ಕಳೆದ ಒಂದು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಕನಿಷ್ಠ 1.29 ಲಕ್ಷ ಧ್ವನಿವರ್ಧಕಗಳನ್ನು ತೆಗೆಯಲಾಗಿದೆ. ಕೆಲವುಗಳ ಡೆಸಿಬಲ್ ಮಟ್ಟವನ್ನು ಕಡಿಮೆ ಮಾಡಲಾಗಿದೆ. ಈ ಪೈಕಿ 71,114 ಧ್ವನಿವರ್ಧಕಗಳನ್ನು ವಿವಿಧ ಪೂಜಾ ಸ್ಥಳಗಳಿಂದಲೇ ತೆಗೆದುಹಾಕಲಾಗಿದೆ. ತೆಗೆದ ಧ್ವನಿವರ್ಧಕಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಶಾಲೆಗಳಿಗೆ ಸರ್ಕಾರವು ಹಸ್ತಾಂತರಿಸಿದೆ.
ಶಾಲೆಗಳ ಬೆಳಗಿನ ಸಭೆಗಾಗಿ 4371 ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ನೀಡಲಾಯಿತು. ಉತ್ತರ ಪ್ರದೇಶದ ಗೃಹ ಇಲಾಖೆಯು ಏಪ್ರಿಲ್ 23 ರಂದು ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಆದೇಶವನ್ನು ನೀಡಿತ್ತು. ಸಿಎಂ ನಿರ್ದೇಶನಗಳು ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಆಧರಿಸಿತ್ತು. ಈ ನೆಲೆಯಲ್ಲಿ ವಿವಿಧ ಸಮುದಾಯಗಳ ಧಾರ್ಮಿಕ ಮುಖಂಡರೊಂದಿಗೆ ಸಂವಾದ ಹಾಗೂ ಧ್ವನಿವರ್ಧಕಗಳ ಮೂಲಕ ಶಬ್ದ ಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಮೂಲಕ ಇಡೀ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ನಡೆಸಲಾಯಿತು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಧಾರ್ಮಿಕ ಮುಖಂಡರು ಧ್ವನಿವರ್ಧಕಗಳನ್ನು ತೆಗೆಸುವಲ್ಲಿ ಸಹಕಾರ ನೀಡಿದರು.