ದೇಶದ ಆರ್ಥಿಕ ಪ್ರಗತಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯ ಎಂಎಸ್ಎಂಇ ಪಾತ್ರ ಮಹತ್ವದ್ದಾಗಿದೆ. ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರ ಇದಾಗಿದ್ದು, ಗ್ರಾಮೀಣ ಕ್ಷೇತ್ರದಲ್ಲೂ ಅಪಾರ ಉದ್ಯೋಗ ದೊರೆಯುತ್ತಿದೆ. ಎಂಎಸ್ಎಂಇ ಗಳಿಂದ ಮಹಿಳೆಯರ ಸಬಲೀಕರಣವಾಗುತ್ತಿದ್ದು, ಸ್ವಾವಲಂಬಿಗಳಾಗುತ್ತಿದ್ದಾರೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ದೆಹಲಿಯ ವಿಜ್ಞಾನ ಭವನದಲ್ಲಿಂದು ‘ಎಂಎಸ್ಎಂಇ ಅಂತಾರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಸರ್ಕಾರವು ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವುದರ ಮೂಲಕ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡಿದೆ. ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯ ಮೂಲಕ ಅನೇಕ ಉಪಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದರು. ಸುಸ್ಥಿರ ಪ್ರಗತಿಗೆ ಎಂಎಸ್ಎಂಇಗಳ ಪಾತ್ರ ಬಹುಮುಖ್ಯ ಎಂದು ವಿಶ್ವ ಸಂಸ್ಥೆ ಹೇಳಿದೆ. ಆಧುನಿಕ ತಂತ್ರಜ್ಞಾನದ ಅಳವಡಿಕೆ, ಕಚ್ಚಾವಸ್ತು ಪೂರೈಕೆ, ಪರಿಸರ ಸಂರಕ್ಷಣೆ ಮುಂತಾದ ಸವಾಲುಗಳು ಈ ವಲಯದ ಮುಂದಿವೆ. ಸರ್ಕಾರವು ಈ ಕ್ಷೇತ್ರದಲ್ಲಿ ಆವಿಷ್ಕಾರ ಮತ್ತು ನವೋಧ್ಯಮಗಳ ಉತ್ತೇಜನಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಿತನ್ ರಾಮ್ ಮಾಂಝಿ, ಎಂಎಸ್ಎಂಇ ವಲಯದಿಂದ ಕೋಟ್ಯಾಂತರ ಬಡವರಿಗೆ ಪ್ರಯೋಜನವಾಗುತ್ತಿದೆ. ಕಳೆದ 11 ವರ್ಷಗಳಲ್ಲಿ ಈ ವಲಯದ ಪ್ರಗತಿಗೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಸಣ್ಣ ಉದ್ದಿಮೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಆರಂಭಿಸಲಾಗಿದೆ. ಯೋಜನೆಯಿಂದ ಅನೇಕ ವೃತ್ತಿಪರರು ಸಣ್ಣ ಉದ್ಯಮಿಗಳಾಗುತ್ತಿದ್ದಾರೆ. ಯೋಜನೆಯಡಿ 30 ಲಕ್ಷ ಜನರಿಗೆ ತರಬೇತಿ ಮತ್ತು ಉಪಕರಣ ಕಿಟ್ ಗಳನ್ನು ನೀಡುವ ಗುರಿ ಹೊಂದಲಾಗಿದೆ. ವಿಕಸಿತ ಭಾರತ ಸಂಕಲ್ಪ ಈಡೇರಿಕೆಗೆ ಎಂಎಸ್ಎಂಇ ವಲಯದ ಅಭಿವೃದ್ಧಿ ಮುಖ್ಯವಾಗಿದೆ ಎಂದರು.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಅಧ್ಯಕ್ಷ ಮನೋಜ್ ಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.