ಇಂಧನ ಕ್ಷೇತ್ರದಲ್ಲಿ ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ವಿಶೇಷವಾಗಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ ಕಾಣುತ್ತಿದೆ. ಬಜೆಟ್ ನಲ್ಲಿ ಇಂಧನ ವಲಯಕ್ಕೆ ಹೆಚ್ಚು ಮಹತ್ವ ನೀಡಲಾಗಿದ್ದು, ಬಜೆಟ್ ನಲ್ಲಿ ಘೋಷಿಸಿರುವ ಹೊಸ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸೌರ ಉತ್ಪಾದನೆಗೆ ಸರ್ಕಾರ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಅಂತಾರಾಷ್ಟ್ರೀಯ ಸೌರ ಒಕ್ಕೂಟದ 7ನೇ ಅಧಿವೇಶನ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯಿತು. ಇಂಧನ ಲಭ್ಯತೆ, ಭದ್ರತೆ ಮತ್ತು ಸಂಪ್ರದಾಯಿಕ ಇಂಧನಗಳ ಮೇಲೆ ಪರಿಣಾಮ ಬೀರುವ ಉಪಕ್ರಮಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದಲ್ಲದೆ, ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ಕೊಡುವ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.
2030ರ ವೇಳೆಗೆ ಸೌರಶಕ್ತಿ ಪರಿಹಾರಗಳಲ್ಲಿ ಒಂದು ಸಾವಿರ ಶತಕೋಟಿ ಡಾಲರ್ ಹೂಡಿಕೆಯನ್ನು ಸಜ್ಜುಗೊಳಿಸುವ ಗುರಿ ಹೊಂದಿರುವ ಟುವರ್ಡ್ಸ್ ಸಾವಿರ ಕಾರ್ಯತಂತ್ರದ ಕಡೆಗೆ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮಾರ್ಗದರ್ಶನ ನೀಡಿದೆ. ಒಂದು ಸಾವಿರ ದಶಲಕ್ಷ ಜನರಿಗೆ ಇಂಧನದ ಲಭ್ಯತೆ ಒದಗಿಸುವುದು, ಒಂದು ಸಾವಿರ ಗಿಗಾವ್ಯಾಟ್ ಸೌರಶಕ್ತಿ ಸಾಮರ್ಥ್ಯದ ಸ್ಥಾಪನೆ ಮತ್ತು ಪ್ರತಿವರ್ಷ ಒಂದು ಸಾವಿರ ಮೆಟ್ರಿಕ್ ಟನ್ ಇಂಗಾಲದ ಡೈ ಆಕ್ಸೈಡ್ ಹೊರ ಸೂಸುವಿಕೆ ತಗ್ಗಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಅಧಿವೇಶನದಲ್ಲಿ 120 ಸದಸ್ಯ ರಾಷ್ಟ್ರಗಳ ಇಂಧನ ಸಚಿವರು, ಇಂಧನ ವಲಯದ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಉದ್ಯಮಿಗಳು ಭಾಗವಹಿಸಿದ್ದರು.