ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ.ಇದನ್ನು ತಿಳಿದಿದ್ದರೂ ಕುಡಿಯುವವರು ಅಪಾರ. ಹೆಂಡಕುಡುಕನ ಸಹವಾಸ ಹೆಂಡತಿ ಮಕ್ಕಳ ಉಪವಾಸ. ನಿಜ! ಕೆಲವೊಮ್ಮೆ ಅನಿಸುವುದು ಕೊರೋನಕ್ಕಿಂತಲೂ ಭಯಂಕರ ಈ ವ್ಯಸನ ಎಂದು.ಆದರೂ ಇದು ಕೆಲವರಿಗೆ ಹವ್ಯಾಸ,ಕೆಲವರಿಗೆ ಪ್ರತಿಷ್ಟೆ,ಹಲವರಿಗೆ ಅಭ್ಯಾಸ.ಇಂದಿನ ಯುಗದಲ್ಲಿ ಇದು ಅನೇಕರಿಗೆ ಫ್ಯಾಷನ್ ಆಗಿಬಿಟ್ಟಿದೆ.ಅತಿಯಾದ ಅಭ್ಯಾಸ ಎಷ್ಟೋ ಕನಸುಗಳನ್ನು ನುಚ್ಚು ನೂರಾಗಿಸಿದೆ. ಅದೆಷ್ಟೋ ಜನರ ಬದುಕನ್ನೇ ಕತ್ತಲಾಗಿಸಿದೆ.
ನಮ್ಮ ದೇಹವನ್ನು ಬೆಂಕಿ ಸುಟ್ಟರೆ ಮದ್ಯಪಾನ ಮನಸ್ಸು ಹಾಗೂ ಆತ್ಮವನ್ನು ಸುಡುತ್ತದೆ ಎಂಬ ಗಾಂಧೀಜಿಯವರ ಮಾತು ನೆನಪಾಗುತ್ತದೆ.ಇದು ತನ್ನನು ಅನಾರೋಗ್ಯ ಕ್ಕೆ ಈಡು ಮಾಡಿ ಮನದ ಸ್ವಾಸ್ಥ್ಯ ವನ್ನು ಹಾಳುಗೆಡವುದಲ್ಲದೆ ತನ್ನನ್ನೇ ನಂಬಿಕೊಂಡಿರುವವರ ಬಾಳನ್ನು ಹಾಳುಗೆಡವುದು.
“ವಿಸ್ಕಿ ಕುಡಿದಾಗ ನಾನೊಬ್ಬ ದಿಲ್ದಾರ್ ರಾಜ
ಹೇಗೆ ವಿವರಿಸಲಿ ಇದರ ಮಜ
ಮಿತಿಮೀರಿದ ರೆ ಅನಾರೋಗ್ಯ ನಿಜ
ಮಲಗೆದ್ದ ಮೇಲೆ ಹ್ಯಾಂಗ್ ಓವರ್ ಸಹಜ”
(ಅಂತರ್ಜಾಲದಲ್ಲಿ ಸಿಕ್ಕ ಸಾಲುಗಳು)
ನಮ್ಮ ಮನಸ್ಸನ್ನು ,ಆತ್ಮವನ್ನು ಕಲಕುವ ವಿಚಾರಗಳನ್ನೇ ನಮ್ಮ ದಾಸರನ್ನಾಗಿಸಬೇಕೇ ಹೊರತು ನಾವು ಅದಕ್ಕೆ ದಾಸರಾಗಿಬಿಡಬಾರದು. ಹವ್ಯಾಸ ಗಳು ಮನಸ್ಸಿಗೆ ಆನಂದವನ್ನುಂಟು ಮಾಡುತ್ತದೆ.ನಿಜ! ಆ ಹವ್ಯಾಸಗಳು ಕೆಲವೊಮ್ಮೆ ಅಭ್ಯಾಸಗಳಾಗಿ ಬಿಡುತ್ತವೆ. ಇದರಿಂದ ಒಳಿತಾದರೆ ಒಳ್ಳೆಯದೇ ಆದರೆ ಚಟವಾಗಿ ಬಿಟ್ಟರೆ…? ನಮ್ಮನ್ನು ನಾವು ಕಳೆದುಕೊಳ್ಳುವುದು ಖಚಿತ.
ಇಂದು ಈ ವ್ಯಸನದಲ್ಲಿ ಗಂಡು ಮಕ್ಕಳು ಮಾತ್ರವಲ್ಲ.ಹೆಂಗಳೆಯರು ಈ ವ್ಯಸನಕ್ಕೆ ದಾಸರಾಗಿರುವುದು ನಿಜಕ್ಕೂ ಖೇದಕರ ಸಂಗತಿ. ಈ ದುಶ್ಚಟದ ಕಾರಣದಿಂದಾಗಿ ಎಷ್ಟೋ ಸಂಸಾರಗಳು ಬೀದಿಗೆ ಬಿದ್ದಿವೆ.ಎಷ್ಟೋ ಮಕ್ಕಳ ಕನಸುಗಳೇ ಕರಕಲಾಗಿವೆ.ಅದೆಷ್ಟೋ ಜೀವಗಳು ಪ್ರತಿನಿತ್ಯ ಕಣ್ಣೀರಿಡುತ್ತಿವೆ. ಬಹುಷಃ ಈ ಪರಿಸ್ಥಿತಿ ಬದಲಾಗಬೇಕೆಂದರೆ ಮದ್ಯ ಮಾರಾಟವೇ ನಿಷೇಧಿಸಬೇಕು.ಅದರ ಹೊರತು ಬೇರೆ ಪರಿಹಾರವಿಲ್ಲ.ಆದರೆ ಸರ್ಕಾರ ಆ ಯೋಚನೆಯನ್ನು ಎಂದೂ ಮಾಡಲಾರದು.ಲಾಭದಲ್ಲಿ ನಡೆಯುವವನು ನಷ್ಟವನ್ನು ಎಂದೂ ತನ್ನ ಹೆಗಲೇರಿಸಿಕೊಳ್ಳಲಾರನು.
ನಶೆಯೇರಿಸಿಕೊಂಡವನಿಗೇನು ಗೊತ್ತು..? ಒಂದು ಕುಟುಂಬ ಅವನಿಗಾಗಿಯೇ ಹಪಾಹಪಿಸುತ್ತಿದೆ ಎಂದು.ಅಪ್ಪಾ ಇಂದಾದರೂ ಕುಡಿಯದೇ ಬರಲಿ ಎನ್ನುವ ಮಕ್ಕಳ ಬಯಕೆ, ಎಲ್ಲೂ ಬೀಳದೆ ಮನೆಗೇ ಬರಲಿ ಎನ್ನುವ ಹೆಂಡತಿಯ ಅಳಲು, ಯಾರೊಂದಿಗೂ ಜಗಳವಾಗದೇ ಇರಲಿ ಎನ್ನುವ ತಾಯಿಯ ಪ್ರಾರ್ಥನೆ. ಒಬ್ಬ ಹೆಂಡದ ದಾಸನಾಗಿರುವವನು. ಹೊರಗೆ ಹೊರಟು ಹೋದ ಮೇಲೆ ,ಅವನು ಮರಳಿ ಬರುವಬರೆಗೂ ಪ್ರತಿಕ್ಷಣ ಅವನ ಕುಟುಂಬ ಅವನಿಗಾಗಿ ಕಾದಿರುತ್ತದೆ. ಕೆಲವರು ಖುಷಿಯಾದರೂ ಕುಡಿಯುತ್ತಾರೆ.ದುಃಖವಾದರೂ ಕುಡಿಯುತ್ತಾರೆ.ಗೆದ್ದರೂ ಕುಡಿತ ,ಸೋತರೂ ಕುಡಿತ ಬಿದ್ದರೂ ಕುಡಿತ ಎದ್ದರೂ ಕುಡಿತ.ಕಾರಣಗಳಿಗಾಗಿ ಯಾರೂ ಕುಡಿಯುವುದಿಲ್ಲ.ಕುಡಿಯಲು ಕಾರಣ ಹುಡುಕುತ್ತಾರಷ್ಟೇ!
ಖ್ಯಾತ ಹಾಸ್ಯ ಲೇಖಕರಾದ ಬೀಚಿಯವರು ಒಂದೆಡೆ ಹೇಳಿದ್ದಾರೆ ಒಬ್ಬರು ಹೆಂಡತಿ ಮನೆಯಲ್ಲಿ ಇಲ್ಲವೆಂದು ಕುಡಿಯುತ್ತಾರೆ.ಮತ್ತೊಬ್ಬರು ಹೆಂಡತಿ ಮನೆಯಲ್ಲಿ ಇದ್ದಾಳೆಂದು ಕುಡಿಯುತ್ತಾರೆ.ಎಲ್ಲರೂ ಕುಡಿಯುತ್ತಾರೆ.ಎಂಬುದೇ ಇದರರ್ಥ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಮದ್ಯದ ಬಾಟಲಿಯ ಮೇಲಷ್ಟೇ ಅಲ್ಲ. ಪ್ರತಿಯೊಬ್ಬ ಮದ್ಯವ್ಯಸನಿಯ ಮನಸ್ಸಿನಲ್ಲಿಯೂ ಬರೆಯಲಾಗಿದೆ. ಆದರೆ ಅವರೆಂದೂ ಅದರಿಂದ ಹೊರಬರಲು ಯತ್ನಿಸುವುದೇ ಇಲ್ಲ.
ಕುಡಿತದ ಒಂದು ದಿನದ ಊಟಕ್ಕಾಗಬಹುದು. ಕುಡಿದಾಗ ಸ್ವರ್ಗಕ್ಕೆ ಮೂರೇ ಗೇಣು ಎನ್ನುವವನಿಗೆ ಅತಿಯಾದರೆ ನಾನು ಸ್ವರ್ಗಕ್ಕೆ ಹೋಗುವೆ ಎನ್ನುವ ಪರಿಜ್ಞಾನವಿಲ್ಲ. ಕುಡಿಯುವ ಚಟವನ್ನು ಹತ್ತಿಸಿಕೊಂಡವನಿಗೆ ಸಮಾಜ ಎಂದೂ ಗೌರವವನ್ನು ನೀಡದು. ಆತನ ಮನೆಯವರನ್ನು ಸಮಾಜ ತುಚ್ಚವಾಗಿಯೇ ಕಾಣುವುದು. ಯಾರೋ ಮಾಡಿದ ತಪ್ಪಿಗೆ ಈ ಸಮಾಜ ಇನ್ಯಾರಿಗೋ ಶಿಕ್ಷೆ ನೀಡುತ್ತದೆ. ಕುಡಿವಾಗ ಜೊತೆ ಸೇರಲು ಅನೇಕರು ಬರಬಹುದು.ಆದರೆ ಸತ್ತಾಗ ಯಾರು ಬರಲಾರರು.
ಕುಡಿತಕ್ಕೆ ಬಲಿಯಾದವನು ತನ್ನದೇ ಲೋಕದಲ್ಲಿ ರಾಜನಂತೆ ಮೆರೆಯುತ್ತಾನೆ. ಆದರೆ ಅವನ ಹೆಂಡತಿಮಕ್ಕಳು ಅವನೆದುರಲ್ಲೂ , ಸಮಾಜದೆದುರಲ್ಲೂ ದಾಸರಂತೆ ಉಳಿದುಬಿಡುತ್ತಾರೆ.ಅವರು ತಲೆಯೆತ್ತಿ ನಡೆಯಲೆತ್ನಿದರೂ ಸುತ್ತಲಿನ ಸಮಾಜ ಅವರನ್ನು ತುಳಿದು ಸಂಭ್ರಮಿಸುತ್ತದೆ.
ಹತ್ತಿಸಿಕೊಂಡ ಚಟವನ್ನು ಬಿಟ್ಟು ಮುನ್ನಡೆಯುವುದು.ಅಷ್ಟು ಸುಲಭವಲ್ಲ ಆದರೂ ಪ್ರಯತ್ನಿಸಬೇಕು.ನಾಲ್ಕು ಜನರ ಎದುರಲ್ಲಿ ಒಳ್ಳೆಯವನೆನೆಸಿಕೊಳ್ಳದಿದ್ದರೂ ತನ್ನವರ ಮನದಲ್ಲಾದರೂ ಒಳ್ಳೆಯವನೆನೆಸಿ ಬಾಳಬೇಕು. ಸತ್ತ ಮೇಲೆ ಇಂತಹ ಮನುಷ್ಯ ಬದುಕಿರಬೇಕಿತ್ತು ಅನ್ನದಿದ್ದರೂ ಈತ ಸತ್ತದ್ದು ಒಳ್ಳೆಯದೇ ಆಯಿತು ಎನ್ನುವಂತಿರಬಾರದು.
# ಅಪೂರ್ವ ಚೇತನ್ ಪೆರಂದೋಡಿ