ಮೊಳೆತೇಳುವ ಖುಷಿ ಬೀಜದ ಮಡಿಲಿಗೆ
ಹನಿಹನಿಸುತಲಿರೆ ಹಸಿರುಸಿರು
ಕುಲನೆಲವೆನ್ನದೆ ದಾಹವ ನೀಗುವ
ನದಿಯೊಲವಿಗೆ ಏತಕೆ ಹೆಸರೂ….”
ಹೌದಲ್ಲಾ, ಈ ಕವನದ ಸಾಲುಗಳೇ ಕೃಷಿಯೊಳಗಣ ಸಂತಸದ ಬದುಕನ್ನು ತೆರೆದು ತೋರುತ್ತಿಲ್ಲವೇ…
ಖಂಡಿತಾ ಕೃಷಿ ಸೋಲದು. ಕೃಷಿಯೆಂಬುದು ಪ್ರಕೃತಿಯೊಳಗೊಂದಾಗುವ ಕ್ರಿಯೆ. ತಾಯ ಅಪ್ಪುಗೆಯಲ್ಲಿ ಸೋಲಿದೆಯೇ.. ಖಂಡಿತಾ ಇಲ್ಲ. ಅದನ್ನು ಕಾಣುವ,ಅನುಭವಿಸುವ ಒಳ ದೃಷ್ಟಿ ಬೇಕಷ್ಟೆ….ಅಂದರೆ ತಾಯ ಮೇಲಿನ ಶ್ರದ್ಧೆ, ಪ್ರೀತಿಗೆ ಹೇಗೆ ಮಿತಿಯಿಲ್ಲವೋ ಅದೇ ರೀತಿಯ ಶ್ರದ್ಧೆ, ಪ್ರೀತಿ ಕೃಷಿ, ಭೂಮಿ,ಪ್ರಕೃತಿಯ ಮೇಲೂ ಇದ್ದಾಗ ಸೋಲೇ ಇರದು.
ಕೃಷಿಯೆಂದರೆ ಪ್ರಕೃತಿಯ ನಡೆಯನ್ನು ಗಮನಿಸುತ್ತಾ ಪಡೆಯಬಹುದಾದ್ದನ್ನು ಪಡೆಯುವುದು,ಅಷ್ಟೇ,ಅಂದರೆ ಯಾವ ರೀತಿ ತಾಯ ಎದೆಹಾಲ ಕುಡಿಯುತ್ತಾ ಕುಡಿಯುತ್ತಾ ಮತ್ತಷ್ಟು ಎದೆಹಾಲಿನ ವೃದ್ದಿಗೆ ಪ್ರಚೋದನೆ ಆಗುವುದೋ ಅದೇ ರೀತಿಯಾಗಿ ಮುದ್ದುಗಾಲ ತುಳಿತ ಬೇಕಷ್ಟೇ ಹೊರತು ಘಾತಾನುಘಾತವಲ್ಲ. ಘರ್ಷಣೆ ಇಲ್ಲದಾಗ ಸೋಲಿದೆಯೇ….
ಕೃಷಿ ಎಂಬುದೊಂದು ಸಹಜ ಜೀವನ ಕಲೆ, ಅತಿಯಾದ ಆಸೆ ಆಕಾಂಕ್ಷೆಗಳು ಇರದ ಸ್ಥಿತಿ. ಹುಟ್ಟಿಸಿದ ದೇವರು ಹುಲ್ಲ ಮೇಯಿಸಲಾರನೇ ಅಂದರೆ ಇಷ್ಟೇ ಅಲ್ಲವೇ.ನಿನಗೇನು ಬೇಕೋ ಅಷ್ಟೇ ಹೊರತು ತಲೆತಲೆಮಾರುಗಳಿಗೆ ಕೂಡಿ ಹಾಕುವ ದಂಧೆಯಲ್ಲವಲ್ಲಾ….ಹಾಗಿದ್ದಾಗ ಸೋಲೆಲ್ಲಿದೆ.ಇಡೀ ಪ್ರಕೃತಿಯೇ ಒಂದು ಸರಣಿ ಸರಪಳಿ ಸೂತ್ರ. ಒಂದಕ್ಕೊಂದು ಪೂರಕ,ಒಂದು ಕೊಂಡಿ ಕಳಚಿದರೂ ಸೂತ್ರ ಹರಿದ ಗಾಳಿಪಟ.ನಿಜ ಕೃಷಿ ಅಂದರೆ ಸೂತ್ರದೊಳಗಿನ ಸಾರದ ಅನುಸರಣೆಯಲ್ಲವೇ….ಹಾಗಿದ್ದಾಗ ಸೋಲಿದೆಯೇ… ಈ ದಿನಗಳ ಅತೀ ಕಠಿಣ ಪರಿಸ್ಥಿತಿಯಲ್ಲೂ ತಲೆ ಎತ್ತಿ ನಿಂತ ಕ್ಷೇತ್ರ ಕೃಷಿ ಕ್ಷೇತ್ರವಲ್ಲವೇ….ಕಾರಣ ನಿರಾವಲಂಬನೆ… ತಾಯ ಅಪ್ಪುಗೆಯ ರಕ್ಷಣೆ. ಎಲ್ಲಾರು ಮಾಡುವುದು ಹೊಟ್ಟೆಗಾಗಿ,ಗೇಣು ಬಟ್ಟೆಗಾಗಿ ಎಂಬುದರ ನಿಜಾರ್ಥ ಅರಿತು ಹಸಿವಿನ, ತೀರದ ದಾಹದ ಮಿತಿಯರಿತು ವರ್ತಿಸಿದಾಗ ಸೋಲ ಮುಖ ಕೃಷಿ ಲೋಕ ಕಂಡೀತೇ.
ಅದಕ್ಕೇ ಕೃಷಿ ಋಷಿ ಅನ್ನುವುದು… ಋಷಿಯಾದಾತ ಖಂಡಿತಾ ಶೋಷಿಸಲಾರ,ಅತಿ ಬಯಕೆಯ ದಾಹದ ದಾಸನಾಗಲಾರ,ತನ್ನ ಪಾಲಿಗೆ ಬಂದ ತುತ್ತನು ವರಪ್ರಸಾದವಾಗಿ ಸ್ವೀಕರಿಸಬಲ್ಲ. ಇಂತಹ ಪರಿಶುದ್ಧ ಮನದ ಬದುಕಿಗೆ ಸೋಲುಂಟೇ….ಇರಲಾರದು. ಅಂತಹ ಕೃಷಿ ಬದುಕಿನ ಅನುಭವದ ದಾಸನಾಗಲು ತಾಯ ಮಡಿಲಲ್ಲಿ ವಿನೀತನಾಗಿ “ಧಿಯೋ ಯೋ ನಃ ಪ್ರಚೋದಯಾತ್” ಎಂದು ಬೇಡಿಕೊಳ್ಳಬೇಕಷ್ಟೆ.ಶರಣರಿಗೆ ಸೋಲಿಲ್ಲ…
ಇದು ಸಹಸ್ರ ಸಹಸ್ರ ವರ್ಷಗಳ ಸತ್ಯ…..ಅದೇ ನಿಜ ಕೃಷಿ…ಇದನರಿತೊಡೆ ಕೃಷಿಗೆ ಸೋಲಿಲ್ಲ. ಸೋಲು ಗೆಲುವಿನ ಆಯ್ಕೆ ನಮ್ಮದು,ಅಷ್ಟೇ….
#ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel