ರಾಘವೇಶ್ವರ ಭಾರತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೈರಂಗಳದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಜ.14 ರಿಂದ ಆರಂಭಗೊಂಡ ಒಂದು ತಿಂಗಳ ಗೋಸೇವಾ ಮಾಸಾಚರಣೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ವೈಭವ ಹಾಗೂ ವಿಭಿನ್ನತೆಯ ಮೂಲಕ ನಡೆದು ಸೋಮವಾರ ದೀಪೋತ್ಸವದ ಮೂಲಕ ಸಂಪನ್ನಗೊಂಡಿತು.
ಗೋಸೇವಾ ಮಾಸಾಚರಣೆ ಉದ್ಘಾಟನೆಯನ್ನು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಉಪಸ್ಥಿತಿಯೊಂದಿಗೆ ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಉದ್ಘಾಟಿಸಿದರು.
ಗೋಸೇವಾ ಕಾರ್ಯಕ್ರಮದಲ್ಲಿ ಮುಡಿಪು ಭಾಗದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗೋಸೇವೆಯು ನಿತ್ಯ ನಿರಂತರವಾಗಿ ನಡೆಯಿತು. ಪ್ರತಿನಿತ್ಯ ಸಂಜೆ ವಿವಿಧ ಭಜನಾ ಮಂಡಳಿಗಳ ಆಶ್ರಯದಲ್ಲಿ ನಿರಂತರ ಭಜನಾ ಸಂಧ್ಯಾ ಭಜನೆಯು ನಡೆಯಿತು.
ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ಮಾತನಾಡಿ, ಕೈರಂಗಳ ಪುಣ್ಯಕೋಟಿನಗರದ ಗೋಶಾಲೆಯಲ್ಲಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ತಿಂಗಳ ಕಾಲ ನಡೆದ ಗೋಸೇವಾ ಮಾಸಾಚರಣೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಎಲ್ಲರ ಪರಿಶ್ರಮ, ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದರು.
ಕಣಂತೂರು ಅರಸು ತೋಡಕುಕ್ಕಿನ್ನಾರ್ ಕ್ಷೇತ್ರದ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ನಾರ್ಯಗುತ್ತು, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಹಿರಿಯರಾದ ಶಂಕರಭಟ್ ಕೊಣಾಜೆ, ಜಯರಾಮ ಶೆಟ್ಟಿ ಕಂಬಳಪದವು, ರವಿ ಮಂಜನಾಡಿ, ಕಿರಣ್ ದಾಸ್ ಹೂವಿನ ಕೊಪ್ಪಳ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು. ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಪಾದಲ್ಪಾಡಿ ವಂದಿಸಿದರು.