ಕನ್ನಡ ಚಿತ್ರರಂಗದಲ್ಲಿ ಯಶಸ್ವಿ 50 ವರ್ಷಗಳನ್ನು ಪೂರೈಸಿ ಈಗಲೂ ಚಲಾವಣೆಯಲ್ಲಿರುವ ಹಾಗೂ ಬಹು ಬೇಡಿಕೆಯ ಕನ್ನಡಿಗರ ನೆಚ್ಚಿನ ನಟ ಅನಂತ್ ನಾಗ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷ ಕಳೆದಿದೆ. ಬಣ್ಣದ ಲೋಕಕ್ಕೆ ಅವರು ನೀಡಿದ ಸೇವೆ ದೊಡ್ಡದು. ಅವರು ತಮ್ಮ ಕಲಾ ಸೇವೆಯನ್ನು ನಿಲ್ಲಿಸಿಲ್ಲ. ಈಗಲೂ ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಅವರು ನೀಡಿದ ಸೇವೆಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ.
‘ಸಂಕಲ್ಪ’ (1973) ಚಿತ್ರದ ಮೂಲಕ ಅನಂತ್ ನಾಗ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ರಿಲೀಸ್ ಆಗಿ 50 ವರ್ಷಗಳು ಕಳೆದಿವೆ. ಐದು ದಶಕಗಳಲ್ಲಿ ಅವರು ನಟಿಸಿದ ಸಿನಿಮಾಗಳಿಗೆ ಲೆಕ್ಕವಿಲ್ಲ. ಫಿಲ್ಮ್ಫೇರ್, ರಾಜ್ಯ ಪ್ರಶಸ್ತಿ ಸೇರಿ ಅನೇಕ ಅವಾರ್ಡ್ಗಳು ಅವರಿಗೆ ಸಿಕ್ಕಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಅವರು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ‘ನನಗೆ ಅವಾರ್ಡ್ಗಳಿಗಿಂತ ಅಭಿಮಾನ ಮುಖ್ಯ’ ಎಂದು ಈ ಮೊದಲು ಅವರು ಹೇಳಿದ್ದರು. ಅನಂತ್ ನಾಗ್ ಜೊತೆ ಇರುವ ಫೋಟೋ ಹಂಚಿಕೊಂಡಿರುವ ಶಿವರಾಜ್ಕುಮಾರ್ ಅವರು, ‘ಚಿತ್ರರಂಗದಲ್ಲಿ 50 ವರ್ಷ ಯಶಸ್ವಿಯಾಗಿ ಪೂರೈಸಿದ ಅನಂತ್ ನಾಗ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆ. ನಿಮ್ಮ ಪ್ರತಿಭೆ ವರ್ಚಸ್ಸು ತಲೆಮಾರುಗಳವರೆಗೆ ಪ್ರೇರಣೆ’ ಎಂದು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ ‘ಸಹಿಪ್ರಾ ಶಾಲೆ ಕಾಸರಗೋಡು’ ಚಿತ್ರದಲ್ಲಿ ಅನಂತ್ ನಾಗ್ ಅವರು ನಟಿಸಿದ್ದರು. ಅವರು ಮಾಡಿದ ಪಾತ್ರ ಗಮನ ಸೆಳೆದಿತ್ತು. ಹೀಗಾಗಿ ರಿಷಬ್ ಹಾಗೂ ಅನಂತ್ ನಾಗ್ ಮಧ್ಯೆ ಒಳ್ಳೆಯ ಒಡನಾಟ ಇದೆ. ‘ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ’ ಎಂದು ಅವರು ಬರೆದುಕೊಂಡಿದ್ದಾರೆ.
ಕಳೆದ ವರ್ಷ ಅನಂತ್ ನಾಗ್ ನಟನೆಯ ‘ತಿಮ್ಮಯ್ಯ & ತಿಮ್ಮಯ್ಯ’, ‘ಗಾಳಿಪಟ 2’, ‘ವಿಜಯಾನಂದ’, ‘ಮೇಡ್ ಇನ್ ಬೆಂಗಳೂರು’ ಸಿನಿಮಾಗಳು ತೆರೆಗೆ ಬಂದವು. ಈಗ ಅವರು ಕೆಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ರಾಜಕೀಯಕ್ಕೆ ಕಾಲಿಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಅದು ನಿಜವಾಗಿಲ್ಲ.
Source : Digital Media