ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಹರಳಕುಂಟೆ ಗ್ರಾಮದ ಶಶಿಕುಮಾರ್ ಹಾಗೂ ಶಿವಕುಮಾರ್ ಇಬ್ಬರು ವಿದೇಶದ ಕಂಪೆನಿಯೊಂದರಲ್ಲಿ ಕೈತುಂಬಾ ಸಂಬಳದ ಕೆಲಸ ಮಾಡುತ್ತಿದ್ದರೂ, ಕೃಷಿ ಮೇಲಿನ ಪ್ರೀತಿಯಿಂದ ಕೆಲಸವನ್ನು ಬಿಟ್ಟು ತಮ್ಮೂರಿಗೆ ಬಂದು ಸಾವಯವ ಕೃಷಿಯಲ್ಲಿ ಯಶಸ್ಸನ್ನು ಕಂಡಿದ್ದಾರೆ.
ಪಿತ್ರಾರ್ಜಿತವಾಗಿ ಬಂದಿದ್ದ ಏಳು ಎಕರೆ ಭೂಮಿಯಲ್ಲಿ ಕೃಷಿ ಮಾಡಲು ಆರಂಭಿಸಿದರು. ಆದರೆ ಮೊದಲಿಗೆ ರಾಸಾಯನಿಕ ಕೃಷಿ ಮಾಡಿದರೂ ಅವರು ಅಂದುಕೊಂಡಷ್ಟು ಆದಾಯವೂ ಸಿಗಲಿಲ್ಲ. ತೃಪ್ತಿಯೂ ಸಿಗಲಿಲ್ಲ. ತದನಂತರ ಸಾವಯವ ಕೃಷಿಯ ಜೊತೆಗೆ ಸಾವಯವ ಕೃಷಿಗೆ ಬೇಕಾದ ದೇಸಿ ಹಸುಗಳ ಸಗಣಿ, ಗಂಜಲಕ್ಕಾಗಿ ತಮ್ಮದೇ ಜಮೀನಿನಲ್ಲಿ ಗೋಶಾಲೆ ಆರಂಭಿಸಿ ದೇಸೀ ಘೀರ್ ತಳಿ ಹಸುಗಳನ್ನು ಸಾಕುತ್ತಾ, ಅವುಗಳಿಂದ ಉತ್ಪತ್ತಿಯಾಗುವ ಗಂಜಲ ಹಾಗೂ ಸಗಣಿಯಿಂದ ಜೀವಾಮೃತ, ಗೋಕೃಪಾಂಮೃತ ತಯಾರು ಮಾಡಿಕೊಂಡು ಬೆಳೆಗಳಿಗೆ ಸಿಂಪಡಿಸಿದ್ದಾರೆ.
ಇಡೀ ಭೂಮಿಗೆ ಒಂಚೂರು ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಬಳಸದೆ ಸಂಪೂರ್ಣ ಸಾವಯವ ಕೃಷಿ ಆರಂಭಿಸಿದ್ದಾರೆ. ಮೊದಲು ಸ್ವೀಟ್ ಕಾರ್ನ್ ಬೆಳೆ ಬೆಳೆದು, ನಂತರ ಕುಂಬಳಕಾಯಿ ಬೆಳೆದು, ಈಗ ಏಲಕ್ಕಿ ಹಾಗೂ ಜಿ9 ತಳಿಯ ಚುಕ್ಕೆ ಬಾಳೆಹಣ್ಣು ಬೆಳೆದಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸಾವಯವ ವಿಧಾನದಲ್ಲಿ ಬೆಳೆಯಲಾದ ಬಾಳೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದ್ದು, ಒಳ್ಳೆಯ ಆದಾಯ ಕೂಡ ದೊರೆತಿದೆ. ಸದ್ಯ ಈ ಸಹೋದರರು ಯುವ ಕೃಷಿಕರಿಗೆ ಮಾದರಿಯಾಗಿದ್ದಾರೆ.