ಆ ಯುವಕ ಎಂಟೆಕ್ ಪದವೀಧರ. ಯುವತಿ ಎಂವಿಎ ಪದವೀಧರೆ. ಇಬ್ಬರದೂ ಪ್ರವಾಹದ ವಿರುದ್ಧದ ಆಯ್ಕೆ. ಯಶಸ್ಸು ಅವರ ಕೆಲಸ ಮೇಲಿದೆ. ಈಗಿನ ಅವರ ನಿಶ್ಚಯದ ಪ್ರಕಾರ ಅವರು ಗೆಲುವು ಕಂಡಿದ್ದಾರೆ. ಸಮಾಜವು ಅವರ ಗೆಲುವಿನ ದಾರಿಯನ್ನು ಸುಗಮಗೊಳಿಸಲಿ.
ಕೃಷಿ , ಗ್ರಾಮೀಣ ಬದುಕು ಎಂದಾಗಲೇ , “ಸಹವಾಸವೇ ಬೇಡ” ಎನ್ನುವವರ ಸಂಖ್ಯೆಯೇ ಹೆಚ್ಚಿರುವಾಗ ಇಲ್ಲಿ ಇವರಿಬ್ಬರೂ ಮಾಡಿಕೊಂಡಿರುವ ಆಯ್ಕೆ ಒಂದು ಹೆಮ್ಮೆ. ಗ್ರಾಮೀಣ ಭಾರತವು ಬೆಳಗಲು ಇಂತಹ ಇನ್ನಷ್ಟು ಆಯ್ಕೆಯ ದಾರಿಗಳು ಹೆಚ್ಚಾಗಬೇಕು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಯುವಕ ಸುಬ್ರಹ್ಮಣ್ಯ ಪ್ರಸಾದ. ಇವರು ಎಂಟೆಕ್ ಪದವೀಧರ. ವ್ಯಾಸಂಗದ ಬಳಿಕ ಸುಳ್ಯದಲ್ಲಿ ಕೆಲವು ಸಮಯ ಉಪನ್ಯಾಸಕನಾಗಿ ಕೆಲಸ ಮಾಡಿದರು. ನಂತರ ಕೃಷಿಗೆ ಇಳಿದ. ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಸುಬ್ರಹ್ಮಣ್ಯ ಪ್ರಸಾದ ಅವರ ತಂದೆ ತೀರಿಕೊಂಡರು. ಕಲಿಕೆಯನ್ನು ಅರ್ಧಕ್ಕೆ ಬಿಡಲಿಲ್ಲ, ಎಂಟೆಕ್‌ವರೆಗೂ ಓದಿದರು, ಉದ್ಯೋಗವೂ ಸಿಕ್ಕಿತು. ಆದರೆ ಉದ್ಯೋಗ ಹಾಗೂ ಕೃಷಿಯಲ್ಲಿ ಸುಬ್ರಹ್ಮಣ್ಯ ಪ್ರಸಾದ್ ಆಯ್ಕೆ ಮಾಡಿದ್ದು ಕೃಷಿ. ತಮ್ಮ ಕೃಷಿ ಭೂಮಿಯನ್ನು ಉಳಿಸಬೇಕು ಎಂದು ಕೃಷಿ ಕಾಯಕಕ್ಕೆ ಇಳಿದರು. ಕೃಷಿಯಲ್ಲಿ ಸಹಜವಾದ ಸವಾಲುಗಳು ಇದ್ದವು. ಇದೆಲ್ಲವನ್ನೂ ಎದುರಿಸಿದರು. ಈ ನಡುವೆ ತಾಯಿಯ ಜೊತೆಗೇ ಕೃಷಿ ಬದುಕು ಸಾಗಿಸಿದರು. ಬದುಕಿನ ಪ್ರಮುಖ ಘಟ್ಟಗಳಲ್ಲಿ ಒಂದಾಗಿರುವ ವೈವಾಹಿಕ ಬದುಕಿನ ಕಡೆಗೆ ನೋಟ ಹರಿಸಿದಾಗ ಇನ್ನೊಂದು ಸವಾಲನ್ನು ಎದುರಿಸಿದ್ದು ಸುಬ್ರಹ್ಮಣ್ಯ ಪ್ರಸಾದ. ಹುಡುಗ ಎಂಟೆಕ್ ಕಲಿತಿದ್ದಾರೆ ಎಂದಾಗ ಕಣ್ಣು ಹಾಯಿಸುವ ಯುವತಿಯ ಮನೆಯವರು , ಕೃಷಿ ಬದುಕು ಎಂದಾಗ,”ಬೇರೆ ಕಡೆಗೆ ಒಂದು ಪ್ರಪೋಸಲ್ ಬಂದಿದೆ, ಮತ್ತೆ ಹೇಳುತ್ತೇವೆ” ಎನ್ನುತ್ತಿದ್ದರು. ಒಬ್ಬ ಸಹೃದಯ ಮನಸಿನ ಯುವಕನಿಗೂ ಕೊನೆಗೆ ಕೃಷಿಯೇ ಸಂಕಷ್ಟ ಎನ್ನುವ ಹಾಗೆ ಅನಿಸುವ ಮೊದಲೇ, ಮತ್ತೊಂದು ಇಂತಹದ್ದೇ ಮನಸಿನ ಕುಟುಂಬ ಜೊತೆಯಾಯಿತು.
ಮೂಲತ: ಕೃಷಿ ಕುಟುಂಬದಿಂದ ಬಂದಿರುವ ವಕೀಲರಾಗಿರುವ ಸತ್ಯನಾರಾಯಣ ಭಟ್ ಹಾಗೂ ಸಂತ ಆಗ್ನೆಸ್ ಕಾಲೇಜಿನಲ್ಲಿ ಗಣಿತಶಾಸ್ತ್ರ ಉಪನ್ಯಾಸಕಿಯಾಗಿರುವ ವಿದ್ಯಾಸರಸ್ವತಿ ಅವರ ಪುತ್ರಿ ಅಕ್ಷತಾ ಅವರು ಆಳ್ವಾಸ್ ಕಾಲೇಜಿನಲ್ಲಿ ಎಂವಿಎ(ಮಾಸ್ಟರ್ ಆಫ್ ವಿಷುವಲ್ ಆರ್ಟ್) ಓದಿದವರು. ಅತ್ಯಂತ ಚೆನ್ನಾಗಿ ಚಿತ್ರ ಬಿಡಿಸುತ್ತಾರೆ. ಕಲಾವಿದೆ. ಎಂವಿಎ ಓದಿರುವ ಕಾರಣದಿಂದ ಉತ್ತಮ ಉದ್ಯೋಗಾವಕಾಶಗಳೂ ಇದ್ದವು. ಈ ಕುಟುಂಬವು ಸದ್ಯ ಮಂಗಳೂರಿನಲ್ಲಿ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಹಜವಾಗಿಯೇ ಗ್ರಾಮೀಣ ಬದುಕು, ಕೃಷಿಯ ಕಡೆಗೆ ನಗರದಿಂದ ಬರುವುದು ಕಡಿಮೆಯೇ. ಆದರೆ ಈ ಕುಟುಂಬ ಅದಕ್ಕಿಂತ ಭಿನ್ನವಾಗಿ ಯೋಚಿಸಿತು. ಗ್ರಾಮೀಣ ಬದುಕಿನ ಬಗ್ಗೆ ಆಸಕ್ತಿ ಹೊಂದಿರುವ ಮಗಳ ಭವಿಷ್ಯ ಹಾಗೂ ಪ್ರಶಾಂತ ವಾತಾವರಣದ ಖುಷಿಯನ್ನು ಯೋಚಿಸಿದರು. ಹೀಗಾಗಿ ಎಂಟೆಕ್ ಮಾಡಿರುವ, ಕೃಷಿ ಮಾಡುತ್ತಿರುವ ಯುವಕ ಸುಬ್ರಹ್ಮಣ್ಯ ಪ್ರಸಾದ ಮೆಚ್ಚುಗೆಯಾದರು. ಅಕ್ಷತಾ ಅವರೂ ಕೂಡಾ ಕೃಷಿ, ಗ್ರಾಮೀಣ ಬದುಕಿನ ಬಗ್ಗೆ ಪ್ರೀತಿ ಇದ್ದವರಾಗಿದ್ದರು. ಹೀಗಾಗಿ ಮಾತುಕತೆಗಳು ನಡೆದು ಮದುವೆಯಾದರು.
ಸಹಜವಾಗಿಯೇ ಇಲ್ಲಿ ಅಕ್ಷತಾ ಅವರಿಗೂ ಅವರ ಮನೆಯವರಿಗೂ ಒಮ್ಮತ ಇದ್ದರೂ ಬಂಧುಗಳು, ಇಷ್ಟರು ಹಳ್ಳಿ ಬದುಕು, ಗ್ರಾಮೀಣ ಸವಾಲುಗಳ ಬಗ್ಗೆ ಮಾತನಾಡಿದರು. ಈ ಕಾರಣದಿಂದ ಕೊಂಚ ಸಮಯ ಅನಿಶ್ಚಿತವಾದ ನಿರ್ಧಾರಗಳು ಇದ್ದವು. ಆದರೆ ಈ ಎಲ್ಲಾ ಸವಾಲುಗಳನ್ನೂ ಬದಿಗೆ ಸರಿಸಿ ಮನಸಿಗೆ ಹಿತವಾಗುವ ನಿರ್ಧಾರಕ್ಕೆ ಬಂದಿದ್ದರು. ಈಗ ಅಕ್ಷತಾ ಅವರೂ ಖುಷಿಯಾಗಿದ್ದಾರೆ, ಸುಬ್ರಹ್ಮಣ್ಯ ಪ್ರಸಾದ್ ಅವರೂ ಖುಷಿಯಾಗಿದ್ದಾರೆ.
ಪ್ರವಾಹದ ವಿರುದ್ಧದ ಆಯ್ಕೆ ಇಬ್ಬರದೂ. ಎಲ್ಲರೂ ವಿದ್ಯಾವಂತರಾಗಿ ನಗರಕ್ಕೆ ತೆರಳಿದರೆ, ಸುಬ್ರಹ್ಮಣ್ಯ ಪ್ರಸಾದ ಕಲಿತು ಕೃಷಿಗೆ ಬಂದವರು. ಹಳ್ಳಿಯಿಂದ ನಗರದ ವಾತಾವರಣಕ್ಕೆ ತೆರಳುವ ಹುಡುಗಿಯರು ಹೆಚ್ಚಾಗಿರುವಾಗ ನಗರದ ವಾತಾವರಣದಿಂದ ಹಳ್ಳಿಗೆ ಬಂದ ಯುವತಿ ಅಕ್ಷತಾ. ಇಬ್ಬರ ಆಯ್ಕೆಯೂ ಪ್ರವಾಹದ ವಿರುದ್ಧ. ಸುಬ್ರಹ್ಮಣ್ಯ ಪ್ರಸಾದ ಈ ಸವಾಲನ್ನು ಮೊದಲೇ ತೆಗೆದುಕೊಂಡಿದ್ದಾರೆ. ಏಕೆಂದರೆ, ಅನೇಕರು ಮದುವೆ ಆಗುವ ತನಕ ನಗರದಲ್ಲಿ ಉದ್ಯೋಗದಲ್ಲಿದ್ದು ನಂತರ ಕೃಷಿಗೆ ಮರಳುವವರು ಇದ್ದಾರೆ. ಈಚೆಗೆ ಕೊರೋನಾ ಕಾಲದಲ್ಲಿ ಕೃಷಿಯೇ ಉದ್ಯೋಗ ಎಂದು ಅರಿತು ಬಂದವರಿದ್ದಾರೆ. ಅದುವರೆಗೂ ಕೃಷಿ ಉದ್ಯೋಗವೇ ಅಲ್ಲ ಎಂದು ತಿಳಿದವರು ಅನೇಕರಿದ್ದರು. ಕೊರೋನಾ ನಂತರ ಕೃಷಿಯೂ ಹೆಮ್ಮೆಯ ಉದ್ಯೋಗ ಅನಿಸಿದೆ. ಈ ಬದಲಾವಣೆಯ ಕಾರಣದಿಂದ ಈಗ ಕೃಷಿಯೂ ಬೆಳವಣಿಗೆ ಕಾಣುತ್ತಿದೆ, ಗೌರವ ಹೆಚ್ಚಾಗಿದೆ. ಈ ಎಲ್ಲಾ ಸವಾಲುಗಳನ್ನು ಸುಬ್ರಹ್ಮಣ್ಯ ಪ್ರಸಾದ ಹಿಂದೆಯೇ ದಾಟಿದ್ದರು. ಆಗ ಸುಬ್ರಹ್ಮಣ್ಯ ಪ್ರಸಾದರಿಗೆ ಅದು ಅನಿವಾರ್ಯವೂ ಆಗಿದ್ದಿರಬಹುದು. ಆದರೆ ಎಂಟೆಕ್ ಪದವಿಯಾಗಿ ಹಳ್ಳಿಯಲ್ಲಿ ನಿಲ್ಲುವ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುವುದು ಸುಲಭ ಅಲ್ಲ.