ಬೇಸಿಗೆ ಕಾಲದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ , ಕರೆಂಟ್ ಬಿಲ್ #ElectricityBill ದರ ಏರಿಕೆ ಆಗಾಗ..!, ರಾಜ್ಯದಲ್ಲಿ ಗೃಹಜ್ಯೋತಿ ಉಚಿತ ವಿದ್ಯುತ್ ವ್ಯವಸ್ಥೆ ಜಾರಿಗೆ ಬರುವುದಾಗಿ ಹೇಳಿದರು ಅದರಿಂದ ಯಾರಿಗೆ..? ಎಷ್ಟು..? ಪ್ರಯೋಜನ ಇದೆಯೋ ಇಲ್ಲವೋ..?. ಆದರೆ ವಿದ್ಯುತ್ ದರವಂತೂ ಏರಿಕೆ ಕಂಡಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಕೇಂದ್ರ ಸರ್ಕಾರ 2020ರ ವಿದ್ಯುತ್ ಗ್ರಾಹಕರ ಹಕ್ಕು ನಿಯಮಕ್ಕೆ ತಿದ್ದುಪಡಿ ತಂದಿದ್ದು ಅದಕ್ಕೆ ಅನುಮೋದನೆ ಕೂಡ ಸಿಕ್ಕಿದೆ. ವಿದ್ಯುತ್ ಬಳಕೆ ವಿಚಾರದಲ್ಲಿ ದಿನದ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ದರ ವಿಧಿಸುವಂತೆ ನಿಯಮ ಬದಲಾಯಿಸಲಾಗಿದೆ.
ಸೋಲಾರ್ ಅವರ್ ಅಥವಾ ಸೌರ ಗಂಟೆ ಎಂದು ಕರೆಯಲಾಗುವ ಅವಧಿಯಲ್ಲಿ ವಿದ್ಯುತ್ ದರ ಶೇ. 10ರಿಂದ 20ರಷ್ಟು ಕಡಿಮೆ ಇರುತ್ತದೆ. ಪೀಕ್ ಅವರ್ ಅಥವಾ ಉಚ್ಛ್ರಾಯ ಅವಧಿಯಲ್ಲಿ ಶೇ. 10ರಿಂದ ಶೇ. 20ರಷ್ಟು ಹೆಚ್ಚು ದರ ಇರಲಿದೆ. ಈ ಅವಧಿಯನ್ನು ರಾಜ್ಯ ವಿದ್ಯುತ್ ಪ್ರಾಧಿಕಾರಗಳು ನಿರ್ಧರಿಸುತ್ತವೆ.
ಸೌರ ಗಂಟೆಯಲ್ಲಿ ಯಾಕೆ ವಿದ್ಯುತ್ ದರ ಕಡಿಮೆ? : ಪೀಕ್ ಅವಧಿ, ಸೌರ ಅವಧಿ ಮತ್ತು ಸಹಜ ಅವಧಿ ಹೀಗೆ ವಿದ್ಯುತ್ ದರಗಳನ್ನು ವಿಭಾಗಿಸುವುದರಿಂದ ಗ್ರಾಹಕರು ವಿದ್ಯುತ್ ಬಳಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಭಾಯಿಸಬಹುದು. ಇದರಿಂದ ಗ್ರಾಹಕರಿಗೂ ಲಾಭ, ವಿದ್ಯುತ್ ಸರಬರಾಜು ವ್ಯವಸ್ಥೆಗೂ ಹೊರೆ ತಗ್ಗುತ್ತದೆ ಎಂಬುದು ಸರ್ಕಾರದ ಎಣಿಕೆ.
ಸೌರ ಗಂಟೆಗಳೆಂದರೆ ಅದು ಸೂರ್ಯನ ಬಿಸಿಲು ಇರುವ ಕಾಲಾವಧಿ. ಈ ಸಂದರ್ಭದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿರುತ್ತದೆ. ಇದರ ಬೆಲೆ ಕಡಿಮೆ ಇರುವುದರಿಂದ ವಿದ್ಯುತ್ ಬಳಕೆದಾರರಿಗೆ ಈ ಅವಧಿಯಲ್ಲಿನ ಬಳಕೆಗೆ ದರ ಕಡಿಮೆಗೊಳಿಸಲು ಉದ್ದೇಶಿಸಲಾಗಿದೆ. ಇನ್ನು ದಿನದ ಬೇರೆ ಕಾಲಾವಧಿಯಲ್ಲಿ ಜಲವಿದ್ಯುತ್ ಇತ್ಯಾದಿ ಮೂಲದಿಂದ ತಯಾರಾಗುವ ವಿದ್ಯುತ್ ಅನ್ನು ಬಳಸಲಾಗುತ್ತದೆ. ಇವು ಹೆಚ್ಚಿನ ಬೆಲೆ ಹೊಂದಿರುವುದರಿಂದ ಇದರ ಬಳಕೆಗೂ ಹೆಚ್ಚಿನ ದರ ಅನ್ವಯ ಮಾಡುವುದು ಸರ್ಕಾರದ ತಂತ್ರ.