ನಾವಿಂದು ಚಂದ್ರಲೋಕಕ್ಕೂ ಅಡಿಯಿಡುವ ಯೋಗ್ಯತೆಯನ್ನು ಸಂಪಾದಿಸಿದ್ದೇವೆ. ಆದರೆ ಪಕ್ಕನ ಮನೆಗೆ ಹೋಗಲಾರದಷ್ಟು ಸಮಯಹೀನರಾಗಿದ್ದೇವೆ. ಮನುಷ್ಯನ ಮೌಲ್ಯಗಳು ಹಂತಹಂತವಾಗಿ ಕುಸಿಯುತ್ತಿವೆ. ಆದ್ದರಿಂದ ನಿರ್ನಾಮವಾಗುತ್ತಿರುವ ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ. ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿ ರೂಪಿಸುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಪುತ್ತೂರಿನ ಹಿರಿಯ ನ್ಯಾಯವಾದಿ ಚಿದಾನಂದ ಬೈಲಾಡಿ ಹೇಳಿದರು.
ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾದ ಸ್ವಚ್ಚ ಭಾರತ – ಜಾಗೃತಿ ಅರಿವು ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ ಮುಳಿಯ ಮಾತನಾಡಿ ಕಸದ ಬಗೆಗೆ ತೀವ್ರವಾದ ಜಾಗೃತಿಯನ್ನು ನಾವು ಜಾರಿಗೊಳಿಸಬೇಕಿದೆ. ಇಂದಿಗೂ ನಮ್ಮ ಮನೆ ಮುಂದಿನ ಕಸ ತೆಗೆಯುವುದಕ್ಕೆ ಮತ್ಯಾರೋ ಬರಬೇಕು ಎಂಬ ಭಾವನೆಯಿಂದ ಇರುವ ಜನ ಅನೇಕರಿದ್ದಾರೆ. ಎಳೆಯ ವಯಸ್ಸಿನಿಂದಲೇ ಮಕ್ಕಳಲ್ಲಿ ಕಸ ವಿಲೇವಾರಿಯ ಬಗೆಗೆ ಜಾಗೃತಿ ಮೂಡಿಸಿದಲ್ಲಿ ಅದು ಪರಿಣಾಮಕಾರಿಯೆನಿಸುತ್ತದೆ. ಸ್ವತಃ ಶ್ರಮದಾನದ ಮೂಲಕ ಕಸ ಹೆಕ್ಕುವ ಜತೆಗೆ ಆ ಬಗೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಅಗತ್ಯವಾಗಿ ಬೇಕಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಮುಂದಿನ ಶತಮಾನಗಳನ್ನು ಆಳಲಿರುವ ಭಾರತವನ್ನು ನಾವು ಸುಂದರವಾಗಿ ರೂಪಿಸಬೇಕಿದೆ. ದೇಶ ನನ್ನದು ಎಂಬ ಭಾವನೆಯಿಂದ ವ್ಯವಹರಿಸಿದಾಗ ಕಸಕಡ್ಡಿಗಳನ್ನು ವಿಲೇವಾರಿ ಮಾಡಬೇಕೆಂಬ ಸ್ಪೂರ್ತಿ ತನ್ನಿಂದತಾನಾಗಿ ಮೂಡಿಬರುತ್ತದೆ. ದೇಶವನ್ನು ದೇವಿ ಎಂದು ಆರಾಧಿಸುವ ಜನ ನಾವು. ಆದರೆ ಆ ದೇವಿಯ ಮೈಯ ಮೇಲೆ ನಾವು ಮಾಡಬಾರದ ಅನಾಚಾರಗಳನ್ನು ಮಾಡುತ್ತಿರುವುದು ಅಕ್ಷಮ್ಯ. ನಮ್ಮನ್ನು ನಾವು ತಿದ್ದಿಕೊಳ್ಳುವುದು ತುಂಬಾ ಅಗತ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ ಎ, ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ರಾಷ್ಟ್ರೀಯ ಸೇವಾ ಯೋಜನೆಯ ನಿದೇಶಕ ಹರ್ಷಿತ್ ಪಿಂಡಿವನ, ಅಂಬಿಕಾ ವಿದ್ಯಾಲಯದ ಸ್ಕೌಟ್ ತಂಡ, ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಜಾಗೃತಿ ಅರಿವು ಕಾರ್ಯಕ್ರಮ ನಡೆಯಿತು.