ಕರ್ನಾಟಕ ರಾಜ್ಯವು ಕೃಷಿಯಲ್ಲೂ ಮುಂದಿದೆ. ಹಲವು ಬೆಳೆಗಳಲ್ಲಿ ರಾಜ್ಯವು ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ. ಅದರಲ್ಲಿ ಕಾಫಿ, ಅಡಿಕೆ, ರಾಗಿ, ರೇಷ್ಮೆ, ಸೂರ್ಯಕಾಂತಿ, ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ, ಹುಣಸೆ ಕೃಷಿಯಲ್ಲಿ ನಂಬರ್ ವನ್ ಸ್ಥಾನದಲ್ಲಿದೆ.
ಭಾರತಲ್ಲಿ ಸರಿಸುಮಾರು 50 ಕಿಲೋ ಮೀಟರಿಗೊಂದು ಮಣ್ಣಿನ ತರಗತಿ ಬದಲಾಗುತ್ತದೆ. ಹೀಗೆ ಮಣ್ಣಿನ ತರಗತಿ ಬದಲಾದಂತೆ ಕೃಷಿಯೂ ಬದಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಕೆಲವು ಬೆಳಗಳಿಗೆ ವಿಶೇಷವಾದ ಸ್ಥಾನ ಇದೆ. ಗುಣಮಟ್ಟದಲ್ಲೂ ವ್ಯತ್ಯಾಸ ಇರುತ್ತದೆ. ಕೊಡಗಿಗೆ ಹೋದರೆ ಕಾಫಿಯೇ ಸರ್ವಶ್ರೇಷ್ಟ. ದಕ್ಷಿಣ ಕನ್ನಡಕ್ಕೆ ಬಂದರೆ ಅಡಿಕೆ, ಕೇರಳಕ್ಕೆ ಹೋದರೆ ರಬ್ಬರ್ ಹೀಗೇ ಆಯಾ ಪ್ರದೇಶದಲ್ಲಿ ಅದರದ್ದೇ ಆದ ವಿಶೇಷ ಗುಣಗಳು ಇರುತ್ತದೆ. ದೇಶದ ಆರನೇ ಅತಿದೊಡ್ಡ ರಾಜ್ಯವಾಗಿರುವ ಕರ್ನಾಟಕದ ಕೃಷಿಯೂ ಗಮನಾರ್ಹವಾಗಿ ಬೆಳೆದಿದೆ. ಅದರಲ್ಲಿ ಕೆಲವು ಬೆಳೆಗಳು ನಂಬರ್ ವನ್. ಕಾಫಿ, ಅಡಿಕೆ, ರಾಗಿ, ರೇಷ್ಮೆ, ಸೂರ್ಯಕಾಂತಿ, ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ, ಹುಣಸೆ ಕೃಷಿಯಲ್ಲಿ ನಂಬರ್ ವನ್ ಸ್ಥಾನದಲ್ಲಿದೆ. ಟೊಮೇಟೊ, ಸಪೋಟಾ, ತೆಂಗಿನಕಾಯಿ ದ್ವಿತೀಯ ಸ್ಥಾನದಲ್ಲಿ ಬೆಳೆಯುವ ಬೆಳೆ. ದಾಳಿಂಬೆ, ಅನಾನಸ್, ಪಪ್ಪಾಯಿ, ಈರುಳ್ಳಿ ತೃತೀಯ ಸ್ಥಾನದಲ್ಲಿ ಬೆಳೆಯುವ ಬೆಳೆಯಾಗಿದೆ.
ದೇಶದ ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು 71%. ಈ ಪೈಕಿ ಕೊಡಗಿನಲ್ಲೇ 33% ಕಾಫಿ ಉತ್ಪಾದನೆಯಾಗುತ್ತದೆ. ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ನಂ.1 ಸ್ಥಾನ ಪಡೆದಿದೆ. ದೇಶದ ಒಟ್ಟು ಅಡಿಕೆ ಉತ್ಪಾದನೆಯ ಪೈಕಿ ಶೇ 40% ಅಡಿಕೆ ಉತ್ಪಾದನೆ ಕರ್ನಾಟಕದಲ್ಲಾಗುತ್ತದೆ. ದೇಶದ ರಾಗಿ ಉತ್ಪಾದನೆಯ ಪೈಕಿ 64.8% ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ರೇಷ್ಮೆ ಉತ್ಪಾದನೆಯಲ್ಲಿ ಪ್ರತಿ ವರ್ಷ 8,200 ಮೆಟ್ರಿಕ್ ಟನ್ ರೇಷ್ಮೆಯನ್ನು ಕರ್ನಾಟಕದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಪ್ರತಿ ವರ್ಷ 3.04 ಲಕ್ಷ ಟನ್ ಸೂರ್ಯಕಾಂತಿ ಉತ್ಪಾದಿಸಲಾಗುತ್ತದೆ. ಕರ್ನಾಟಕದ ಬಳಿಕ ಆಂಧ್ರಪ್ರದೇಶ, ಮಹಾರಾಷ್ಟ್ರ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ದೇಶದ ತೆಂಗು ಉತ್ಪಾದನೆಯ ಪೈಕಿ ಕರ್ನಾಟಕದ ಪಾಲು 23% ಇದೆ.