ಅಡಿಕೆ ಪರ್ಯಾಯ ಬಳಕೆಯ ಸೆಮಿನಾರ್ ನಲ್ಲಿ ಕುತೂಹಲಿಗನಾಗಿ ಭಾಗವಹಿಸಿದವರಲ್ಲಿ ನಾನೂ ಒಬ್ಬ. ತುಂಬಾ ದೀರ್ಘ ಅಂತ ಅನಿಸಿದರೂ, ಸಂಶೋಧಕರೆಲ್ಲರ ಸಂಶೋಧನೆ ಮತ್ತು ವಿವರಣೆ ತುಂಬಾ ಚೆನ್ನಾಗಿತ್ತು. ಅವರೆಲ್ಲರ ಸಾಧನೆಗೆ ಅಭಿನಂದನೆಗಳು. ಎಲ್ಲಾ ಸಂಶೋಧಕರಿಗೂ ಮೂಲ ಪ್ರೇರಣೆ ಬದನಾಜೆ ಶಂಕರ ಭಟ್ಟರೆ ಎಂಬುದು ಬಹಳ ಕುತೂಹಲದ ಮತ್ತು ಆಶ್ಚರ್ಯದ ಸಂಗತಿ. ಇದು ಶಂಕರ ಭಟ್ಟರ ಅಸಾಧಾರಣ ಸಂಶೋಧನಾ ಸಾಮರ್ಥ್ಯಕ್ಕೆ ನಿದರ್ಶನ.
ಹೆಚ್ಚಿನ ಉತ್ಪನ್ನಗಳು ಅಡಿಕೆಯ ಮಾರುಕಟ್ಟೆಯ ದೃಷ್ಟಿಯಿಂದ ತುಂಬಾ ಪ್ರಯೋಜನವಾಗಬಹುದು ಎಂದು ನನಗೆ ಅನ್ನಿಸಲಿಲ್ಲ. ಎಲ್ಲಾ ಉತ್ಪನ್ನಗಳು ಅಡಿಕೆಯ ಉಪ ಉತ್ಪನ್ನಗಳಿಂದ ತಯಾರು ಮಾಡಿದಂತವುಗಳು. ಅದು ಮಾರುಕಟ್ಟೆಗೆ ಪೂರಕವೇ ಹೊರತು ಅಡಿಕೆ ಮೂಲವಸ್ತುವಾಗಿ ಬಳಕೆಯಲ್ಲಿ ತುಂಬಾ ಪ್ರಯೋಜನಕಾರಿ ಆಗಲಾರದು ಎಂದು ನನ್ನ ಅನಿಸಿಕೆ.
ಶಂಕರ ಭಟ್ಟರು ತಮ್ಮೆಲ್ಲ ಉತ್ಪನ್ನಗಳ ಬಗ್ಗೆ ವಿವರಿಸುತ್ತಾ, 1450 ವರ್ಷಕ್ಕೂ ಹಿಂದೆ ಬರೆದಿಟ್ಟ ಶ್ಲೋಕ ಒಂದನ್ನು ಉದ್ಧರಿಸಿ ಅಡಿಕೆ ಮತ್ತು ವೀಳ್ಯದೆಲೆ ಎಂಬುದು ಸಂಸಾರದಲ್ಲಿ ಪತಿ ಪತ್ನಿ ಇದ್ದಂತೆ. ಎರಡೂ ಇದ್ದಾಗ ಬಲು ಆರೋಗ್ಯದಾಯಕ ಎಂಬ ಮಾತು ಬಲು ಕುತೂಹಲಕರ. ಅದಕ್ಕೆ ಪೂರಕವಾಗಿ ಅಡಿಕೆಯಿಂದ ಮಾಡಿದ ಔಷಧಿಗಳ ಧನಾತ್ಮಕ ಅಂಶಗಳನ್ನು ಡಾಕ್ಟರ್ ಗಳು ಪ್ರಸ್ತುತಪಡಿಸಿದ್ದರು. ಈ ಮೇಲಿನ ಪೂರಕ ಮಾತುಗಳನ್ನು ಪ್ರಚುರಪಡಿಸುತ್ತಾ ತಂಬಾಕು ರಹಿತ ವೀಳ್ಯದ ಬಳಕೆಗೆ ಒತ್ತುಕೊಟ್ಟಲ್ಲಿ ಅಡಿಕೆ ಮಾರುಕಟ್ಟೆಯ ಹಿತದೃಷ್ಟಿಯಿಂದ ಪ್ರಯೋಜನವಾಗಬಹುದು ಎಂದು ಅನಿಸಿತು.
ನಾವು ಗಮನಿಸಬೇಕಾದ ಅಂಶ, ಅಡಿಕೆ ಬಳಕೆಯಿಂದ ಕ್ಯಾನ್ಸರ್ ನಾಶವಾಗುತ್ತದೆ, ಗ್ಯಾಂಗ್ರಿನ್ ಗುಣವಾಗುತ್ತದೆ, ಮಲಬದ್ಧತೆಯ ಸಮಸ್ಯೆ ಪರಿಹಾರವಾಗುತ್ತದೆ ಎಂಬ ವಿಷಯಗಳನ್ನೆಲ್ಲ ಒಪ್ಪಿಕೊಂಡರೂ, ಅದನ್ನು ಸಂಶೋಧಿಸಿದವರಿಂದ ಹಿಡಿದು ನನ್ನವರೆಗೆ ಅಲ್ಲಿ ಯಾರೂ ಅಡಿಕೆ ಬಳಸುವವರು ಇರಲಿಲ್ಲ.