ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೃಷಿಯಲ್ಲಿ ಎಐ, ಡ್ರೋನ್‌ಗಳು ಮತ್ತು ರೊಬೊಟಿಕ್ಸ್ ಅನ್ನು ಪರಿಚಯಿಸುವ ಗುರಿಯನ್ನು ಹೊಂದಿರುವ ಮಹಾಅಗ್ರಿ-ಎಐ ನೀತಿಯನ್ನು ಮಹಾರಾಷ್ಟ್ರದಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸಂಪುಟದಲ್ಲೂ ಅನುಮೋದನೆ ನೀಡಲಾಗಿದೆ.
ಡಿಜಿಟಲ್ ಯುಗದಲ್ಲಿ ಕೃಷಿ ವಲಯವನ್ನು ಕೂಡಾ ಶಕ್ತಿಶಾಲಿಯಾಗಿಸಲು ಮತ್ತು ರೈತರು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ(AI), ಡ್ರೋನ್‌ಗಳು, ಕಂಪ್ಯೂಟರ್ ವಿಷನ್, ರೊಬೊಟಿಕ್ಸ್ ಮತ್ತು ಹವಾಮಾನ ವಿಶ್ಲೇಷಣೆಯಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸಲು ಮಹಾರಾಷ್ಟ್ರ ಸರ್ಕಾರ ಯೋಜನೆ ರೂಪಿಸಿದೆ, ಈ ನೀತಿಯ ಅನುಷ್ಠಾನಕ್ಕಾಗಿ ಸರ್ಕಾರ 500 ಕೋಟಿ ರೂ.ಗಳನ್ನುಕೂಡಾ ಮೀಸಲಿಟ್ಟಿದೆ.
ಸಾಂಪ್ರದಾಯಿಕ ಕೃಷಿಗಿಂತ ಭಿನ್ನವಾಗಿ, ತಂತ್ರಜ್ಞಾನದಿಂದ ರೈತರಿಗೆ ಲಾಭ ಪಡೆಯಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಈ ನೀತಿ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.
ಇಲ್ಲಿAI ಸಹಾಯದಿಂದ, ಮರಾಠಿ ಭಾಷೆಯಲ್ಲಿ ಚಾಟ್‌ಬಾಟ್‌ಗಳು ಮತ್ತು ಧ್ವನಿ ಸಹಾಯಕಗಳನ್ನು ಬಳಸಿಕೊಂಡು ರೈತರಿಗೆ ಸಲಹೆಯನ್ನು ನೀಡಲಾಗುವುದು. ಇದು ಬೆಳೆ ಉತ್ಪಾದನೆ, ರೋಗ ಮತ್ತು ಕೀಟ ನಿರ್ವಹಣೆ, ಹವಾಮಾನ ಮುನ್ಸೂಚನೆಗಳು, ಮಾರುಕಟ್ಟೆ ಬೆಲೆಗಳು ಮತ್ತು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ಇದರ ಜೊತೆಗೆ ಈ ವೇದಿಕೆಯು ಕೃಷಿ ಭೂಮಿಯಿಂದ ಗ್ರಾಹಕರವರೆಗಿನ ಎಲ್ಲಾ ಮಾಹಿತಿಯನ್ನು , ಬೆಳೆಗಳಿಗೆ ಬಳಸಲಾದ ರಸಗೊಬ್ಬರಗಳು ಮತ್ತು ಕೀಟನಾಶಕಗಳು, ಕೃಷಿ ಪದ್ಧತಿಗಳು, ಕೊಯ್ಲಿನ ನಂತರದ ಸಂಸ್ಕರಣೆ ಮತ್ತು ಗುಣಮಟ್ಟದ ಪ್ರಮಾಣಪತ್ರಗಳು ಸೇರಿದಂತೆ ಇತರ ವಿವರಗಳ ಡಿಜಿಟಲ್ ಮತ್ತು ಜಿಯೋ-ಟ್ಯಾಗ್ ಮಾಡಿದ ದಾಖಲೆಯನ್ನು ಕೂಡಾ ಸಹ ರಚಿಸುತ್ತದೆ. ಇದು ಮಾರುಕಟ್ಟೆಗೂ ಅನುಕೂಲವಾಗಲಿದೆ.