಚ್ಚಾಗ್ತದೆ.
ಅಡಿಕೆ ಸಿಂಗಾರಕ್ಕೆ ಅಥವಾ ಯಾವುದೇ ಮಿಡಿಗಳಿಗೆ ಗೋಮೂತ್ರ ಹಾಗೂ ಎಕ್ಕೆ, ನೆಕ್ಕಿ, ಕಾಸರಕ, ಆಡುಸೋಗೆ, ಎಣ್ಣೆಹುಲ್ಲು, ಕತ್ತಾಳೆ, ಹುಳಿಮಜ್ಜಿಗೆ,ಕಹಿಬೇವಿನ ಎಣ್ಣೆ ಇತ್ಯಾದಿಗಳ ಮಿಶ್ರಣದ ಔಷಧಿ ರೋಗ/ ಕೀಟನಾಶಕವಾಗಿಯೂ ಕೆಲಸ ಮಾಡ್ತದೆ ಹಾಗೂ ಸೂಕ್ಷ್ಮ ಪೋಷಕಾಂಶಕವಾಗಿಯೂ ಕೆಲಸ ಮಾಡ್ತದೆ. ಜೊತೆಗೆ ಏರುವ ಉಷ್ಣತೆಯ ಜೊತೆ ಹೊಂದಿಕೊಳ್ಳುವ ಶಕ್ತಿಯನ್ನು ಎಲೆಗಳಿಗೆ ನೀಡ್ತದೆ. ಫಸಲು ಕಡಿಮೆಯಾಗ್ತದೆ ಎಂಬ ಆತಂಕ ಬೇಡ,ಖರ್ಚೂ ಉಳಿತಾಯವಾಗ್ತದೆ. ದೊಡ್ಡ ದೊಡ್ಡ ಹೊಡೆತಗಳೂ ಕಡಿಮೆಯಾಗ್ತದೆ.
ರೈತರು ಈ ವಿಚಾರಕ್ಕೆ ಹೆಚ್ಚು ಒತ್ತು ಕೊಟ್ಟು ಗೋ ಆಧಾರಿತ ಕೃಷಿಗೆ ತೊಡಗಿದ್ರೆ ಸ್ವಾವಲಂಬಿ-ಸುಸ್ಥಿರ-ದೀರ್ಘಬಾಳಿಕೆಯ ಕೃಷಿಯಿಂದ ಬದುಕು ಹಸನಾಗಿಸಬಹುದು. ಅದಕ್ಕಾಗಿ ಮನೆ ಮನೆಯಲ್ಲೂ ಒಂದು ಮಲೆನಾಡಗಿಡ್ಡ ಅಥವಾ ಸ್ಥಳೀಯ ದೇಶೀ ಹಸು ಸಾಕಿಕೊಂಡು ಗೋ ಆಧಾರಿತ ಕೃಷಿಯತ್ತ ಮುಖ ಮಾಡುವುದು ಬಹಳಷ್ಟು ಸಮರ್ಪಕ ಹಾಗೂ ಇದು ಮುಂದಿನ ದಿನಗಳ ಅನಿವಾರ್ಯತೆಯೇ ಆಗಲೂ ಬಹುದು. ತಾಪಮಾನದ ಹೆಚ್ಚಳವನ್ನು ಕಡಿಮೆ ಮಾಡಲೂ ಕೂಡ ದೇಶೀ ಗೋ ಆಧಾರಿತ ಕೃಷಿಯು ಸಹಕಾರಿಯಾಗುತ್ತದೆ.