ಗ್ರಾಮೀಣ ಭಾಗದ ಜನರಿಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕು. ಅದರಲ್ಲೂ ಆರೋಗ್ಯದ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಅಂತಹದ್ದೊಂದು ಸೇವೆಯ ಕನಸನ್ನು ಅಟೋ ಚಾಲಕರೊಬ್ಬರು ಹೊತ್ತಿದ್ದಾರೆ. ಈಗ ಯುವಕರ ತಂಡ ಮನೆ ಮನೆ ಭೇಟಿ ಮಾಡಿ ಅಂಬುಲೆನ್ಸ್ ಯೋಜನೆಯನ್ನು ತಲಪಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರ ಸಹಕಾರವನ್ನೂ ಕೋರುತ್ತಿದ್ದಾರೆ. ಜನವರಿ 14 ರಂದು ಲೋಕಾರ್ಪಣೆ ಮಾಡುವ ಉದ್ದೇಶವನ್ನೂ ಹೊಂದಿದ್ದಾರೆ.
ಗ್ರಾಮೀಣ ಭಾಗದಲ್ಲಿ ಯಾವತ್ತೂ ಆರೋಗ್ಯದ ಸಮಸ್ಯೆಯಾದರೆ ಸಂಕಷ್ಟವೇ. ಒಂದು ಕಡೆ ರಸ್ತೆ ಸಮಸ್ಯೆ, ಇನ್ನೊಂದು ಕಡೆ ಸೇತುವೆ, ಕಾಲುಸಂಕಗಳ ಸಮಸ್ಯೆ. ಇದೆಲ್ಲದರ ನಡುವೆ ಸೂಕ್ತ ರೀತಿಯಲ್ಲಿ ರೋಗಿಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸುವ ಸವಾಲು. ಈ ಕಾರಣದಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಯಾವತ್ತೂ ಸಂಕಷ್ಟ. ಇಂತಹದ್ದರ ನಡುವೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಅಟೋ ಚಾಲಕ ಚಂದ್ರಶೇಖರ ಕಡೋಡಿ ಹಾಗೂ ಅವರ ಜೊತೆಗಿನ ಸಮಾನ ಮನಸ್ಕ ಯುವಕರ ತಂಡ ಇದೀಗ ಅಂಬುಲೆನ್ಸ್ ಸೇವೆ ನೀಡುವ ಕನಸು ಹೊತ್ತಿದ್ದಾರೆ. ಅವರು ಅಂಬುಲೆನ್ಸ್ ಸೇವೆ ನೀಡಬೇಕು ಎಂದು ಸಂಕಲ್ಪ ಮಾಡಲೂ ಕಾರಣ ಇದೆ. ಸ್ವತ: ಗ್ರಾಮೀಣ ಭಾಗದಲ್ಲಿರುವ ಚಂದ್ರಶೇಖರ್ ಅವರು ಅನುಭವಿಸಿದ ಸಮಸ್ಯೆಯೇ ಅಂಬುಲೆನ್ಸ್ ಸೇವೆ ಸಮಾಜಕ್ಕೆ ನೀಡಬೇಕು ಎಂಬ ಕನಸು ಕಾಣಲು ಸಾಧ್ಯವಾಯಿತು. ಅದಕ್ಕೆ ಯುವಕರ ಸಹಕಾರ ಲಭ್ಯವಾಗಲೂ ಕಾರಣವಾಯಿತು.
ಚಂದ್ರಶೇಖರ್ ಅವರ ತಂದೆ ಕೆಲಸಕ್ಕೆ ಹೋಗಿದ್ದ ಕಡೆಯಲ್ಲಿ ಆರೋಗ್ಯ ಸಮಸ್ಯೆಗೆ ಒಳಗಾದಾಗ ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಪರದಾಟ ನಡೆಸಿದರು. ಅಂದೇ ಸಮಾಜಕ್ಕೆ ಅಂಬುಲೆನ್ಸ್ ಸೇವೆ ನೀಡಬೇಕು ಎಂದು ನಿರ್ಧರಿಸಿದ್ದರು. ಈಚೆಗೆ ಕೊರೋನಾ ಸಮಯದಲ್ಲೂ ಅಂತಹದ್ದೇ ಅನುಭವಗಳು ಸಾಕಷ್ಟ ಆಗಿದ್ದವು. ಈ ಸಂದರ್ಭ ತನ್ನ ಅಟೋವನ್ನೇ ಕೊರೋನಾ ಪೀಡಿತರ ಸೇವೆಗಾಗಿ ಉಪಯೋಗಿದಿದ್ದರು. ಆ ಬಳಿಕ ಅಂಬುಲೆನ್ಸ್ ಸೇವೆಗಾಗಿ ಯೋಚನೆ ಮಾಡಿ ಸುಮಾರು 7 ಜನರ ತಂಡ ಮಾಡಿ ಟ್ರಸ್ಟ್ ರಚನೆ ಮಾಡಿ ಊರ ಹಾಗೂ ಪರವೂರ ದಾನಿಗಳಿಂದ ಹಣ ಸಂಗ್ರಹ ಮಾಡಿ ಅಂಬುಲೆನ್ಸ್ ಖರೀದಿಗೆ ಮುಂದಾಗಿದ್ದಾರೆ. ಜ.14 ರಂದು ಅಂಬುಲೆನ್ಸ್ ಖರೀದಿ ಮಾಡಲು ಈಗಾಗಲೇ ನಿರ್ಧರಿಸಿದ್ದಾರೆ. ಈ ನೆಲೆಯಲ್ಲಿ ಮನೆ ಮನೆಗೆ ಭೇಟಿ ನೀಡಿ ಸಂಗ್ರಹ ಮಾಡುತ್ತಿದ್ದಾರೆ. 7 ಗ್ರಾಮಗಳನ್ನೊಳಗೊಂಡು ಈ ಯೋಜನೆ ಹಮ್ಮಿಕೊಂಡಿದ್ದಾರೆ.
ಹೀಗಾಗಿ ಅಂಬುಲೆನ್ಸ್ ಸೇವೆಗೆ ಈಗ ಎಲ್ಲರ ಸಹಾಯ ಅಗತ್ಯವಿದೆ. ಗ್ರಾಮೀಣ ಭಾಗದಲ್ಲೂ ಉತ್ತಮ ಆರೋಗ್ಯ ಸೇವೆಗೆ ಇಂತಹ ಅಂಬುಲೆನ್ಸ್ ಸೇವೆಗಳೂ ಕಾರಣವಾಗುತ್ತದೆ. ಚಂದ್ರಶೇಖರ್ ಅವರ ಸಂಪರ್ಕ ಹೀಗಿದೆ….9480199711