ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಯಾಕೆಂದರೆ ಇಂದಿನ ಜೀವನ ಪದ್ಧತಿಗೆ ವಿಜ್ಞಾನ ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಸಾಧನೆ ಅನ್ನುವಂತದ್ದು ನಿರಂತರವಾಗಿ ಜಾರಿಯಲ್ಲಿರಬೇಕು ಎಂದು ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದರು.
ಅವರು ಪುತ್ತೂರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಿಕ್ಷಣ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮೂಲ ಕಾರಣ. ಹಾಗಾಗಿ ಶಿಕ್ಷಣ ಸಂಸ್ಥೆ ಮಕ್ಕಳಿಗೋಸ್ಕರ ಅಭಿವೃದ್ಧಿದಾಯಕ ಕಾರ್ಯಗಳನ್ನು ಮಾಡಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಬೇಕು ಎಂದರು.
ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಮತ್ತು ಅಮೃತಕಲಾ, ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ.ಡಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ದಿವ್ಯ ಸ್ವಾಗತಿಸಿದರು. ಶಿಕ್ಷಕಿ ದಿವ್ಯ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಸುಜಯ ಕಾರ್ಯಕ್ರಮ ನಿರೂಪಿಸಿದರು.
Taluk level science exhibition program was held at Puttur Ambika Vidyalaya