ಪತ್ರಿಕೋದ್ಯಮವನ್ನು ತರಗತಿಯಲ್ಲಿ ಕಲಿಯುವುದರೊಂದಿಗೆ ಬಾಹ್ಯವಾಗಿ ಕಲಿಯಬೇಕಾದದ್ದು ಕೂಡ ಬಹಳಷ್ಟಿದೆ. ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಯುಟ್ಯೂಬ್, ಫೇಸ್‍ಬುಕ್, ಇನ್ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮಗಳು ವರದಾನವಾಗಿ ಪರಿಣಮಿಸಿವೆ. ಇಂತಹ ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ನೂತನವಾಗಿ ಆರಂಭಿಸಲಾಗಿರುವ ‘ಅನುಪಮ ಪ್ರತಿಭಾ ವೇದಿಕೆ’ಯನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಆಧುನಿಕ ದಿನಗಳ ಮಾಧ್ಯಮ ನಕಾರಾತ್ಮಕ ಸುದ್ದಿಗಳೆಡೆಗೆ ಸಾಕಷ್ಟು ಆಕರ್ಷಿತವಾಗಿವೆ. ಪತ್ರಿಕೆಗಳನ್ನು ತೆರೆದರೆ, ಸುದ್ದಿವಾಹಿನಿಗಳನ್ನು ಗಮನಿಸಿದರೆ ಸಾಲು ಸಾಲು ಅಪರಾಧ ಸುದ್ದಿಗಳು ಕಣ್ಣಿಗೆ ರಾಚುತ್ತವೆ. ಜನರ ಮನಃಸ್ಥಿತಿಯಲ್ಲಾದ ಬಲಾವಣೆ ಇಂತಹ ಸುದ್ದಿಗಳಿಗೆ ಮಹತ್ವವನ್ನು ನೀಡುತ್ತಿವೆ. ಹಾಗಾಗಿ ನಕಾತಾತ್ಮಕ ಮನೋಧೋರಣೆಯಿಂದ ಸಕಾರಾತ್ಮಕತೆಯೆಡೆಗೆ ಜನರನ್ನು ಕರೆತರಬೇಕಿದೆ. ಪಾಸಿಟಿವ್ ಪತ್ರಿಕೋದ್ಯಮವನ್ನು ಆಚರಣೆಗೆ ತರಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲೇ ಪತ್ರಿಕೋದ್ಯಮದ ಪ್ರಾಯೋಗಿಕ ಸಂಗತಿಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು. ಈ ನೆಲೆಯಲ್ಲಿ ಕಾಲೇಜಿನಲ್ಲಿ ಲಭ್ಯವಾಗುವ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಅತ್ಯುತ್ತಮ. ನಮ್ಮ ಪ್ರತಿಭೆಗಳಿಗೆ ಸರಿಯಾದ ವೇದಿಕೆ ದೊರೆತಾಗ ಸಾಧನೆ ಸಾಧ್ಯವಾಗುತ್ತದೆ ಎಂದರಲ್ಲದೆ ಪತ್ರಿಕೋದ್ಯಮದ ಮಜಲುಗಳು ಇಂದು ವಿಸ್ತಾರವಾಗುತ್ತಾ ಸಾಗುತ್ತಿವೆ. ಅಂತಹ ವ್ಯವಸ್ಥೆಗಳಿಗೆ ನಮ್ಮನ್ನು ನಾವು ಹೊಂದಿಸಿಕೊಂಡು ಮುಂದುವರಿಯಬೇಕು. ಹಾಗೆ ಮುಂದುವರೆಯುವಲ್ಲಿ ಕಾಲೇಜಿನಲ್ಲಿ ದೊರಕುವ ಅವಕಾಶಗಳನ್ನು ಸದುಪಯೋಗಮಾಡಿಕೊಳ್ಳಬೇಕು ಎಂದು ನುಡಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಪ್ರಸ್ತಾವನೆಗೈದು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬರವಣಿಗೆ, ಮಾತುಗಾರಿಕೆ, ಉಚ್ಚಾರ ಸ್ಪಷ್ಟತೆಯೇ ಮೊದಲಾದ ಅನೇಕ ಕಲೆಗಳು ರೂಢಿಯಾಗಬೇಕು. ವಿಶೇಷವಾಗಿ ನಾಳಿನ ದಿನಗಳಲ್ಲಿ ಟಿವಿ ಮಾಧ್ಯಮದಂತಹ ಕ್ಷೇತ್ರಕ್ಕೆ ಅಡಿಯಿಡಬೇಕಾದರೆ ಕ್ಯಾಮರಾ ಎದುರಿಸುವ ಅಭ್ಯಾಸವೂ ರೂಢಿಯಾಗಬೇಕು. ಆದರೆ ಅನೇಕ ಮಕ್ಕಳಲ್ಲಿ ಸಭಾಕಂಪನದ ಸಮಸ್ಯೆ ಇದೆ. ಇದನ್ನು ಹೋಗಲಾಡಿಸುವ ನೆಲೆಯಲ್ಲಿ ವೇದಿಕೆಗೆ ಅವರನ್ನು ಕರೆತರಬೇಕಿದೆ. ಈ ಕಾರಣದಿಂದಲೇ ಅನುಪಮ ಪ್ರತಿಭಾ ವೇದಿಕೆ ಸಜ್ಜಾಗಿ ನಿಂತಿದೆ. ಪತ್ರಿಕೋದ್ಯಮದ ಹೊರತಾದ ವಿದ್ಯಾರ್ಥಿಗಳೂ ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಅಂಬಿಕಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ‘ಆ್ಯಮ್ ಜರ್ನಲಿಸಂ’ ಎಂಬ ಹೆಸರಿನಿಂದ ಪ್ರಚಲಿತಕ್ಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಅದು ‘ಓಂ ಜರ್ನಲಿಸಂ’ ಎಂಬಷ್ಟರ ಮಟ್ಟಿಗೆ ಪಾವಿತ್ರ್ಯತೆಯನ್ನು ಹಾಗೂ ಪರಿಶುದ್ಧತೆಯನ್ನು ಸಾಧಿಸುವಂತಾಗಬೇಕು. ಸಮಾಜಕ್ಕೆ ಪೂರಕವಾದ ಪತ್ರಿಕೋದ್ಯಮವನ್ನು ರೂಪಿಸುವುದಕ್ಕೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸಹಕಾರಿಯಾಗಬೇಕು. ಸಕಾರಾತ್ಮಕ ಚಿಂತನೆಗಳು ಪತ್ರಿಕೋದ್ಯಮದ ಮೂಲಕ ಸಮಾಜಕ್ಕೆ ತಲಪಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಉಪಸ್ಥಿತರಿದ್ದರು. ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಪ್ರಾರ್ಥಿಸಿ, ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಮೇಘ ಡಿ ಸ್ವಾಗತಿಸಿದರು. ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ ಜಯಶ್ರೀ ವಂದಿಸಿ, ಅನುಪಮ ಪ್ರತಿಭಾ ವೇದಿಕೆಯ ಕಾರ್ಯದರ್ಶಿ ವೈಷ್ಣವೀ ಜೆ ರಾವ್ ಕಾರ್ಯಕ್ರಮ ನಿರ್ವಹಿಸಿದರು.