ಸಾವಯವ ಕೃಷಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ರೈತರ ಆದಾಯ ಹೆಚ್ಚಳಕ್ಕೆ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಹಕಾರ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.…..ಮುಂದೆ ಓದಿ….
ನಾಸಿಕ್ ನ ಮಾಲೆಗಾಂವ್ ನಲ್ಲಿ ಸಹಕಾರ ಸಮಾವೇಶಕ್ಕೆ ಚಾಲನೆ ನೀಡಿದ ಅವರು, ಸಹಕಾರದಿಂದ ಸಮೃದ್ಧಿ ಎಂಬುದು ಸರ್ಕಾರದ ನೀತಿಯಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸ್ವಾತಂತ್ರ್ಯದ 75 ವರ್ಷಗಳ ನಂತರ ಪ್ರಥಮ ಬಾರಿಗೆ ಸಹಕಾರ ಸಚಿವಾಲಯ ಸ್ಥಾಪಿಸಿದ್ದು, ಈ ಮೂಲಕ ಆತ್ಮ ನಿರ್ಭರತೆ ಪರಿಕಲ್ಪನೆಗೆ ಉತ್ತೇಜನ ನೀಡಿದೆ. ಸಹಕಾರ ಸಚಿವಾಲಯದ ಅಡಿ ಸಾವಯವ ಕೃಷಿ ಉತ್ಪನ್ನಗಳ ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ಬ್ರಾಡಿಂಗ್ ಗೆ ನೆರವು ನೀಡಲಾಗುತ್ತಿದೆ. ಇದಕ್ಕಾಗಿ ಭಾರತ ಸಾವಯವ ಸಹಕಾರ ನಿಗಮ ಎಂಬ ಬಹುರಾಷ್ಟ್ರೀಯ ಸಂಸ್ಥೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಮಣ್ಣಿನ ಪರೀಕ್ಷೆ ಯೋಜನೆಯಿಂದ ಫಲವತ್ತತೆ ಹೆಚ್ಚಳವಾಗಿದ್ದು, ರೈತರಿಗೆ ಅನುಕೂಲವಾಗಿದೆ. ಸಾವಯವ ಉತ್ಪನ್ನಗಳ ನಿಗದಿತ ದರಕ್ಕೆ ಮಾರಾಟ ಮಾಡಲು ಪ್ರಮಾಣಪತ್ರ ಅತ್ಯಗತ್ಯವಾಗಿದ್ದು, ಇದನ್ನು ರೈತರಿಗೆ ಒದಗಿಸಲು ಸಕಲ ಕ್ರಮ ಕೈಗೊಳ್ಳಲಾಗಿದೆ. ಜಾಗತಿಕ ಮಾರುಕಟ್ಟೆಗೆ ಪ್ರಮಾಣೀಕೃತ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ನೆರವು ನೀಡಲಾಗುತ್ತಿದೆ ಎಂದು ವಿವರಿಸಿದರು. ದೇಶೀಯ ಬೀಜ ಸಂರಕ್ಷಣೆ, ಹೆಚ್ಚು ಇಳುವರಿ ನೀಡುವ ಬೀಜ ಉತ್ಪಾದನೆ, ಮೀನುಗಾರಿಕೆ ಮತ್ತು ಸಾವಯವ ಕೃಷಿ ವಿಸ್ತರಣೆಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ರೈತರು ಪಂಚಗವ್ಯ ಮತ್ತು ದೇಶೀ ಹಸುಗಳ ಗೊಬ್ಬರ ಬಳಕೆಯಿಂದ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಇದರಿಂದ ಗೋವುಗಳ ರಕ್ಷಣೆಯೂ ಆಗಲಿದೆ ಎಂದರು.