‌ಸಾರಡ್ಕ ಕೃಷಿ ಹಬ್ಬ | “ನಾ ಕಂಡಂತೆ ಸಾರಡ್ಕ ಕೃಷಿ ಹಬ್ಬ 2025” ಕೃಷಿಕ ಎ ಪಿ ಸದಾಶಿವ ಅವರ ಅಭಿಪ್ರಾಯ |

January 27, 2025
11:12 AM
ಸಾರಡ್ಕದಲ್ಲಿ ನಡೆದ ಕೃಷಿಹಬ್ಬದ ಬಗ್ಗೆ ಸಾವಯವ ಕೃಷಿಕ ಎ ಪಿ ಸದಾಶಿವ ಅವರ ಅಭಿಪ್ರಾಯ.

ಇಂದು 26.01. 2025 ರಂದು ಕಳೆದ ವರ್ಷದಂತೆ ಈ ವರ್ಷವೂ ಆರಾಧನಾ ಕಲಾಮಂದಿರದಲ್ಲಿ ಕೃಷಿ ಹಬ್ಬ ಸಂಪನ್ನಗೊಂಡಿತು. ಮಧ್ಯಾಹ್ನದ ಮೇಲೆ ನಡೆಯುವ ಗೋಷ್ಠಿ ಒಂದರಲ್ಲಿ ನನ್ನ ಹೆಸರೂ ಸೇರಿಸಲಾಗಿದ್ದ ಕಾರಣ ಆ ಹೊತ್ತಿಗೆ ಮುಟ್ಟಿದ್ದರೆ ನನ್ನ ಕೆಲಸ ಪೂರ್ತಿಯಾಗುತ್ತಿತ್ತು. ಆದರೆ ಆಮಂತ್ರಣ ಪತ್ರಿಕೆಯನ್ನು ಸಂಪೂರ್ಣ ಓದಿದ ನನಗೆ ವಿಷಯ ಜ್ಞಾನದ ತಿಳುವಳಿಕೆಯ ದೃಷ್ಟಿಯಿಂದ ಇಡೀ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಿಗ್ಗೆಯೇ ಹೋಗಿ ಸಂಜೆವರೆಗೂ ಕುಳಿತಿದ್ದೆ. ಕೃಷಿಕರೆಲ್ಲರೂ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಾದುದರಿಂದ ಸಭೆಗೆ ಬರುವುದು ತಡವಾದ ಕಾರಣ ಸಭೆ ಸ್ವಲ್ಪ ತಡವಾಗಿ ಆರಂಭವಾಯಿತು. ಆಯೋಜಕರಾದ ಶಂಕರ ಸಾರಡ್ಕರ ಸ್ವಾಗತ ಮತ್ತು ಪ್ರಸ್ತಾವನೆ ಪ್ರಶಸ್ತಿ ವಿಜೇತ ಮುಖ್ಯೋಪಾಧ್ಯಾಯರ ಘನತೆಯಲ್ಲಿತ್ತು.…..ಮುಂದೆ ಓದಿ….

Advertisement
Advertisement
Advertisement
Advertisement

ಉದ್ಘಾಟಕರಾದ ಪದ್ಮ ಪ್ರಶಸ್ತಿಯ ಸತ್ಯನಾರಾಯಣ ಬೆಳೇರಿಯವರು ಆಹಾರ ಬೆಳೆಯ ಮಹತ್ವದ ಬಗ್ಗೆ ಸರಳವಾಗಿ ವಿವರಿಸಿದರು. ಕೋಟಿ ಸಂಪಾದನೆಗಿಂತ ಆರೋಗ್ಯದಾಯಕ ಮೇಟಿ ಸಂಪಾದನೆ ಶ್ರೇಷ್ಠ. ಸುತ್ತು ಮುತ್ತಲೆಲ್ಲ ಅನಾರೋಗ್ಯದ ವರದಿಗಳೇ ಕಾಣುವಾಗ ಎಷ್ಟು ಸಂಪಾದನೆ ಆದರೂ ಆಸ್ಪತ್ರೆಗೆ ಹಾಕುವ ಬದಲು ವಿಷ ರಹಿತ ಉಣ್ಣುವ ಅನ್ನವನ್ನು ಬೆಳೆದು ನೆಮ್ಮದಿ ಕಾಣುವುದರಲ್ಲಿ ಸುಖವಿದೆ ಅಂತ ಮುತ್ತಿನಂತ ಮಾತುಗಳನ್ನು ನುಡಿದಿದ್ದರು. ಆ ರೋಗಕ್ಕೆ, ಈ ರೋಗಕ್ಕೆ ಪರಿಹಾರಗಳನ್ನು ಕಾಣುವುದರಲ್ಲೇ ಸುಖ ಕಾಣುವ ಮಂದಿಗಳ ಮಧ್ಯೆ 270ಕ್ಕಿಂತ ಜಾಸ್ತಿ ವೈವಿಧ್ಯಮಯ ಭತ್ತಗಳನ್ನು ಬೆಳೆಯುವ ತಳಿ ತಪಸ್ವಿಯ ಮಾತುಗಳು ಹೃದಯಸ್ಪರ್ಶಿ.

Advertisement

ಶಂಕರ ಸಾರಡ್ಕರು ಬರೆದ ವಿದಾಯ ಹೇಳೋಣವೇ? ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದ ಜಯಪ್ರಕಾಶನಾರಾಯಣ ತೊಟ್ಟೆತೋಡಿಯವರು, ಪಾರಂಪರಿಕ ಜ್ಞಾನದಿಂದ ಸಂಸ್ಕರಿಸುವ ಮತ್ತು ಸಂರಕ್ಷಿಸಬೇಕಾದ ಅಡಿಕೆಯನ್ನು ಅಸಾಂಪ್ರದಾಯಿಕ ರೀತಿಯಲ್ಲಿ ಸಂರಕ್ಷಿಸ ಹೊರಟ ಫಲವೇ ಕ್ವಿಕ್ಪಾಸ್ ಮಾತ್ರೆಗಳು. ಬದುಕಿಗೆ ಶೀಘ್ರ ವಿದಾಯ ಹೇಳುವುದಕ್ಕಿಂತ ಮಾತ್ರೆಗೆ ವಿದಾಯ ಹೇಳುವುದು ಲೇಸು. ಡಬಲ್ ಚೋಲ್ ಎಂಬುದು ಸರ್ಪ್ಲಸ್ಸಿನ ಸಮಸ್ಯೆ. ಹಾಳಾಗುವ ಸಮಸ್ಯೆಗಿಂತ ಮೊದಲೇ ಅಡಿಕೆಯನ್ನು ವಿಲೇವಾರಿ ಮಾಡುವುದು ಹೆಚ್ಚು ಸೂಕ್ತ ಅಂತ ಅಭಿಪ್ರಾಯಸಿದರು. ಅಡಿಕೆ ಸಂರಕ್ಷಕ ಮತ್ತು ಕಳೆ ನಾಶಕದ ಭಯಾನಕ ಕಥಾನಕವನ್ನು ಹೊಂದಿದ ಪುಸ್ತಕ ವಿದಾಯ ಹೇಳೋಣವೇ? ಯಾವುದೇ ಪೂರ್ವಗ್ರಹಗಳಿಲ್ಲದೆ ಮನ ಬಿಚ್ಚಿ ಓದಿ ನೋಡೋಣ ಅಂತ ಅನಿಸಿದೆ.

ಜಿಜ್ಞಾಸೆ ಪುಸ್ತಕವನ್ನು ಬಿಡುಗಡೆ ಮಾಡಿದ ಅಬ್ದುಲ್ಲರು ಹಲವಾರು ಜಿಜ್ಞಾಸೆಗಳನ್ನು ನಮ್ಮ ಮುಂದೆ ಬಿತ್ತಿದ್ದರು. ಪುಸ್ತಕ ಖರೀದಿಸಿ ಓದಿದರೆ ನಮ್ಮೊಳಗಿನ ಜಿಜ್ಞಾಸೆಗಳಿಗೆ ಉತ್ತರ ಸಿಗಬಹುದು.

Advertisement

ಅಡಿಕೆ ಬೆಳೆಗಾರರ ನೆಚ್ಚಿನ ಸಂಸ್ಥೆ ಕ್ಯಾಮ್ಕೋದ ಉಪಾಧ್ಯಕ್ಷ ಶಂ.ನಾ ಖಂಡಿಗೆಯವರ ಶುಭನುಡಿ ಕಾರ್ಯಕ್ರಮಕ್ಕೊಂದು ಸ್ಪೂರ್ತಿ.

ಇಂದು ನಡೆದ ಗೋಷ್ಠಿಗಳಲ್ಲಿ ಸ್ವತಹ ಮಾಡಿದ ಅನುಭವಿ, ಕೃಷಿಕರೇ ಇದ್ದದ್ದು ವಿಶೇಷ. ಗತಿಸಿದ ಗೋವಿನ ವಿಶೇಷ ಸಂಸ್ಕರಣೆಯೇ ಗೋ ನಂದಾಜಲ. ಅದನ್ನು ಸ್ವತಹ ಮಾಡಿ ಜನರಿಗೆ ಹಂಚುವ ವ್ಯಕ್ತಿ ಪ್ರವೀಣ ಸರಳಾಯರು. ಲ್ಯಾಬೋರೇಟರಿ ನಿರ್ಮಿತ ಪೋಷಕಾಂಶಗಳಿಗಿಂತ,ಶ್ರೇಷ್ಠ ಪೋಷಕಾಂಶಗಳ ಘನಿ ಗೋನಂದಾಜಲ. ಪ್ರಯೋಗಿಸಿದಲೆಲ್ಲ ಎಲೆಚುಕ್ಕಿಗೆ ಪರಿಹಾರ ಸಿಕ್ಕಿದೆಯಂತೆ. ತೋಟಕ್ಕೆ ಎಲೆಚುಕ್ಕಿ ಪೀಡಿತರು ಯಾರ್ಯಾರೋ ಹೇಳಿದ ಅನೇಕ ರಾಸಾಯನಿಕಗಳನ್ನು ಪ್ರಯೋಗಿಸಿ ಪ್ರಯೋಗ ಪಶುಗಳಾಗುವ ಹೊತ್ತಿನಲ್ಲಿ, ಗೋ ನಂದಾಜಲಕ್ಕೂ ಒಂದು ಸ್ಥಾನ ನೀಡಬಹುದು ಅಂತ ಅನಿಸಿತು.

Advertisement

ಹುಟ್ಟಿನಿಂದ ಚಟ್ಟದವರೆಗೆ ಬಳಕೆಯಾಗುತ್ತಿದ್ದ ಬಿದಿರು ಉಪೇಕ್ಷೆಗೊಳಗಾಗಿ ಅವಸಾನದತ್ತ ಸಾಗಿತು. ಖಾಲಿ ಜಾಗದಲ್ಲಿ ಬೆಳೆಸಿದರೆ ಅದಕ್ಕೂ ಮಾರುಕಟ್ಟೆಯ ವಿಶಾಲ ಜಗತ್ತಿದೆ, ಮಣ್ಣಿನ ಸಂರಕ್ಷಣೆ, ನೀರಿನ ಸಂರಕ್ಷಣೆ ಮತ್ತು ಕಾರ್ಬನ್ ಕ್ರೆಡಿಟ್ ಈ ಬಗ್ಗೆ ಕೂಡ ಬಿದಿರು ಮೇರು ಸ್ಥಾನದಲ್ಲಿ ನಿಲ್ಲುತ್ತದೆ ಅಂತ ತಿಳಿಸಿಕೊಟ್ಟವರು ರಾಮಪ್ರತೀಕ ಕರಿಯಾಲ.

ಕಾರ್ಬನ್ ಕ್ರೆಡಿಟ್ ಸಂಗ್ರಹದ ಮೂಲಕ ಪರಿಸರವನ್ನು ಉಳಿಸುವುದು ಒಂದೆಡೆಯಾದರೆ, ಹಣದ ಖಜಾನೆಯನ್ನು ತುಂಬಿಸುವ ದಾರಿ ಇನ್ನೊಂದಿದೆಯಂತೆ. ದೊಡ್ಡ ದೊಡ್ಡ ಫ್ಯಾಕ್ಟರಿಗಳು ವಾತಾವರಣಕ್ಕೆ ಬಿಡುವ ಹೊಗೆಯಿಂದಾಗಿ ಆಗುವ ದೋಷ ಪರಿಹಾರಕ್ಕೆ ಹಸುರು ಬೆಳೆಸಲೇ ಬೇಕೆಂಬುದು ಶಾಸನ. ಆದರೆ ಆಮಟ್ಟದಲ್ಲಿ ಅವರಿಂದ ಬೆಳಸಲು ಸಾಧ್ಯವಾಗುತ್ತಿಲ್ಲ. ಅದರ ಪರಿಹಾರಾರ್ಥವಾಗಿ ಜುಲ್ಮಾನೆ ಕಟ್ಟುತ್ತಲೇ ಇರುತ್ತಾರಂತೆ. ಆ ಬಗ್ಗೆ ರೈತರು ಮನ ಮಾಡಿ ಹತ್ತು ಸೆಂಟ್ಸ್ ಮೇಲೆ ಎಷ್ಟಾದರೂ ಸರಿ ಹಸುರನ್ನು ಬೆಳೆಸಿಕೊಟ್ಟರೆ ಅದಕ್ಕೊಂದಷ್ಟು ಮೊತ್ತ ರೈತನ ಖಾತೆಗೆ ಸೇರುವುದಂತೆ. ಕೇರಳದಲ್ಲಿ ಈಗಾಗಲೇ ಜಾರಿಯಾಗಿದೆ. ಕರ್ನಾಟಕದಲ್ಲಿ ಜಾರಿಯ ಹಂತದಲ್ಲಿದೆ. ಮುಂದಿನ ದಿನದಲ್ಲಿ ಆ ಬಗ್ಗೆ ಉತ್ಸುಕರಾಗೋಣ ಮತ್ತು ಪ್ರಕೃತಿಯನ್ನು ಉಳಿಸೋಣ. ವಾತಾವರಣದ ಬಿಸಿಯನ್ನು ಕಡಿಮೆ ಮಾಡುವಲ್ಲಿ ಎಲ್ಲರೂ ಕೈಜೋಡಿಸೋಣ ಅಂತ ಆ ರಂಗದಲ್ಲಿ ದುಡಿಯುತ್ತಿರುವ ಸ್ವತಹ ಸಾವಯವ ಕೃಷಿಕರೂ ಆದ ಕೈರಳಿ ರೈತ ಸೇವಾ ಸಂಸ್ಥೆಯ ಅಧಿಕಾರಿ ಶಿವಪ್ರಸಾದ ಎಸ್.ಎಂ. ಮಾತುಗಳು ಒಂದಷ್ಟು ಆಶಾದಾಯಕ ಬೆಳವಣಿಗೆ ಅಂತ ಅನಿಸಿತು.

Advertisement

ಕೂಲಿ ಸಮಸ್ಯೆಯನ್ನು ಕಡಿಮೆ ಮಾಡುವ ಪರಿಹಾರವಾಗಿ ಶ್ರೀಹರಿ ಭಟ್ ಸಜಂಗದ್ದೆಯವರ ಪಾತಾಳದಿಂದ ಮೇಲಕ್ಕೆರಿಬರುವ ಅಡಿಕೆ ಅಥವಾ ಇನ್ನಿತರ ಭಾರದ ವಸ್ತುಗಳ ಸಾಗಾಟದ ರೋಪುವೇ ಸರಳ ತಂತ್ರಜ್ಞಾನದ ಪ್ರತೀಕ. ಒಂದೆಡೆಯಲ್ಲಿ ವಾಹನದ ರಸ್ತೆ ಮಾಡಲು ಅನಾನುಕೂಲ, ಹೊತ್ತು ಸಾಗಿಸುವ ಅಸಮರ್ಥತೆಯ ಕಾರಣದಿಂದ ಕೆಲಸ ತಪ್ಪಿಸುವ ಕೂಲಿ ಆಳಿನ ಸಮಸ್ಯೆಗಳಿಗೆ ಅವರು ಕಂಡುಕೊಂಡ ಪರಿಹಾರ ಅದೇ ರೀತಿಯ ಜಾಗವನ್ನು ಹೊಂದಿದವರಿಗೆ ಸುಲಭೋಪಾಯ.

ರಾಜಸ್ಥಾನದ ಮಂದಿ ಕಂಡುಕೊಂಡ ಸರಳ ಕೆಸರೆತ್ತು ಸಾಧನವನ್ನು ನಮ್ಮೂರಲ್ಲೂ ಅಭಿವೃದ್ಧಿಪಡಿಸಿ ಕೆರೆಯನ್ನು ಶುಚಿಗೊಳಿಸಿ ಊರ್ಜಿತದಲ್ಲಿ ಇಟ್ಟ ಬಗ್ಗೆ ವಿವರಣೆ ಕೊಡಲು ನನಗೂ ಒಂದು ಅವಕಾಶ ಸಿಕ್ಕಿತ್ತು. ತಂತ್ರಜ್ಞಾನಗಳು ನಮಗೆ ಅವಶ್ಯ ಆದರೆ ತಂತ್ರಜ್ಞಾನಗಳೇ ನಮಗೆ ಶಾಪವಾಗಬಾರದು. ಉದಾಹರಣೆಗೆ ರಾಕ್ಷಸ ಜೆಸಿಬಿ ಯಂತ್ರಗಳು, ತೂತು ಬಾವಿಗಳು, ಗದ್ದೆ ಉಳುವ ಟ್ರ್ಯಾಕ್ಟರ್ ಗಳು, ಕಳೆ ಕೀಟ ನಾಶಕಗಳು ಇತ್ಯಾದಿ.

Advertisement

ಅಂಗೈಯಲ್ಲಿ ನೀರನಿರ್ವಹಣೆಯ ಕುರಿತು ವಿವರಣೆ ಇತ್ತವರು ಅಭಿಜಿತ್ ಕಿಸಾನ್ ಆಗ್ರೋ ಪುತ್ತೂರು ಸಂಸ್ಥೆಯವರು. ಹತ್ತಾರು ಎಕರೆಯಿಂದ ನೂರಾರು ಎಕ್ರೆವರೆಗೆ ಹಾಸಿಗೆಯಲ್ಲೇ ಪವಡಿಸಿಕೊಂಡು ನೀರಾವರಿ ಮಾಡುವ ವಿಧಾನದ ಪ್ರತ್ಯಕ್ಷ ದರ್ಶನ ಮಾಡಿಸಿದರು. ತಂತ್ರಜ್ಞಾನದ ಉತ್ತುಂಗ ಸ್ಥಿತಿ ಇದು. ಕೆಲವೊಂದು ಹೈಟೆಕ್ ತೋಟದ ಸುಂದರ ಚಿತ್ರಗಳನ್ನೂ ಪ್ರದರ್ಶಿಸಿದ್ದರು. ಅಸಂಪ್ರದಾಯಿಕ ಜಾಗದಲ್ಲಿ ದಕ್ಷಿಣ ಕನ್ನಡಿಗರ ಸಾಂಪ್ರದಾಯಿಕ ಬೆಳೆಯಾದ ಅಡಿಕೆಯನ್ನು ಬೆಳೆಸಿದ ವೈಮಾನಿಕ ಚಿತ್ರಣ ಬಹಳ ಸುಂದರವಾದ ಫೋಟೋಗ್ರಫಿಗೆ ಸಾಕ್ಷಿ. ಆದರೆ ಇಂತಹ ಅಗಾಧ ವಿಸ್ತರಣೆ ಪ್ರಕೃತಿಯ ದೃಷ್ಟಿಯಿಂದ ಸುಸ್ತರಣೆಯೇ? ಎಂಬ ಪ್ರಶ್ನೆ ನನ್ನಂತ ಹಲವರಿಗೆ ಕಾಡಿತ್ತು.

ಎಲ್ಲರ ಮಾತುಗಳನ್ನು ಕ್ರೋಢಿಕರಿಸಿ ವಿಶ್ಲೇಷಣೆ ಮಾಡಿ ಅಡಿಕೆಯ ಭವಿಷ್ಯದ ಬಗ್ಗೆ ಚಿಂತನೆಯನ್ನು ಹರಿಸಿದವರು ಬೆಳೆಗಾರರ ಸಂಘದ ಅಧ್ಯಕ್ಷರಾದ ಮಹೇಶ್ ಪುಚ್ಚಪ್ಪಾಡಿ ಅವರು. ಒಂದು ಕಾಲದ ಮೇರು ಸಂಸ್ಥೆಯಾದ ಅಡಿಕೆ ಬೆಳೆಗಾರರ ಸಂಘ ಇಂದು ಒಂದಷ್ಟು ಹಿನ್ನಡೆಯಲ್ಲಿದೆ. ಸಂಘದ ಬೆಳವಣಿಗೆಯಲ್ಲಿ ಎಲ್ಲರೂ ಪಾಲುದಾರರಾಗಿ. ಎಲ್ಲರೂ ಒಟ್ಟಾಗಿ ಸಂಘಟನೆಯಲ್ಲಿ ಸೇರಿಕೊಂಡು ಮುನ್ನಡೆಯೋಣ ಅಂತ ಶುಭ ಹಾರೈಸಿದ್ದರು.

Advertisement

ಮಧ್ಯಾಹ್ನದ ಸರಳಾತಿ ಸರಳ ಭೋಜನ, ಸರಳ ತಿಂಡಿ ತಿನಿಸುಗಳು ಹೊಟ್ಟೆಯನ್ನು ತಂಪಾಗಿಸಿದ್ದರೆ, ಸಂಪೂರ್ಣ ಘೋಷ್ಠಿಗಳು ಉತ್ತಮ ಜ್ಞಾನದ ಹಸಿವನ್ನು ನೀಗಿಸಿತ್ತು. ಬಂದವರ ಮನೆಯ ಅಗತ್ಯಗಳನ್ನು ಪೂರೈಸುವಂತಹ ಸ್ಟಾಲುಗಳು ಕಾರ್ಯಕ್ರಮಕ್ಕೆ ಒಂದು ಮೆರುಗು ನೀಡಿದ್ದವು.

ಆಯೋಜಕರಾದ ಶಂಕರ ಸಾರಡ್ಕರಿಗೆ ವಿದಾಯ ಹೇಳುವಾಗ ಹಲವು ದಿನಗಳಿಂದ ಓಡಾಡಿದ ಸುಸ್ತನ್ನು ಶರೀರ ಹೇಳುತ್ತಿದ್ದರೂ, ಮುಖದಲ್ಲಿ ಉತ್ತಮ ಕಾರ್ಯಕ್ರಮವನ್ನು ನಡೆಸಿಕೊಟ್ಟ ತೃಪ್ತಿ ಎದ್ದು ಕಾಣುತ್ತಿತ್ತು.ಅಭಿನಂದನೆಗಳು ಶಂಕರಣ್ಣ, ಉತ್ತಮ ಕಾರ್ಯಕ್ರಮವನ್ನು ಸಂಘಟಿಸಿದ್ದಕ್ಕೆ.

Advertisement
ಬರಹ :
ಎ. ಪಿ. ಸದಾಶಿವ ಮರಿಕೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಕೇಂದ್ರ ಸರ್ಕಾರದ  ಬಜೆಟ್ ಮೇಲೆ ರೈತಾಪಿ ವರ್ಗ  ಬಹಳ ನಿರೀಕ್ಷೆ | ಕುರುಬೂರು ಶಾಂತಕುಮಾರ್
January 27, 2025
8:41 PM
by: The Rural Mirror ಸುದ್ದಿಜಾಲ
ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |
January 26, 2025
7:35 AM
by: The Rural Mirror ಸುದ್ದಿಜಾಲ
ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ
January 26, 2025
7:14 AM
by: The Rural Mirror ಸುದ್ದಿಜಾಲ
ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror