ಭಾರತೀಯ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಅಭಿವೃದ್ಧಿಗಾಗಿ, ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.
ಧಾರವಾಡದ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯದ ವತಿಯಿಂದ ಆಯೋಜಿಸಲಾಗಿರುವ ಕೃಷಿ ಮೇಳ -2025 ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಕ್ಷೇತ್ರದಲ್ಲಿ ಯುವಕರು ಮತ್ತು ಮಹಿಳೆಯರು ಉದ್ಯಮಶೀಲತೆ ಮತ್ತು ನಾವೀನ್ಯತೆಯೊಂದಿಗೆ ಮುಂಬರುವ ಅವಶ್ಯಕತೆಯಿದೆ. ಕೃಷಿ ನವೋದ್ಯಮಗಳು, ಸಂಸ್ಕರಣಾ ಘಟಕಗಳು, ಕೃಷಿ ಪ್ರವಾಸೋದ್ಯಮದಂತಹ ಕ್ಷೇತ್ರಗಳು ಯುವಕರನ್ನು ಆಕರ್ಷಿಸುತ್ತಿವೆ ಎಂದರು. ಕೃಷಿ ಸ್ವಾವಲಂಬಿ ಭಾರತದ ಆಧಾರ ಸ್ತಂಭ, ರೈತರು ಸ್ವಾವಲಂಬಿಗಳಾದಾಗ ರಾಷ್ಟ್ರ ಸ್ವಾವಲಂಬಿಯಾಗುತ್ತದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಬೀಜಗಳು ಉತ್ತಮ ತಂತ್ರಜ್ಞಾನ, ನ್ಯಾಯಯುತ ಬೆಲೆ ಮತ್ತು ಮಾರುಕಟ್ಟೆಗೆ ನೇರ ಪ್ರವೇಶ ಮುಖ್ಯವಾಗುತ್ತವೆ ಎಂದರು.
ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡಿರುವ ಕೃಷಿ ಮೇಳದಲ್ಲಿ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಈ ಬಾರಿ ಫಲ ಪುಷ್ಪ ಪ್ರದರ್ಶನದಲ್ಲಿ ಕಾಳುಗಳಲ್ಲಿ, ಸಿರಿದ್ಯಾನಗಳಲ್ಲಿ ಯಕ್ಷಗಾನ ಕಲಾಕೃತಿ ಮೂಡಿ ಬಂದು ಜನರನ್ನು ಆಕರ್ಷಿಸಿದೆ. ಈ ಬಾರಿಯ ಕೃಷಿ ಮೇಳದ ಪುಷ್ಪ ಪ್ರದರ್ಶನದಲ್ಲಿ ಹೂವಿನ ಲೋಕವೇ ಅನಾವರಣಗೊಂಡಿದೆ. ಮತ್ತೊಂದೆಡೆ 20 ಕ್ಕೂ ಹೆಚ್ಚು ಹಣ್ಣುಗಳು, ತರಕಾರಿಗಳು ಪ್ರದರ್ಶನದಲ್ಲಿ ಕಂಡುಬಂದವು ವಿಶೇಷವಾಗಿ, ಕಲ್ಲಗಂಡಿ ಹಣ್ಣಿನಲ್ಲಿ ದೇಶದ ಪ್ರಮುಖ ಗಣ್ಯರಾದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದ, ಸುಭಾಷಚಂದ್ರ ಬೋಸ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ನಟ ಪುನೀತ್ ರಾಜ್‌ಕುಮಾರ್ ಸೇರಿದಂತೆ ವಿವಿಧ ಗಣ್ಯರ ಪ್ರತಿಮೆಗಳು ಕಂಗೊಳಿಸುತ್ತಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ..

