ಜಮ್ಮು – ಕಾಶ್ಮೀರ ಸರ್ಕಾರ ಅಮರನಾಥ ಗುಹೆ ದೇಗುಲಕ್ಕೆ ಹೋಗುವ ಎಲ್ಲಾ ಮಾರ್ಗಗಳನ್ನು ಯಾತ್ರೆಯ ಅವಧಿಯಲ್ಲಿ ಹಾರಾಟ ನಿಷೇಧ ವಲಯ ಎಂದು ಘೋಷಿಸಿದೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೊರಡಿಸಿರುವ ಆದೇಶದ ಪ್ರಕಾರ, ಪಹಲ್ಗಾಮ್ ಮತ್ತು ಬಾಲ್ಟಾಲ್ ಗೆ ಸಂಪರ್ಕ ಕಲ್ಪಿಸುವ ಮಾರ್ಗಗಳೂ ಸೇರಿದಂತೆ ಅಮರನಾಥ ಯಾತ್ರಾ ಮಾರ್ಗಗಳಲ್ಲಿ ಜುಲೈ 1 ರಿಂದ ಆಗಸ್ಟ್ ತಿಂಗಳವರೆಗೆ ಡ್ರೋನ್‌ಗಳು ಮತ್ತು ಬಲೂನ್‌ಗಳು ಸೇರಿದಂತೆ ಯಾವುದೇ ರೀತಿಯ ವಾಯುಯಾನ ಸಾಧನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಆದರೆ ಇದು ವೈದ್ಯಕೀಯ ಸ್ಥಳಾಂತರಿಸುವಿಕೆ, ವಿಪತ್ತು ನಿರ್ವಹಣೆ ಮತ್ತು ಭದ್ರತಾ ಪಡೆಗಳ ಕಣ್ಗಾವಲುಗಾಗಿ ಈ ನಿರ್ಬಂಧ ಅನ್ವಯಿಸುವುದಿಲ್ಲ.
ಮುಂಬರುವ ಅಮರನಾಥ ಯಾತ್ರೆಗೆ ಭದ್ರತಾ ಸಿದ್ಧತೆಗಳಿಗಾಗಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆಯ ನಡೆಯಿತು. ಅಮರನಾಥ ಯಾತ್ರೆಗೆ ಭದ್ರತೆ ಮತ್ತು ಸಿದ್ಧತೆಗಳ ಕುರಿತು ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸುವುದು ಇದರ ಉದ್ದೇಶವಾಗಿತ್ತು. ಹಿಮಾಲಯದಲ್ಲಿರುವ 3 ಸಾವಿರದ 888 ಮೀಟರ್ ಎತ್ತರದ ಪವಿತ್ರ ದೇವಾಲಯಕ್ಕೆ ವಾರ್ಷಿಕ ತೀರ್ಥಯಾತ್ರೆ ಮುಂದಿನ ತಿಂಗಳು 3 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 3 ರಂದು ನಡೆಯಲಿರುವ ರಕ್ಷಾ ಬಂಧನದ ಹಬ್ಬ ಆಚರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ.